ಶಿಕಾರಿಪುರದಿಂದ ವಿಜಯೇಂದ್ರ ಸ್ಪರ್ಧೆ

ಶಿವಮೊಗ್ಗ, ಜು. ೨೨: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಮ್ಮ ಪುತ್ರ ಬಿ.ವೈ. ವಿಜಯೇಂದ್ರ ರಾಜಕೀಯ ಭವಿಷ್ಯದ ವಿಚಾರವಾಗಿ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ತಾವು ಹಲವು ದಶಕಗಳಿಂದ ಸ್ಪರ್ಧೆ ಮಾಡುತ್ತಿರುವ ಶಿಕಾರಿಪುರ ಕ್ಷೇತ್ರವನ್ನು ಪುತ್ರ ವಿಜಯೇಂದ್ರಗೆ ಬಿಟ್ಟುಕೊಡುತ್ತಿದ್ದೇನೆ ಎಂದು ಘೋಷಿಸಿದ್ದಾರೆ. ನಾನು ಕ್ಷೇತ್ರ ಬಿಟ್ಟುಕೊಡುತ್ತಿರುವುದರಿಂದ ಶಿಕಾರಿಪುರದಲ್ಲಿ ವಿಜಯೇಂದ್ರ ಸ್ಪರ್ಧೆ ಮಾಡಲಿದ್ದಾರೆ. ಮೈಸೂರು ಭಾಗದಲ್ಲಿ ವಿಜಯೇಂದ್ರ ಸ್ಪರ್ಧೆಗೆ ಒತ್ತಡವಿದೆ. ಆದರೆ, ಇಲ್ಲಿ ಸ್ಥಾನ ತೆರವಾಗುವುದರಿಂದ ಅವರು ಸ್ಪರ್ಧಿಸುತ್ತಾರೆ ಎಂದರು. ಅಂಜನಾಪುರ ಜಲಾಶಯಕ್ಕೆ ಬಾಗಿನ ಸಲ್ಲಿಸಿದ ಬಳಿಕ ಮಾತನಾಡಿದ ಬಿಎಸ್‌ವೈ, ನಾನು ಕ್ಷೇತ್ರ ಬಿಟ್ಟುಕೊಡುತ್ತಿರುವುದರಿಂದ ಶಿಕಾರಿಪುರದಿಂದ ವಿಜಯೇಂದ್ರ ಸ್ಪರ್ಧೆ ಮಾಡಲಿದ್ದಾರೆ. ಕ್ಷೇತ್ರದ ಜನತೆ ನನಗಿಂತ ಹೆಚ್ಚಿನ ಅಂತರದಲ್ಲಿ ವಿಜಯೇಂದ್ರ ಅವರಿಗೆ ಗೆಲುವು ತಂದುಕೊಡಬೇಕು ಎಂದು ಮನವಿ ಮಾಡಿದರು. ಈ ಸಂಬAಧ ಪ್ರತಿಕ್ರಿಯೆ ನೀಡಿದ ವಿಜಯೇಂದ್ರ, ತಮ್ಮ ತಂದೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಯಾವ ರೀತಿ ಮಾರ್ಗದರ್ಶನ ಮಾಡುತ್ತಾರೆ. ಪಕ್ಷ ನಾಯಕರು ಯಾವ ನಿರ್ಧಾರ ಕೈಗೊಳ್ಳುತ್ತಾರೆ ಅದರಂತೆ ನಡೆಯುತ್ತೇನೆ ಎಂದು ಹೇಳಿದ್ದಾರೆ.

