ಹೊದ್ದೂರು, ಜು. ೨೦: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮವು ಮಾರ್ಗ ಕನಿಷ್ಟ ಬಿಲ್ಲನ್ನು ವಸೂಲಿ ಮಾಡುತ್ತಿದೆ. ಅದಕ್ಕೆ ಪ್ರತಿಯಾಗಿ ಬಳಕೆದಾರರಿಗೆ ಪ್ರತಿದಿನವೂ ಕನಿಷ್ಟ ೧೪-೧೫ ಘಂಟೆಗಳ ಕಾಲ ನಿರಂತರ ವಿದ್ಯುತ್ ನೀಡಬೇಕು. ವಿದ್ಯುತ್ ಶುಲ್ಕ ಸಂಗ್ರಹದಷ್ಟೇ ಪ್ರಾಮುಖ್ಯತೆಯನ್ನು ವಿದ್ಯುತ್ ನೀಡಲೂ ನೀಡಬೇಕು. ವಿದ್ಯುತ್ ಪ್ರಸರಣಕ್ಕೆ ಆಗುವ ಅಡೆತಡೆಗಳನ್ನು ಮಳೆಗಾಲಕ್ಕೂ ಮುನ್ನಾ ನಿವಾರಿಸಬೇಕು. ಇದಕ್ಕಾಗಿ ಬೆಳೆಗಾರರ, ಪಂಚಾಯಿತಿಗಳ ಮತ್ತು ಗ್ರಾಹಕರ ನೆರವು ಪಡೆಯಬೇಕು ಎಂದು ವಿದ್ಯುತ್ ಬಳಕೆದಾರರು ಆಗ್ರಹಿಸಿದರು.

ಮೂರ್ನಾಡಿನ ಸೆಸ್ಕ್ ಕಚೇರಿಯ ಮುಂಭಾಗದ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಆಯೋಜಿತವಾಗಿದ್ದ “ವಿದ್ಯುತ್ ಅದಾಲತ್”ನಲ್ಲಿ ಬೇಡಿಕೆಗಳ ಕೂಗು ಕೇಳಿಬಂತು. ಕಳೆದ ವರ್ಷದಿಂದಲೇ ಪಡಿತರ ಸೀಮೆಎಣ್ಣೆ ವಿತರಣೆಯಾಗುತ್ತಿಲ್ಲ. ಕನಿಷ್ಟ ವಿದ್ಯುತ್ ಸರಬರಾಜಿಲ್ಲದೆ ಬಳಕೆದಾರರು ಕತ್ತಲಕೂಪದಲ್ಲಿ ದಿನ ಕಳೆಯುತ್ತಿದ್ದಾರೆ. ವ್ಯಾಸಂಗ ನಿರತ ವಿದ್ಯಾರ್ಥಿಗಳಿಗೆ, ಗೃಹಿಣಿಯರಿಗೆ ಸಮಸ್ಯೆಯಾಗುತ್ತಿದೆ. ಸೆಸ್ಕ್ ಪ್ರತಿದಿನ ಕನಿಷ್ಟ ವಿದ್ಯುತ್ ಸರಬ ರಾಜು ಮಾಡಲು ವಿಫಲವಾದಲ್ಲಿ, ಮಾರ್ಗ ಕನಿಷ್ಟ ಶುಲ್ಕ ತೆಗೆಯಬೇಕು. ಬಳಕೆದಾರರು ಬಳಸಿದ ವಿದ್ಯುತ್‌ಗೆ ಮಾತ್ರ ಶುಲ್ಕ ನಿಗದಿ ಮಾಡುವಂತೆ ಹೊದ್ದೂರು ಪಂಚಾಯಿತಿ ವಿದ್ಯುತ್ ಬಳಕೆದಾರರ ಸಂಘದ ಅಧ್ಯಕ್ಷ ಕೂಡಂಡ ರವಿ ಒತ್ತಾಯಿಸಿದರು.

