ವೀರಾಜಪೇಟೆ, ಜು. ೨೧: ಸತತ ದಿನಗಳಿಂದ ವಿದ್ಯುತ್ ಕಡಿತಗೊಂಡಿದ್ದ ಸಮಸ್ಯೆಯನ್ನು ಸೆಸ್ಕ್ ಸಿಬ್ಬಂದಿಗಳು ಎರಡು ದಿನಗಳ ಎಡೆಬಿಡದ ಕಾರ್ಯಾಚರಣೆ ಮೂಲಕ ಸರಿಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವೀರಾಜಪೇಟೆ ಕೆದಮುಳ್ಳೂರು ೧೧ ಕೆ.ವಿ ಲೈನ್ ( ಪಾಲಂಗಾಲ ಫಿಡರ್) ನಲ್ಲಿ ದೋಷ ಉಂಟಾಗಿ ಸತತ ಎರಡು ಮೂರು ದಿನಗಳಿಂದ ಕೆದಮುಳ್ಳೂರು ಗ್ರಾಮದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡು ಗ್ರಾಮವೇ ಕತ್ತಲಿನಲ್ಲಿ ಮುಳುಗಿತ್ತು. ಎನ್.ಡಿ.ಆರ್.ಎಫ್ ತಂಡ ಮತ್ತು ಸೆಸ್ಕ್ ಇಲಾಖಾ ಸಿಬ್ಬಂದಿಗಳ ಎರಡು ದಿನಗಳ ಹರಸಾಹಸದ ಕಾರ್ಯಾಚರಣೆಯ ಫಲವಾಗಿ ಇದೀಗ ವಿದ್ಯುತ್ ಸಂಪರ್ಕ ಗ್ರಾಮಕ್ಕೆ ಒದಗಿದೆ. ದೋಷ ಕಂಡು ಹಿಡಿಯಲು ಪ್ರಯತ್ನ ಮಾಡಿದ ಇಲಾಖೆಯ ಸಿಬ್ಬಂದಿಗಳು. ಪಾಲಂಗಾಲ ಬೇಟೋಳಿ ಮಾರ್ಗವಾಗಿ ಕೊಟ್ಟೋಳಿ ಭಾಗದ ಪಟ್ಟಡ ದೇವಯ್ಯ ಅವರ ಗದ್ದೆಯ ಸಮೀಪ ಹರಿದು ಹೋಗುವ ಕಿರು ಹೊಳೆಯ ಸಮೀಪದ ವಿದ್ಯುತ್ ತಂತಿಯ ಮೇಲ್ಭಾಗದಲ್ಲಿ ಬಿದಿರಿನ ಪೊದೆಯೊಂದು ಅಡ್ಡಲಾಗಿ ಬಿದ್ದ ಪರಿಣಾಮ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದನ್ನು ಪತ್ತೆ ಮಾಡಿದರು.

ಬಿದಿರಿನ ಪೊದೆಯನ್ನು ತೆರವುಗೊಳಿಸಲು ಕಷ್ಟಸಾಧ್ಯವಾದ ಕಾರಣ ಇಲಾಖೆಯು ಆಗ್ನಿಶಾಮಕ ದಳವನ್ನು ಸಂಪರ್ಕಿಸಿತ್ತು. ಅಗ್ನಿ ಶಾಮಕ ದಳವು ಸ್ಥಳಕ್ಕೆ ಆಗಮಿಸಿ ಯಾವುದೇ ಕಾರ್ಯಾಚರಣೆ ನಡೆಸದೆ ಹಿಂದಿರುಗಿತ್ತು. ವೀರಾಜಪೇಟೆ ಸಹಾಯಕ ಕಾರ್ಯಪಾಲ ಅಭಿಯಂತರರಾದ ಪಿ.ಎಸ್. ಸುರೇಶ್ ಕುಮಾರ್ ಅವರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ವಿಷಯವನ್ನು ಪ್ರಸ್ತಾಪಿಸಿದ್ದರು. ಜಿಲ್ಲಾಧಿಕಾರಿಗಳು ತಕ್ಷಣವೇ ಎನ್.ಡಿ.ಆರ್.ಎಫ್ ತಂಡಕ್ಕೆ ಮಾಹಿತಿ ನೀಡಿದರು. ಎನ್.ಡಿ.ಆರ್.ಎಫ್ ತಂಡವು ತಕ್ಷಣವೇ ಕಾರ್ಯಪ್ರವೃತರಾಗಿ ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ಮುಂದವರೆಸಿದರು.