ಕೇರಳದಲ್ಲಿ ೩ನೇ ಮಂಕಿಪಾಕ್ಸ್ ಪ್ರಕರಣ ಪತ್ತೆ

ತಿರುವನಂತಪುರA, ಜು. ೨೨: ಕೇರಳದಲ್ಲಿ ಭಾರತದ ಮೂರನೇ ಮಂಕಿಪಾಕ್ಸ್ ಪ್ರಕರಣ ದಾಖಲಾಗಿದ್ದು, ಈ ಮೂಲಕ ಒಂದೇ ರಾಜ್ಯದಲ್ಲಿ ಮೂರು ಪ್ರಕರಣಗಳು ವರದಿಯಾಗಿವೆ. ಈ ತಿಂಗಳ ಆರಂಭದಲ್ಲಿ ಯುಎಇಯಿಂದ ಕೇರಳಕ್ಕೆ ಆಗಮಿಸಿದ ೩೫ ವರ್ಷದ ವ್ಯಕ್ತಿಯೊಬ್ಬರಿಗೆ ಮಂಗನ ಕಾಯಿಲೆ ದೃಢಪಟ್ಟಿದ್ದು, ಜನರು ಆತಂಕಕ್ಕೆ ಒಳಗಾಗಿದ್ದಾರೆ. ಜುಲೈ ೬ರಂದು ಯುಎಇಯಿಂದ ರಾಜ್ಯಕ್ಕೆ ಆಗಮಿಸಿದ ಮಲಪ್ಪುರಂ ಮೂಲದ ವ್ಯಕ್ತಿಗೆ ಮಂಕಿಪಾಕ್ಸ್ ಪಾಸಿಟಿವ್ ದೃಢಪಟ್ಟಿದ್ದು, ಅವರು ಮಂಜೇರಿ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ತಿಳಿಸಿದ್ದಾರೆ.

ಕೇರಳ ಹಾಗೂ ಯು.ಪಿ.ಯಲ್ಲಿ ಹಂದಿಜ್ವರ ಪತ್ತೆ

ನವದೆಹಲಿ, ಜು. ೨೨: ನೆರೆಯ ಕೇರಳದಲ್ಲಿ ದೇಶದ ಮೂರನೇ ಮಂಕಿಪಾಕ್ಸ್ ಪ್ರಕರಣ ಪತ್ತೆಯಾದ ಬೆನ್ನಲ್ಲೇ ಇತ್ತ ದೇಶದಲ್ಲಿ ಮತ್ತೆ ಹಂದಿಜ್ವರ ಭೀತಿ ಎದುರಾಗಿದ್ದು, ಕೇರಳದ ವಯನಾಡು ಮತ್ತು ಉತ್ತರ ಪ್ರದೇಶದ ಬರೇಲಿಯಲ್ಲಿ ಆಫ್ರಿಕನ್ ಹಂದಿಜ್ವರ ಪ್ರಕರಣಗಳು ವರದಿಯಾಗಿವೆ. ಕೇರಳದ ವಯನಾಡ್ ಜಿಲ್ಲೆಯ ಫಾರ್ಮ್ನಲ್ಲಿ ಆಫ್ರಿಕನ್ ಹಂದಿ ಜ್ವರ (ಎಎಸ್‌ಎಫ್) ವರದಿಯಾಗಿದೆ ಎಂದು ರಾಜ್ಯದ ಪಶುಸಂಗೋಪನಾ ಸಚಿವ ಜೆ. ಚಿಂಚುರಾಣಿ ಶುಕ್ರವಾರ ಹೇಳಿದ್ದು, ಇಲ್ಲಿಯವರೆಗೆ ಆಫ್ರಿಕನ್ ಹಂದಿ ಜ್ವರದ ಯಾವುದೇ ಅಧಿಕೃತ ಸಂಖ್ಯೆಗಳು ದೃಢಪಟ್ಟಿರಲಿಲ್ಲ. ಕೇರಳದಲ್ಲಿ ಇದು ಮೊದಲ ಪ್ರಕರಣವಾಗಿದ್ದು, ಸೋಂಕು ಪತ್ತೆ ಸ್ಥಳಕ್ಕೆ ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು ಜಮೀನಿಗೆ ಭೇಟಿ ನೀಡುತ್ತಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ. ಆಫ್ರಿಕನ್ ಹಂದಿ ಜ್ವರ ಹಂದಿಗಳಲ್ಲಿ ಜ್ವರ, ವಾಕರಿಕೆ ಮತ್ತು ಅತಿಸಾರವನ್ನು ಉಂಟುಮಾಡುತ್ತದೆ. ಈ ಹಿಂದೆ ಶಂಕೆ ಮೇರೆಗೆ ಸ್ಯಾಂಪಲ್ ಅನ್ನು ಪುಣೆಗೆ ರವಾನೆ ಮಾಡಲಾಗಿತ್ತು. ಇದರ ಫಲಿತಾಂಶ ಇದೀಗ ಲಭ್ಯವಾಗಿದ್ದು, ಜಿಲ್ಲೆಯ ಫಾರ್ಮ್ನಲ್ಲಿ ಹಂದಿಗಳಲ್ಲಿ ರೋಗ ದೃಢಪಟ್ಟಿರುವು ಖಚಿತವಾಗಿದೆ. ಉತ್ತರ ಪ್ರದೇಶದಲ್ಲೂ ಈ ಹಂದಿ ಜ್ವರ ಸೋಂಕು ಕಾಣಿಸಿಕೊಂಡಿದ್ದು, ಈ ಬಗ್ಗೆ ಮಾಹಿತಿ ನೀಡಿರುವ ಭಾರತೀಯ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆ (ಐವಿಆರ್‌ಐ) ಜಂಟಿ ನಿರ್ದೇಶಕ ಡಾ. ಪಿ. ಸಿಂಗ್ ಅವರು, ಉತ್ತರ ಪ್ರದೇಶದ ಬರೇಲಿಯ ನವಾಬ್‌ಗಂಜ್ ತಹಸಿಲ್‌ನ ಭಾದ್ಸರ್ ದಾಂಡಿಯಾ ಗ್ರಾಮದ ನಿವಾಸಿ ಅನಿಲ್ ಕುಮಾರ್ ಅವರ ಹಂದಿ ಈ ಕಾಯಿಲೆಯಿಂದ ಸಾವನ್ನಪ್ಪಿದೆ ಎಂದು ಹೇಳಿದ್ದಾರೆ.

