ನಾಪೋಕ್ಲು, ಜು. ೨೧: ಇಲ್ಲಿನ ನಾಡಕಚೇರಿಗೆ ತೆರಳುವ ರಸ್ತೆ ಅದ್ವಾನದಿಂದ ಕೂಡಿದ್ದು ರಸ್ತೆಯ ಇಕ್ಕೆಲಗಳಲ್ಲಿ ಕಾಡು, ಪೊದೆಗಳು ಬೆಳೆದು ರಸ್ತೆಗೆ ಚಾಚಿವೆ. ರಸ್ತೆಯ ಎರಡೂ ಬದಿ ಚರಂಡಿ ಇಲ್ಲದೆ ಕೆಸರು ನೀರು ರಸ್ತೆಯಲ್ಲಿಯೇ ಹರಿಯುತ್ತಿದ್ದು ರಸ್ತೆ ದುರಸ್ತಿಪಡಿಸುವವರೇ ಇಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
೧೮೯೦ರಲ್ಲಿ ನಿರ್ಮಿಸಲಾದ ನಾಡಕಚೇರಿಯು ಹಲವು ಗ್ರಾಮಸ್ಥರ ದಿನನಿತ್ಯದ ವ್ಯವಹಾರದ ತಾಣವಾಗಿದೆ. ನಾಪೋಕ್ಲು ಹೋಬಳಿ ವ್ಯಾಪ್ತಿಗೆ ಒಳಪಟ್ಟ ೨೭ ಗ್ರಾಮಗಳ ಗ್ರಾಮಸ್ಥರು ಕಂದಾಯ ಇಲಾಖೆಯ ವಹಿವಾಟಿಗಾಗಿ ನಾಡಕಚೇರಿಗೆ ಆಗಮಿಸುತ್ತಾರೆ. ಅದ್ವಾನದಿಂದ ಕೂಡಿದ ರಸ್ತೆಯು ಜನರಿಗೆ ಸಮಸ್ಯೆಯ ತಾಣವಾಗಿದೆ. ಈ ರಸ್ತೆಯಲ್ಲಿ ನಡೆದಾಡುವುದೇ ಕಷ್ಟಕರವಾಗಿದೆ. ಸಮೀಪದಲ್ಲೇ ವಿದ್ಯುತ್ ಇಲಾಖೆಯ ಕಚೇರಿ ಇದ್ದು ಬಿಲ್ ಪಾವತಿಸಲು ಬರುವ ಮಂದಿ ಕೆಸರಿನಲ್ಲೇ ನಡೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಬAಧಪಟ್ಟವರು ಈ ರಸ್ತೆಯ ದುರಸ್ತಿಕಾರ್ಯಕ್ಕೆ ಕೂಡಲೇ ಮುಂದಾಗಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. -ದುಗ್ಗಳ ಸದಾನಂದ.