ಮೊದಲ ದಿನ ಕತ್ತಲೆ ಅವರಿಸಿದ್ದರಿಂದ ಕಾರ್ಯಾಚರಣೆ ಸ್ಥಗಿತಗೊಳಿಸಿ ಮಡಿಕೇರಿ ಶಿಬಿರಕ್ಕೆ ಮರಳಿದರು. ಮರು ದಿನ ಬೆಳಿಗ್ಗೆ ೯ ರಿಂದ ವಿದ್ಯುತ್ ಇಲಾಖೆಯ ಮೂರು ಸಿಬ್ಬಂದಿಗಳೊAದಿಗೆ ಎನ್.ಡಿ.ಆರ್.ಎಫ್. ತಂಡದ ಸಿಬ್ಬಂದಿಗಳು ವಿಶಾಲವಾಗಿ ಹರಿಯುತ್ತಿದ್ದ ಕಿರು ಹೊಳೆಯಲ್ಲಿ ಬಿದಿರಿನ ಪೊದೆಗಳನ್ನು ಕಠಾವುಗೊಳಿಸಿದರು. ಸತತ ೬ ಗಂಟೆಗಳ ಕಾರ್ಯಾಚರಣೆಯ ಮೂಲಕ ವಿದ್ಯುತ್ ತಂತಿಗಳ ಮೇಲೆ ಅಡ್ಡಲಾಗಿ ಬಿದ್ದಿರುವ ಬಿದಿರನ್ನು ತೆರವುಗೊಳಿಸಿದರು.

ಇಲ್ಲಿ ಗಮನಾರ್ಹ ವಿಷಯವೆಂದರೆ ಚೆಸ್ಕಾಂ ಇಲಾಖೆಯ ಸಿಬ್ಬಂದಿಗಳಿಗೆ ಈಜು ಬಾರದಿರುವುದು. ಎನ್.ಡಿ.ಆರ್.ಎಫ್ ತಂಡವು ಇಲಾಖೆಯ ಮೂರು ಮಂದಿಗೆ ಈಜಿನ ತಂತ್ರಗಾರಿಕೆಗಳನ್ನು ತಿಳಿಸಿಕೊಟ್ಟ ನಂತರದಲ್ಲಿ ಧೈರ್ಯ ತುಂಬಿ ಕಿರು ನದಿಯ ಪಾತ್ರದ ಮೂಲಕ ಕರೆದುಕೊಂಡು ಹೋದರು. ಇಲಾಖೆಯ ಸಿಬ್ಬಂದಿಗಳು ಹರಿಯುತ್ತಿರುವ ನದಿಯಲ್ಲೇ ನಿಂತು ನದಿಯಪಾತ್ರದಲ್ಲಿರುವ ಬಿದಿರನ್ನು ಕಡಿದು ಹಿಂದಿರುಗಿದರು.