ಶಾಲಾ ಮಕ್ಕಳಿಗೆ ಶೂ ಮತ್ತು ಸಾಕ್ಸ್

ಬೆಂಗಳೂರು, ಜು. ೨೨: ಶಾಲಾ ಮಕ್ಕಳಿಗೆ ಶೂ ಮತ್ತು ಸಾಕ್ಸ್ಗಳನ್ನು ಒದಗಿಸಲು ೧೩೨ ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಲು ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಪ್ರತಿ ಶಾಲಾ ಮಕ್ಕಳಿಗೆ ಒಂದು ಜೊತೆ ಕಪ್ಪು ಶೂ ಮತ್ತು ಎರಡು ಬಿಳಿ ಸಾಕ್ಸ್ಗಳನ್ನು ನೀಡಲಾಗುವುದು ಎಂದು ಸಂಪುಟ ಸಭೆ ನಂತರ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ. ಮಾಧುಸ್ವಾಮಿ ತಿಳಿಸಿದ್ದು, ಸುಮಾರು ೪೩ ಲಕ್ಷದ ೩೭ ಸಾವಿರ ವಿದ್ಯಾರ್ಥಿಗಳಿಗೆ ಶೂ, ಸಾಕ್ಸ್ಗಳನ್ನು ನೀಡಲಾಗುವುದು ಎಂದು ಅವರು ಮಾಹಿತಿ ನೀಡಿದರು. ರಾಜ್ಯದ ವಿವಿಧ ಕೈಗಾರಿಕೆಗಳು ಮತ್ತು ಉದ್ಯಮಗಳಲ್ಲಿ ಕನ್ನಡಿಗರಿಗೆ ಹೆಚ್ಚಿನ ಉದ್ಯೋಗ ಒದಗಿಸುವ ಹೊಸ ಉದ್ಯೋಗ ನೀತಿಗೆ ಸಂಪುಟ ಅನುಮೋದನೆ ನೀಡಿದೆ. ಕೈಗಾರಿಕೆಗಳ ಬಂಡವಾಳ ಹೂಡಿಕೆ ಆಧಾರದ ಮೇಲೆ ಕನ್ನಡಿಗರಿಗೆ ಇಂತಿಷ್ಟೇ ಹುದ್ದೆಗಳನ್ನು ನೀಡಬೇಕು ಎಂಬ ಅಂಶಗಳನ್ನು ಹೊಸ ಉದ್ಯೋಗ ನೀತಿಯಲ್ಲಿ ಅಳವಡಿಸಲಾಗಿದೆ ಎಂದು ಅವರು ಹೇಳಿದರು.

