ಶನಿವಾರಸಂತೆ, ಜು. ೨೧: ಸಮೀಪದ ಕೊಡ್ಲಿಪೇಟೆಯ ಬಸ್ ನಿಲ್ದಾಣದಲ್ಲಿ ಕೆಲ ದಿನಗಳಿಂದ ಅನಾಥವಾಗಿದ್ದ ವೃದ್ಧ ಮಹಿಳೆಯನ್ನು ಗ್ರಾಮ ಪಂಚಾಯಿತಿ ಸಹಕಾರದೊಂದಿಗೆ ಕರವೇ ತಾಲೂಕು ಘಟಕದ ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ ಹಾಗೂ ಇತರ ಕಾರ್ಯಕರ್ತರು ಕೂಡಿಗೆಯ ಶಕ್ತಿ ವೃದ್ಧಾಶ್ರಮಕ್ಕೆ ಸೇರಿಸಿ ಮಾನವೀಯತೆ ಮೆರೆದಿದ್ದಾರೆ.

ಸುರಿಯುತ್ತಿರುವ ಮಳೆಯ ನಡುವೆ ವೃದ್ಧ ಮಹಿಳೆ ಬಸ್ ನಿಲ್ದಾಣದ ಮಳಿಗೆಗಳ ಮುಂಭಾಗ ಮಲಗುತ್ತಿದ್ದುದನ್ನು ಗಮನಿಸಿದ ಸಾರ್ವಜನಿಕರು ಊಟ-ತಿಂಡಿ ನೀಡುತ್ತಿದ್ದು, ಗ್ರಾಮ ಪಂಚಾಯಿತಿ ಸದಸ್ಯರ ಗಮನಕ್ಕೆ ತಂದರು. ಸ್ಪಂದಿಸಿದ ಪಂಚಾಯಿತಿ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ, ವಾಹನ ವ್ಯವಸ್ಥೆ, ಇತರೆ ವ್ಯವಸ್ಥೆಗಳನ್ನು ಮಾಡಿ ಕರವೇ ತಾಲೂಕು ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ ನೇತೃತ್ವದಲ್ಲಿ ಶಕ್ತಿ ವೃದ್ಧಾಶ್ರಮಕ್ಕೆ ಸೇರಿಸಲಾಯಿತು ಎಂದು ಪಿಡಿಓ ಹೂವಯ್ಯ ತಿಳಿಸಿದರು.

ಕೊಡ್ಲಿಪೇಟ್ ಪಂಚಾಯಿತಿ ಅಧ್ಯಕ್ಷ ಶೋಭಿತ್ ಗೌಡ, ಸದಸ್ಯರಾದ ಕೆ.ಆರ್. ಚಂದ್ರಶೇಖರ್, ಪ್ರಸನ್ನ, ನಂದೀಶ್, ಶೇಖರ್, ಬ್ಯಾಡಗೊಟ್ಟ ಪಂಚಾಯಿತಿ ಸದಸ್ಯ ಎಂ.ಎA. ಹನೀಫ್, ಬಿಲ್ ಸಂಗ್ರಾಹಕ ದೀಪಕ್, ಸಿಬ್ಬಂದಿ ನಾಗೇಶ್, ಆರೋಗ್ಯ ಕೇಂದ್ರದ ಶುಶ್ರೂಷಕಿ ನಂದಿನಿ ಇತರರು ಇದ್ದರು.