ಮಡಿಕೇರಿ, ಜು. ೨೧: ಮಡಿಕೇರಿಯ ಐತಿಹಾಸಿಕ ಕೋಟೆಗೆ ಕಾಯಕಲ್ಪ ಆರಂಭಗೊAಡಿದ್ದು, ರಾಜ್ಯ ಉಚ್ಚ ನ್ಯಾಯಾಲಯದ ನಿರ್ದೇಶನದಲ್ಲಿ ಈ ಕಾರ್ಯಕ್ಕೆ ಚಾಲನೆ ದೊರೆತಿದೆ. ರೂ. ೧೦ ಕೋಟಿ ೭೦ ಲಕ್ಷ ವೆಚ್ಚದಲ್ಲಿ ದುರಸ್ತಿ ಕಾರ್ಯ ನಡೆಯುತ್ತಿದೆ. ಇದರಿಂದಾಗಿ ಬಿದ್ದು ಹೋಗಲಿದ್ದ ಕಟ್ಟಡದ ಅನೇಕ ಭಾಗಗಳು ಮರುಜೀವ ಕಂಡಿವೆ.
ಕೊಡಗಿನ ಆಲೂರು ಸಿದ್ದಾಪುರದ ನಿವಾಸಿ, ಜೆ.ಎಸ್. ವಿರೂಪಾಕ್ಷಯ್ಯ ಅವರ ಕಾಳಜಿಯಿಂದಾಗಿ ಐತಿಹಾಸಿಕ ಕೋಟೆ ಈ ಹಿಂದಿನ ಗತವೈಭವದೊಂದಿಗೆ ಉಳಿಯುವಂತಾಗಿದೆ. ಕಂದಾಯ ಇಲಾಖೆಯಲ್ಲಿ ಹಲವಾರು ವರ್ಷ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದು, ಬಳಿಕ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಅವರ ಆಪ್ತ ಸಹಾಯಕರಾಗಿ ಸೇವೆ ಸಲ್ಲಿಸಿದ್ದ ವಿರೂಪಾಕ್ಷಯ್ಯ ಅವರು ಕೊಡಗಿನ ಐತಿಹಾಸಿಕ ಕೋಟೆ ಹಾಗೂ ರಾಜರ ಸ್ಮಾರಕವಾದ ಗದ್ದುಗೆ ಉಳಿಸಲು ಕಾನೂನಾತ್ಮಕ ಸತತಪ್ರಯತ್ನ ನಡೆಸಿದ್ದಾರೆ.
ಕೊಡಗಿನವರೇ ಆದ ರಾಜ್ಯ ಉಚ್ಚ ನ್ಯಾಯಾಲಯದ ವಕೀಲರಾಗಿರುವ ರವೀಂದ್ರನಾಥ್ ಕಾಮತ್ ಅವರ ಮೂಲಕ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಕೋಟೆ ಕಟ್ಟಡದ ನಿರ್ವಹಣಾ ಅಧಿಕಾರವು ಕೇಂದ್ರ ಪ್ರಾಚ್ಯವಸ್ತು ಇಲಾಖೆಗೆ ಪೂರ್ಣವಾಗಿ ದೊರೆತಿರಲಿಲ್ಲ.
(ಮೊದಲ ಪುಟದಿಂದ) ಕೇವಲ ಒಳಭಾಗದ ಕೋಟೆ ಶಿಲ್ಪಾಕೃತಿಯ ಆನೆಗಳು ಮೊದಲಾದವುಗಳನ್ನು ನಿರ್ವಹಿಸಲು ಮಾತ್ರ ಅವಕಾಶವಿತ್ತು. ಒಳಗಿನ ಅರಮನೆ ಭಾಗಗಳನ್ನು ನಿರ್ವಹಿಸಲು ಕೂಡ ಕೇಂದ್ರ ಪ್ರಾಚ್ಯವಸ್ತು ಇಲಾಖೆಗೆ ಅಧಿಕಾರ ನೀಡಬೇಕೆಂದು ಅರ್ಜಿದಾರರು ಮನವಿ ಮಾಡಿದ್ದು, ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ನಿರ್ದೇಶನ ನೀಡಿದೆ. ಇದರಿಂದಾಗಿ ರಾಜ್ಯ ಸರಕಾರವು ಕೂಡ ದುರಸ್ತಿಗಾಗಿ ಹಣ ಬಿಡುಗಡೆ ಮಾಡಿದೆ.
ಕೋಟೆ ಆವರಣದ ಅನೇಕ ಭಾಗಗಳಲ್ಲಿ ಮಳೆಗಾಲದಲ್ಲಿ ಅತಿಯಾದ ಸೋರುವಿಕೆಯಿದ್ದರೂ, ದುರಸ್ತಿ ಬಳಿಕ ಸ್ಥಗಿತಗೊಂಡಿದೆ. ಅರಮನೆ ಪ್ರದೇಶದಲ್ಲಿ ಈ ಹಿಂದೆ ಅನೇಕ ಸರಕಾರಿ ಕಚೇರಿಗಳಿಗಾಗಿ ಹೊಸ ಕಟ್ಟಡಗಳನ್ನು ಸೇರ್ಪಡೆಗೊಳಿಸಿದ್ದು, ದುರಸ್ತಿ ಸಂದರ್ಭ ಅವುಗಳನ್ನೆಲ್ಲ ತೆಗೆದು ಹಾಕಲಾಗಿದೆ. ಕೇವಲ ಐತಿಹಾಸಿಕ ಅರಮನೆಯನ್ನು ಮಾತ್ರ ಯಥಾವತ್ತಾಗಿ ಉಳಿಸಿ ಕೊಳ್ಳಲಾಗಿದೆ.
