ಕುಶಾಲನಗರ, ಜು. ೨೦: ಕುಶಾಲನಗರ ಸಮೀಪದ ಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಟಿಬೇಟಿಯನ್ ನಿರಾಶ್ರಿತರ ಕ್ಯಾಂಪ್‌ಗೆ ತೆರಳುವ ಕೊಪ್ಪ-ಗಿರಗೂರು ಮುಖ್ಯ ರಸ್ತೆ ಕೆಸರಿನಿಂದ ತುಂಬಿದ್ದು, ಸಂಚಾರ ವ್ಯವಸ್ಥೆಗೆ ತೊಂದರೆ ಉಂಟಾಗಿದೆ.

ಕೊಪ್ಪದಿAದ ಕ್ಯಾಂಪ್‌ಗೆ ತೆರಳುವ ರಸ್ತೆಯಲ್ಲಿ ರೂ. ೨ ಕೋಟಿ ವೆಚ್ಚ ಮಾಡಿ ನೂತನ ಸೇತುವೆ ನಿರ್ಮಾಣ ಮಾಡಲಾಗಿದ್ದು, ಸೇತುವೆಯ ಎರಡು ಕಡೆ ರಸ್ತೆಯಲ್ಲಿ ಗುಂಡಿ ಬಿದ್ದಿದ್ದು, ಕೆಸರುಮಯವಾಗಿದೆ. ದಿನನಿತ್ಯ ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು ಹೆಚ್ಚಿನ ಸಂಖೈಯಲ್ಲಿ ಈ ರಸ್ತೆಯಲ್ಲಿ ಸಂಚರಿಸುತ್ತಿದ್ದು, ಕಳೆದ ೧೫ ದಿನಗಳಿಂದ ವಾಹನ ಸಂಚಾರ ಮತ್ತು ಪಾದಚಾರಿಗಳಿಗೆ ಅನಾನುಕೂಲ ಉಂಟಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.

ಈ ಬಗ್ಗೆ ಲೋಕೋಪಯೋಗಿ ಅಧಿಕಾರಿಗಳಿಗೆ ಹಲವು ಬಾರಿ ಮಾಹಿತಿ ನೀಡಿದರೂ, ಯಾವುದೇ ರೀತಿಯ ಸ್ಪಂದನ ನೀಡುತ್ತಿಲ್ಲ ಎಂದು ಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ರೇಣುಕಾಸ್ವಾಮಿ ತಿಳಿಸಿದ್ದಾರೆ. ನಿತ್ಯ ತೆರಳುವ ನಾಗರಿಕರಿಗೆ ಸಮಸ್ಯೆ ಉಂಟಾಗಿದ್ದು, ಕೂಡಲೇ ರಸ್ತೆಯನ್ನು ದುರಸ್ತಿಪಡಿಸುವಂತೆ ಅವರು ಒತ್ತಾಯಿಸಿದ್ದಾರೆ.

ಎರಡು ದಿನಗಳ ಒಳಗಾಗಿ ರಸ್ತೆ ಸರಿಪಡಿಸದಿದ್ದಲ್ಲಿ ಈ ಭಾಗದ ನಾಗರಿಕರು ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿರುವುದಾಗಿ ಅವರು ತಿಳಿಸಿದ್ದಾರೆ. ಸ್ಥಳೀಯ ಪಂಚಾಯಿತಿ ಸದಸ್ಯರಾದ ರಾಜಪ್ಪ, ನಾರಾಯಣ ಮತ್ತು ಮಾಜಿ ಸದಸ್ಯರಾದ ಮಕ್ಬೂಲ್ ಅವರುಗಳು ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿದ್ದು, ತಕ್ಷಣ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ರಸ್ತೆ ಸರಿಪಡಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.