ಮತಾಂತರ ನಿಷೇಧ ಕಾಯ್ದೆ-ಸರಕಾರಕ್ಕೆ ಹೈಕೋರ್ಟ್ ನೋಟೀಸ್

ಬೆಂಗಳೂರು, ಜು. ೨೨: ರಾಜ್ಯ ಸರ್ಕಾರ ಹೊರಡಿಸಿದ ಧಾರ್ಮಿಕ ಸ್ವಾತಂತ್ರ‍್ಯದ ಹಕ್ಕು ಸಂರಕ್ಷಣಾ ಕಾಯ್ದೆಗೆ (ಮತಾಂತರ ನಿಷೇಧ) ಸುಗ್ರೀವಾಜ್ಞೆ, ೨೦೨೨ ರ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್)ಯ ವಿಚಾರಣೆ ನಡೆಸಿದ ಹೈಕೋರ್ಟ್, ಈ ಸಂಬAಧ ಶುಕ್ರವಾರ ರಾಜ್ಯ ಸರ್ಕಾರಕ್ಕೆ ನೋಟೀಸ್ ಜಾರಿ ಮಾಡಿದೆ. ಮತಾಂತರ ನಿಷೇಧ ಕಾಯ್ದೆ ಅಸಹಿಷ್ಣುತೆಯನ್ನು ಪ್ರದರ್ಶಿಸುತ್ತದೆ. ಭಾರತೀಯ ಪ್ರಜಾಪ್ರಭುತ್ವವನ್ನು ಒಟ್ಟಿಗೆ ಹಿಡಿದಿಟ್ಟುಕೊಳ್ಳುವ ಜಾತ್ಯತೀತೆಯ ಮೇಲಿನ ದಾಳಿ ಎಂದು ಪಿಐಎಲ್‌ನಲ್ಲಿ ಆರೋಪಿಸಲಾಗಿದೆ. ದೆಹಲಿ ಮೂಲದ ಇವಾನೆಲಿಕಲ್ ಫೆಲೋಶಿಪ್ ಆಫ್ ಇಂಡಿಯಾ ಮತ್ತು ಆಲ್ ಕರ್ನಾಟಕ ಯುನೈಟೆಡ್ ಕ್ರಿಶ್ಚಿಯನ್ ಫೋರಮ್ ಫಾರ್ ಹ್ಯೂಮನ್ ರೈಟ್ಸ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ ಮತ್ತು ನ್ಯಾಯಮೂರ್ತಿ ಜೆಎಂ ಖಾಜಿ ಅವರ ವಿಭಾಗೀಯ ಪೀಠ, ಈ ಸಂಬAಧ ಗೃಹ ಇಲಾಖೆ ಕಾರ್ಯದರ್ಶಿ ಮತ್ತು ಕಾನೂನು ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ನೋಟೀಸ್ ಜಾರಿ ಮಾಡಿದೆ ಮತ್ತು ನಾಲ್ಕು ವಾರಗಳಲ್ಲಿ ಆಕ್ಷೇಪಣೆಗಳನ್ನು ಸಲ್ಲಿಸುವಂತೆ ಸೂಚಿಸಿದೆ.