ಕೆದಮುಳ್ಳೂರು ಕಾಳಜಿ ಕೇಂದ್ರ ಸೇರಿದಂತೆ ಕೆದಮುಳ್ಳೂರು, ಪಾಲಂಗಾಲ, ಕೊಟ್ಟೋಳಿ, ಗುಂಡಿಕೆರೆ ತೋಮರ ಭಾಗಗಳಲ್ಲಿ ಎರಡು ದಿನಗಳಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ನದಿಯ ಪಾತ್ರದಲ್ಲಿ ವಿದ್ಯುತ್ ತಂತಿಯ ಮೇಲೆ ಬಿದಿರು ಅಡ್ಡಲಾಗಿ ಬಿದ್ದು ವಿದ್ಯುತ್ ಸಂಪರ್ಕ ಕಡಿತವಾಗಿತ್ತು. ಎನ್.ಡಿ.ಆರ್.ಎಫ್ ತಂಡ ಮತ್ತು ಇಲಾಖೆಯ ಸಿಬ್ಬಂದಿಗಳಾದ ಮಂಜುನಾಥ್ ಪಟ್ಟದ್, ಹನುಮಂತ್ ಮತ್ತು ನಿಂಗನ ಗೌಡ ಪಾಟೀಲ ಅವರುಗಳ ಎರಡು ದಿನಗಳ ಪರಿಶ್ರಮದಿಂದಾಗಿ ಗ್ರಾಮಕ್ಕೆ ಮರು ವಿದ್ಯುತ್ ಸರಬರಾಜು ಮಾಡಲು ಸಾಧ್ಯವಾಯಿತು. ಜೀವದ ಹಂಗು ತೊರೆದು ಕಾರ್ಯನಿರ್ವಹಿಸಿದ ಸಿಬ್ಬಂದಿಗಳಿಗೆ ಇಲಾಖೆಯ ವತಿಯಿಂದ ಅಭಿನಂದನೆಗಳನ್ನು ಸಲ್ಲಿಸುವದಾಗಿ ಸಹಾಯಕ ಕಾರ್ಯಪಾಲಕ ಪಿ.ಎಸ್. ಸುರೇಶ್ ಹೇಳಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿಯಿಂದ ಬಂದ ಮಾಹಿತಿ ಮೇರೆಗೆ ಆಗಮಿಸಿ ಸ್ಥಳ ಪರಿಶೀಲನೆ ಮಾಡಿ ಕಾರ್ಯಾಚರಣೆಗೆ ಮುಂದಾಗಿದ್ದೇವೆ. ಅಂದು ಸಂಜೆಯಾದ ಕಾರಣ ಕಾರ್ಯಾಚರಣೆ ಸ್ಥಗಿತಗೊಳಿಸಿ ಶಿಬಿರಕ್ಕೆ ಹಿಂದಿರುಗಿದ್ದೇವೆ. ಮರು ದಿನ ಬೆಳಿಗ್ಗಿನಿಂದಲೇ ಕಾರ್ಯಾಚರಣೆ ಆರಂಭವಾಯಿತು. ಇಲಾಖೆ ಅಭಿಯಂತರ ಸುರೇಶ್ ಅವರ ಮಾರ್ಗದರ್ಶನದಲ್ಲಿ ಸಿಬ್ಬಂದಿಗಳ ಸಹಕಾರದಿಂದ ಸತತ ೬ ಗಂಟೆಯ ಶ್ರಮದಿಂದ ಅಡಚಣೆಯಾಗಿದ್ದ ಬಿದಿರನ್ನು ತೆರವುಗೊಳಿಸಲಾಯಿತು ಎಂದು ಎನ್.ಡಿ.ಆರ್.ಎಫ್ ಅಧಿಕಾರಿ ರಾಂಬಜ್ ತಿಳಿಸಿದರು.

ಎನ್.ಡಿ.ಆರ್.ಎಫ್ ತಂಡದ ಉಪ ನಿರೀಕ್ಷಕರಾದ ಶಾಂತಿಲಾಲ್ ಜಾಟೀಯ, ಸಹಾಯಕ ಅಭಿಯಂತರ ಸಿ.ಬಿ. ದೇವಯ್ಯ, ಪವರ್ ಮ್ಯಾನ್ ಗಳಾದ ಮಂಜುನಾಥ್ ಪಟ್ಟದ್, ಹನುಮಂತ್, ನಿಂಗನ ಗೌಡ ಪಾಟೀಲ, ವಿದ್ಯುತ್ ಗುತ್ತಿಗೆದಾರರಾದ ಭರತ್‌ಕುಮಾರ್ ಪೂಜಾರಿ, ಗದ್ದೆಯ ಮಾಲೀಕರಾದ ಪಟ್ಟಡ ದೇವಯ್ಯ, ಎನ್.ಡಿ.ಆರ್.ಎಫ್ ತಂಡದ ೨೦ ಮಂದಿ ಸಿಬ್ಬಂದಿಗಳು ಗ್ರಾಮಸ್ಥರು ಕಾರ್ಯಾಚರಣೆಯಲ್ಲಿ ಭಾಗಿಗಳಾಗಿದ್ದರು.

-ಕಿಶೋರ್ ಕುಮಾರ್ ಶೆಟ್ಟಿ