ಕೋಟೆ ಆವರಣ ಪ್ರದೇಶವು ಒಟ್ಟು ೧೬ ಎಕರೆಯನ್ನು ಒಳಗೊಂಡಿದೆ. ಸದ್ಯದಲ್ಲಿಯೇ ನ್ಯಾಯಾಲಯ ಕಟ್ಟಡವನ್ನು ಕೂಡ ಬಿಟ್ಟುಕೊಡ ಲಾಗುವುದು. ನೂತನ ನ್ಯಾಯಾಲಯ ಸಮುಚ್ಚಯಕ್ಕೆ ನ್ಯಾಯಾಲಯ ಕಚೇರಿಗಳನ್ನು ಸ್ಥಳಾಂತರಿಸಲಾಗುತ್ತಿದೆ. ಹೊರ ಆವರಣದಲ್ಲಿರುವ ಮಹಿಳಾ ಸಮಾಜ ಕಟ್ಟಡವನ್ನು ಕೂಡ ತೆರವುಗೊಳಿಸಲು ಕ್ರಮಕೈಗೊಂಡಿರುವುದಾಗಿ ಗೊತ್ತಾಗಿದೆ.
ಈ ಹಿಂದೆ ೩೦ ಕ್ಕೂ ಹೆಚ್ಚು ಸರಕಾರಿ ಕಚೇರಿಗಳಿದ್ದು, ಆ ಸಂದರ್ಭವೂ ಕೂಡ ಕಟ್ಟಡವನ್ನು ದುರಸಿ ್ತಮಾಡದೇ, ನಿರ್ಲಕ್ಷö್ಯ ತೋರಿದ್ದುದರಿಂದ ಈ ಐತಿಹಾಸಿಕ ಕಟ್ಟಡವನ್ನು ಉಳಿಸಬೇಕೆಂದು ಅರ್ಜಿದಾರರು ಮನವಿ ಮಾಡಿದ್ದರು. ೧೭ನೇ ಶತಮಾನದಲ್ಲಿ ನಿರ್ಮಾಣ ಗೊಂಡು, ೧೮ನೇ ಶತಮಾನದಲ್ಲಿ ಪುನರ್‌ನವೀಕರಣಗೊಂಡ ಈ ಕೋಟೆಯನ್ನು ೧೯೨೦ರಲ್ಲಿ ಕೂರ್ಗ್ ಕಮೀಷನರ್ ಅವರು, ಸಂರಕ್ಷಿತ ಕಟ್ಟಡವೆಂದು ಘೋಷಿಸಿದ್ದರು. ಆದರೆ, ೧೯೨೪ರಲ್ಲಿ ರಾಜ್ಯ ಸರಕಾರವು ಡಿನೋಟಿಫಿಕೇಷನ್ ಮಾಡುವ ಮೂಲಕ ಸರಕಾರಿ ಕಚೇರಿಗಳನ್ನು ಈ ಕಟ್ಟಡಕ್ಕೆ ಸ್ಥಳಾಂತರಿಸಲಾಗಿತ್ತು.
೨೦೧೯ರಲ್ಲಿ ಜಿಲ್ಲಾಧಿಕಾರಿಗಳ ಸಮುಚ್ಚಯ ನಿರ್ಮಾಣಗೊಂಡ ಬಳಿಕ ಎಲ್ಲಾ ಕಚೇರಿಗಳನ್ನು ಕೋಟೆಯಿಂದ ಸ್ಥಳಾಂತರಿಸಲಾಗಿದೆ. ಇದೀಗ ಹಳೆಯ ಗತವೈಭವದ ನೆನಪಿನೊಂದಿಗೆ ಮುಂದೆ ಪ್ರವಾಸಿಗರು ಕೋಟೆಯನ್ನು ವೀಕ್ಷಿಸಲು ಅನೇಕ ಆಕರ್ಷಕವಾದಂತಹ ಯೋಜನೆಗಳನ್ನು ಕೈಗೊಳ್ಳಲಿರುವುದಾಗಿ ತಿಳಿದು ಬಂದಿದೆ. ಲೇಸರ್ ಶೋ, ಮ್ಯೂಸಿಯಂ ಇತ್ಯಾದಿಗಳನ್ನು ರೂಪಿಸಲಿರುವುದಾಗಿಯೂ ಹೇಳಲಾಗಿದೆ.
ಜಿಲ್ಲಾಧಿಕಾರಿ ಸತೀಶ ಬಿ.ಸಿ. ಅವರನ್ನು ಈ ಬೆಳವಣಿಗೆ ಕುರಿತು ಪ್ರಶ್ನಿಸಿದಾಗ ನ್ಯಾಯಾಲಯದ ನಿರ್ದೇಶನದ ಅನ್ವಯ ಸಂಬAಧಿತ ಪ್ರಾಚ್ಯವಸ್ತು ಇಲಾಖಾಧಿಕಾರಿಗಳು ಹಾಗೂ ಅರ್ಜಿದಾರರು ಕೋಟೆ ಆವರಣದಲ್ಲಿ ಪರಿಶೀಲನೆಗೆ ಬರುವ ಸಂದರ್ಭ ತಾನೂ ಕೂಡ ತೆರಳಿ ವೀಕ್ಷಣೆ ನಡೆಸುತ್ತಿರುವುದಾಗಿ ತಿಳಿಸಿದರು.