ಅಬಕಾರಿ ನೀತಿಯಲ್ಲಿ ಲೋಪ - ತನಿಖೆಗೆ ಶಿಫಾರಸು

ನವದೆಹಲಿ, ಜು. ೨೨: ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರು ಅರವಿಂದ್ ಕೇಜ್ರಿವಾಲ್ ಸರ್ಕಾರದ ಅಬಕಾರಿ ನೀತಿ, ೨೦೨೧-೨೨ರ ನಿಯಮಗಳ ಉಲ್ಲಂಘನೆ ಮತ್ತು ಕಾರ್ಯವಿಧಾನದ ಲೋಪಗಳ ಕುರಿತು ಸಿಬಿಐ ತನಿಖೆಗೆ ಶಿಫಾರಸು ಮಾಡಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ. ಜಿಎನ್ ಸಿಟಿಡಿ ಕಾಯಿದೆ ೧೯೯೧, ವ್ಯವಹಾರ ನಿಯಮಗಳ ವಹಿವಾಟು-೧೯೯೩, ದೆಹಲಿ ಅಬಕಾರಿ ಕಾಯ್ದೆ-೨೦೦೯ ಮತ್ತು ದೆಹಲಿ ಅಬಕಾರಿ ನಿಯಮಗಳು-೨೦೧೦ ಅನ್ನು ಉಲ್ಲಂಘಿಸಲಾಗಿದೆ ಎಂದು ದೆಹಲಿ ಮುಖ್ಯ ಕಾರ್ಯದರ್ಶಿಯವರು ನೀಡಿದ ವರದಿಯ ಆಧಾರದ ಮೇಲೆ ಈ ತಿಂಗಳ ಆರಂಭದಲ್ಲಿ ಸಿಬಿಐ ತನಿಖೆಗೆ ಶಿಫಾರಸು ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದರ ಹೊರತಾಗಿ ಟೆಂಡರ್ ನಂತರ ಮದ್ಯ ಪರವಾನಗಿದಾರರಿಗೆ ಅನಗತ್ಯ ಪ್ರಯೋಜನಗಳನ್ನು ಒದಗಿಸಲು ಉದ್ದೇಶಪೂರ್ವಕ ಮತ್ತು ಸಮಗ್ರ ಕಾರ್ಯವಿಧಾನದ ಲೋಪಗಳು ಇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೈಪರ್ ಸಾನಿಕ್ ಕ್ಷಿಪಣಿ ಯಶಸ್ವಿ ಉಡಾವಣೆ

ಅಮೇರಿಕಾ, ಜು. ೨೨: ಅಮೇರಿಕಾ ಇತ್ತೀಚೆಗೆ ತನ್ನ ರಕ್ಷಣಾ ಕ್ಷೇತ್ರದಲ್ಲಿ ಇನ್ನೊಂದು ಮಹತ್ತರ ಸಾಧನೆ ಮೆರೆದಿದೆ. ಅಮೇರಿಕಾ ರೇಥಿಯಾನ್ ಟೆಕ್ನಾಲಜೀಸ್ ಕಾರ್ಪೋರೇಷನ್ ಸಂಸ್ಥೆ ನಿರ್ಮಿಸಿರುವ, ಶಬ್ಧದ ವೇಗಕ್ಕಿಂತ ಐದುಪಟ್ಟು ಹೆಚ್ಚಿನ ವೇಗದಲ್ಲಿ ಸಾಗುವ ಏರ್ ಬ್ರೀದಿಂಗ್ ಹೈಪರ್ ಸಾನಿಕ್ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಾ ಉಡಾವಣೆ ನಡೆಸಿದೆ. ಇದು ೨೦೧೩ರ ಬಳಿಕ ನಡೆದ ಈ ವರ್ಗದ ಮೂರನೇ ಯಶಸ್ವಿ ಉಡಾವಣೆಯಾಗಿದ್ದು, ಈ ಪ್ರಯೋಗ ಅತ್ಯಂತ ಯಶಸ್ವಿಯಾಗಿದೆ ಎಂದು ಅಮೇರಿಕಾದ ರಕ್ಷಣಾ ಪ್ರಧಾನ ಕಚೇರಿ ಪೆಂಟಗಾನ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.