ಮಡಿಕೇರಿ, ಜು. ೨೦: ಕಳೆದ ೬ ವರ್ಷಗಳ ಕಾಲ ವಿಧಾನ ಪರಿಷತ್ ಸದಸ್ಯರಾಗಿ ಕೊಡಗಿನ ಅಭಿವೃದ್ಧಿ ಕಾರ್ಯಗಳಲ್ಲಿ ನಿರ್ಣಾಯಕ ಪಾತ್ರ ವಹಿಸದ ಶಾಂತೆಯAಡ ವೀಣಾ ಅಚ್ಚಯ್ಯ ಅವರು, ಅನುದಾನ ಸದ್ಬಳಕೆಯಲ್ಲಿ ಮೊದಲ ಸ್ಥಾನದಲ್ಲಿರುವ ಮೈಸೂರು- ಕೊಡಗು ಸಂಸದ ಪ್ರತಾಪ್ ಸಿಂಹ ಅವರ ವಿರುದ್ಧ ಮಾಡಿರುವ ಟೀಕೆ ಹಾಸ್ಯಾಸ್ಪದವೆಂದು ಕೊಡಗು ಜಿಲ್ಲಾ ಬಿಜೆಪಿ ಅಸಮಾಧಾನ ವ್ಯಕ್ತಪಡಿಸಿದೆ.

ಪತ್ರಿಕಾ ಪ್ರಕಟಣೆ ನೀಡಿರುವ ಬಿಜೆಪಿ ಜಿಲ್ಲಾ ವಕ್ತಾರ ಮಹೇಶ್ ಜೈನಿ, ಅಭಿವೃದ್ಧಿ ಕಾರ್ಯಗಳಿಗೆ ಸಮಯ ಮೀಸಲಿಡದೆ ಸಭೆ, ಸಮಾರಂಭಗಳಿಗೆ ಸೀಮಿತವಾಗಿ ಅವಧಿ ಪೂರೈಸಿದ ವೀಣಾ ಅಚ್ಚಯ್ಯ ಅವರು ಸಂಸದರ ವಿರುದ್ಧ ಮಾಡಿರುವ ಟೀಕೆ ಖಂಡನೀಯ. ತಮ್ಮದೇ ಪಕ್ಷದ ಸರಕಾರವಿದ್ದಾಗಲೂ ಜಿಲ್ಲೆಯ ಬಗ್ಗೆ ಕಾಳಜಿ ತೋರದೆ ಇದ್ದ ಇವರು, ಇದೀಗ ಅಭಿವೃದ್ಧಿ ಕಾರ್ಯಗಳಿಂದಲೇ ಜನಪ್ರಿಯತೆಯನ್ನು ಗಳಿಸಿರುವ ಸಂಸದರನ್ನು ಉದ್ದೇಶಪೂರ್ವಕವಾಗಿ ಟೀಕಿಸುತ್ತಿರುವುದು ಸರಿಯಲ್ಲವೆಂದು ಹೇಳಿದ್ದಾರೆ. ಕೇಂದ್ರ ಸರಕಾರ ಸಂಸದರಿಗೆ ನೀಡುವ ಅನುದಾನ ಬಳಕೆಯಲ್ಲಿ ಪ್ರತಾಪ್ ಸಿಂಹ ಅವರು ಮೊದಲ ಸ್ಥಾನದಲ್ಲಿದ್ದಾರೆ. ಈ ಹಿಂದಿನ ಕಾಂಗ್ರೆಸ್ ಸಂಸದರುಗಳು ಮಾಡಿರುವ ಸಾಧನೆ ಏನು ಎನ್ನುವುದನ್ನು ಕೊಡಗಿನ ಜನ ಅರಿತಿದ್ದಾರೆ. ಇದೇ ಕಾರಣಕ್ಕೆ ಯುವ ಸಂಸದ ಪ್ರತಾಪ್ ಸಿಂಹ ಅವರನ್ನು ಎರಡನೇ ಬಾರಿಯೂ ಭರ್ಜರಿ ಮತಗಳಿಂದ ಗೆಲ್ಲಿಸಿದ್ದಾರೆ. ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ೭೮ ಕೋಟಿ ರೂ., ಮೈಸೂರಿನಿಂದ ಕುಶಾಲನಗರಕ್ಕೆ ೧೦೫ ಕಿ.ಮೀ ದೂರದ ೪ ಪಥದ ರಸ್ತೆಗೆ ೩೯೯೩ ಸಾವಿರ ಕೋಟಿ, ಮಡಿಕೇರಿಯಿಂದ ಸಂಪಾಜೆಯವರೆಗೆ ರಸ್ತೆ ಬದಿ ತಡೆಗೋಡೆ ನಿರ್ಮಾಣಕ್ಕೆ ೫೯ ಕೋಟಿ ರೂ. ಅನುದಾನ ತಂದಿರುವ ಹೆಗ್ಗಳಿಕೆ ಪ್ರತಾಪ್ ಸಿಂಹ ಅವರಿಗೆ ಸಲ್ಲುತ್ತದೆ. ಚನ್ನರಾಯಪಟ್ಟಣದಿಂದ ಕೊಡಗಿನ ಶನಿವಾರಸಂತೆ, ಸೋಮವಾರಪೇಟೆ ಮತ್ತು ಕುಟ್ಟ ಮಾರ್ಗವನ್ನು ರಾಷ್ಟಿçÃಯ ಹೆದ್ದಾರಿಯನ್ನಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಮೈಸೂರಿನಿಂದ ಕುಶಾಲನÀಗರಕ್ಕೆ ರೈಲ್ವೆ ಮಾರ್ಗಕ್ಕೆ ಅನುಮೋದನೆ ಪಡೆಯಲಾಗಿದ್ದು, ಈ ಎಲ್ಲಾ ಸಾಧನೆಗೆ ಸಂಸದ ಪ್ರತಾಪ್ ಸಿಂಹ ಅವರು ಕಾರಣಕರ್ತರಾಗಿದ್ದಾರೆ. ೨೦೧೮ ರಲ್ಲಿ ಕೊಡಗು ಪ್ರಾಕೃತಿಕ ವಿಕೋಪಕ್ಕೆ ತುತ್ತಾದಾಗ ಜಿಲ್ಲೆಯಲ್ಲೇ ತಂಗಿದ ಸಂಸದರು ಸಂತ್ರಸ್ತರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿದ್ದಾರೆ. ಎನ್‌ಡಿಆರ್‌ಎಫ್ ಮೂಲಕ ಪರಿಹಾರ ಕಾರ್ಯಗಳನ್ನು ಕೈಗೊಂಡಿದ್ದಾರೆ. ಇದು ಸಂಸದರ ಯಶಸ್ವೀ ಕಾರ್ಯವೈಖರಿಗೆ ಮತ್ತು ಜನಪರ ಕಾಳಜಿಗೆ ಸಾಕ್ಷಿಯಾಗಿದೆ ಎಂದು ಮಹೇಶ್ ಜೈನಿ ಸಮರ್ಥಿಸಿಕೊಂಡಿದ್ದಾರೆ.