ನಾಪೋಕ್ಲು, ಜು. ೨೨: ನಾಪೋಕ್ಲು - ಮಡಿಕೇರಿ ರಸ್ತೆ ನಡುವಿನ ಬೆಟ್ಟಗೇರಿ ಸಮೀಪದ ತಳೂರು ಮನೆಯ ಬಳಿ ತಿರುವಿನಲ್ಲಿ ಐರಾವತ ಬಸ್ಸೊಂದು ಕೆಟ್ಟುನಿಂತ ಪರಿಣಾಮ ಸುಮಾರು ೬ ಗಂಟೆಗಳ ಕಾಲ ಪ್ರಯಾಣಿಕರು, ವಿದ್ಯಾರ್ಥಿಗಳು, ಉದ್ಯೋಗಸ್ಥರು ಪರದಾಡಿದ ಘಟನೆ ನಡೆದಿದೆ.
ಮಡಿಕೇರಿಯ ಜಿಲ್ಲಾಡಳಿತದ ತಡೆಗೋಡೆ ಸಮಸ್ಯೆಯಿಂದಾಗಿ ವಾಹನಗಳನ್ನು ಪರ್ಯಾಯ ರಸ್ತೆಯಲ್ಲಿ ಸಂಚರಿಸುತ್ತಿರುವ ಹಿನ್ನೆಲೆ ಕಿರಿದಾದ ರಸ್ತೆಯಲ್ಲಿ ತಾಂತ್ರಿಕ ಸಮಸ್ಯೆಯಿಂದ ಬಸ್ ನಿಂತ ಪರಿಣಾಮ ವಾಹನ ಸಂಚಾರಕ್ಕೆ ಅಡಚಣೆಯಾಯಿತು. ಶುಕ್ರವಾರ ಬೆಳಗ್ಗಿನಿಂದ ಈ ರಸ್ತೆಯಲ್ಲಿ ಭಾಗಮಂಡಲ ನಾಪೋಕ್ಲು, ಬೆಟ್ಟಗೇರಿ ಮತ್ತಿತರ ಭಾಗಗಳಿಗೆ ಸಂಚರಿಸಬೇಕಿದ್ದ ವಾಹನಗಳು ಕಿ.ಮೀಗಟ್ಟಲೆ ರಸ್ತೆಯುದ್ದಕ್ಕೂ ಸಾಲುಗಟ್ಟಿ ನಿಲ್ಲಬೇಕಾದ ಪ್ರಸಂಗ ಉಂಟಾಯಿತು. ಬೆಳಿಗ್ಗೆ ೪ ಗಂಟೆಯಿAದ ೧೧ ಗಂಟೆಯವರೆಗೂ ವಾಹನ ತೆರವುಗೊಳಿಸಲು ಕಾಲಾವಕಾಶ ತೆಗೆದುಕೊಂಡದ್ದರಿAದ ರಸ್ತೆಯಲ್ಲಿ ವಾಹನ ಸವಾರರು ಪರದಾಡಿದರು.
ಜಿಲ್ಲಾಡಳಿತ ಭವನದ ತಡೆಗೋಡೆ ಸಮಸ್ಯೆಯಿಂದ ವಾಹನಗಳ ಸಂಚಾರಕ್ಕೆ ಮೇಕೇರಿ ಬೈಪಾಸ್ಗಾಗಿ ಸಂಪರ್ಕಕ್ಕೆ ಅವಕಾಶ ಒದಗಿಸಲಾಗಿತ್ತು. ಆದರೆ ಈ ರಸ್ತೆಯಲ್ಲೂ ಭೂಕುಸಿತ ಉಂಟಾಗಿ ಲಘು ವಾಹನಗಳಿಗೆ ಮಾತ್ರ ಸಂಚಾರ ವ್ಯವಸ್ಥೆ ಕಲ್ಪಿಸಿದ್ದು ಬೆಂಗಳೂರು ಹಾಗೂ ಮೈಸೂರು ಭಾಗಗಳಿಂದ ಬರುವ ಸರ್ಕಾರಿ ಬಸ್ಗಳಿಗೆ ಕಾಟಕೇರಿ ಬೆಟ್ಟಗೇರಿ ಮೂರ್ನಾಡು ಮೂಲಕ ಸಂಚಾರ ವ್ಯವಸ್ಥೆ ಮಾಡಲಾಗಿದೆ. ಸಾಕಷ್ಟು ಪ್ರಯಾಣಿಕರು ಸಮಸ್ಯೆಯಲ್ಲಿ ಸಿಲುಕಿದ್ದು ಕ್ರೇನ್ ಮೂಲಕ ಐರಾವತ ಬಸ್ಸನ್ನು ೧೧ ಗಂಟೆಗೆ ತೆರವು ಮಾಡಿದ ಬಳಿಕ ಸಂಚಾರ ಸುಗಮಗೊಂಡಿತು. - ದುಗ್ಗಳ