ಮೂರ್ನಾಡು ಉಪ ವಿಭಾಗದ ಶಾಖಾಧಿಕಾರಿ ಆಯಾ ಗ್ರಾಮ ಪಂಚಾಯಿತಿಗಳ ಗ್ರಾಮ ಸಭೆಗಳಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು. ಕಮಿಟಿ ಸಭೆಗಳಲ್ಲಿ ಕೇಳಿ ಬರುವ ದೂರುಗಳನ್ನು ಸಕಾಲಿಕವಾಗಿ ಪರಿಹರಿಸಬೇಕು. ಮಳೆಗಾಲಕ್ಕೆ ಅಗತ್ಯ ಸಿಬ್ಬಂದಿಗಳನ್ನು ನಿಯೋಜಿಸಿ ಕೊಳ್ಳಬೇಕು. ನೆಪಗಳನ್ನು ಗ್ರಾಹಕರಿಗೆ ಹೇಳದೆ ನಿರಂತರ ವಿದ್ಯುತ್ ಸರಬರಾಜಿಗೆ ಕ್ರಮ ವಹಿಸಬೇಕು ಎಂದು ಹಲವಾರು ಗ್ರಾಹಕರು ಒತ್ತಾಯಿಸಿದರು.

ಮಡಿಕೇರಿ ಉಪ ವಿಭಾಗದ ಕಿರಿಯ ಸಹಾಯಕ ಅಭಿಯಂತರ ವಿನಯ್ ಕುಮಾರ್ ಮಾತನಾಡಿ, ಗ್ರಾಹಕರ ಸಮಸ್ಯೆಗಳನ್ನು ಪರಿಹರಿಸುವ ಸಲುವಾಗಿಯೇ ವಿದ್ಯುತ್ ಅದಾಲತ್ ನಡೆಸಲಾಗುತ್ತಿದೆ. ಸಮಸ್ಯೆಗಳನ್ನು ಹಂತ-ಹAತವಾಗಿ ಪರಿಹರಿಸಲಾಗುವುದು. ವಿದ್ಯುತ್ ಬಳಕೆದಾರರು ತಮ್ಮಲ್ಲಿ ಗುಂಪು ಮಾಡಿಕೊಂಡು ಆಯಾ ಸಮಸ್ಯೆಗಳನ್ನು ಅಧಿಕಾರಿ ವರ್ಗದವರ ಗಮನಕ್ಕೆ ತರುವಂತೆ ಸಲಹೆ ನೀಡಿದರು. ಇದರಿಂದ ಸಮಸ್ಯೆಗಳ ಸಕಾಲಿಕ ಪರಿಹಾರಕ್ಕೆ ಅನುಕೂಲವಾಗಲಿದೆ ಎಂದರು.

ಹೊದ್ದೂರು ಪಂಚಾಯಿತಿ ಅಧ್ಯಕ್ಷೆ ಕುಸುಮಾವತಿ, ಸದಸ್ಯರುಗಳಾದ ಹೆಚ್.ಕೆ. ಮೊಣ್ಣಪ್ಪ, ಎಂ.ಬಿ. ಹಮೀದ್, ಮೂರ್ನಾಡು ಪಂಚಾಯಿತಿ ಮಾಜಿ ಅಧ್ಯಕ್ಷ ಪಳಗಂಡ ಅಪ್ಪಣ್ಣ, ಕೆರೆಮನೆ ಸತ್ಯನಾರಾಯಣ, ಹಾಕತ್ತೂರಿನ ಅಂಬಾಡಿರ ಕಾರ್ಯಪ್ಪ, ಹೊದ್ದೂರಿನ ನೆರವಂಡ ರವಿ, ಮುಂತಾದವರು ವಿವಿಧ ಸಮಸ್ಯೆಗಳನ್ನು ಸಭೆಯಲ್ಲಿ ವಿವರಿಸಿದರು.

ಮೂರ್ನಾಡು ಶಾಖಾಧಿಕಾರಿ ಪ್ರಕಾಶ್, ಮಡಿಕೇರಿ ಉಪ ವಿಭಾಗದ ಶಾಖಾಧಿಕಾರಿ ಸಂಪತ್, ಸಹಾಯಕ ಲೆಕ್ಕಾಧಿಕಾರಿ ಸಂತೋಷ್ ಕುಮಾರ್, ಸಹಾಯಕ ತಾಂತ್ರಿಕ ಅಭಯಂತರೆ ರಾಜೇಶ್ವರಿ ಸಭೆಯಲ್ಲಿ ಹಾಜರಿದ್ದು ಗ್ರಾಹಕರ ಸಮಸ್ಯೆಗಳನ್ನು ಆಲಿಸಿದರು.