ಮಡಿಕೇರಿ, ಜು. ೨೧: ಕೊಡಗು ಜಿಲ್ಲೆ ಸೇರಿದಂತೆ ರಾಜ್ಯದಲ್ಲಿನ ಸಣ್ಣ ಮತ್ತು ಮಧ್ಯಮ ಕಾಫಿ ಬೆಳೆಗಾರರ ೧೦ ಹೆಚ್.ಪಿ. ವರೆಗಿನ ನೀರಾವರಿ ವಿದ್ಯುತ್ ಪಂಪ್‌ಸೆಟ್ ಸ್ಥಾವರಗಳ ವಿದ್ಯುತ್ ಶುಲ್ಕವನ್ನು ಮರು ಪಾವತಿಸಲು ಸರಕಾರ ಮುಂದಾಗಿದೆ.

ಈ ಬಗ್ಗೆ ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಇಂಧನ ಇಲಾಖೆ, ಸರಕಾರದ ಅಧೀನ ಕಾರ್ಯದರ್ಶಿ ಎನ್. ಮಂಗಳಗೌರಿ ಆದೇಶ ಹೊರಡಿಸಿದ್ದು, ಹಲವು ವರ್ಷಗಳ ಬೇಡಿಕೆಗೆ ಇದೀಗ ಮನ್ನಣೆ ದೊರೆತಿದೆ.

ಕೊಡಗು ಜಿಲ್ಲೆಯ ಬೆಳೆಗಾರರು ಹಲವು ವರ್ಷಗಳಿಂದ ನಾನಾ ಕಾರಣಗಳಿಂದ ಆರ್ಥಿಕ ಸಮಸ್ಯೆಗೆ ತುತ್ತಾಗಿದ್ದು, ಹಲವು ಸಂಘಟನೆಗಳು ಈ ಬೇಡಿಕೆ ಮುಂದಿಟ್ಟು ಸರಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿತ್ತು. ವಿಧಾನಸಭಾ ಹಾಗೂ ಪರಿಷತ್ತಿನಲ್ಲಿಯೂ ಈ ಬಗ್ಗೆ ಚರ್ಚೆಗಳು ನಡೆದಿದ್ದವು. ಈ ಸಂಬAಧ ಸರಕಾರದಿಂದ ಸಕಾರಾತ್ಮಕ ಸ್ಪಂದನ ಕೂಡ ದೊರೆತಿತ್ತು. ಸರಕಾರ ಇದೀಗ ಕೆಲವೊಂದು ಷರತ್ತುಬದ್ಧ ಕ್ರಮಗಳೊಂದಿಗೆ ಇಡೀ ರಾಜ್ಯಕ್ಕೆ ಅನ್ವಯಿಸುವಂತೆ ಆದೇಶ ಹೊರಡಿಸಿದೆ.

ಪ್ರಸ್ತಾವನೆಯಂತೆ ರಾಜ್ಯದಲ್ಲಿನ ಸಣ್ಣ ಮತ್ತು ಮಧ್ಯಮ ಕಾಫಿ ಬೆಳೆಗಾರರ ೧೦ ಹೆಚ್.ಪಿ.ವರೆಗಿನ ನೀರಾವರಿ ವಿದ್ಯುತ್ ಪಂಪ್‌ಸೆಟ್ ಸ್ಥಾವರಗಳ ವಿದ್ಯುತ್ ಶುಲ್ಕವನ್ನು ಹಲವು ಷರತ್ತು, ನಿಬಂಧನೆಗೊಳಪಟ್ಟು ಫಲಾನುಭವಿಗಳಿಗೆ ಡಿ.ಬಿ.ಟಿ. (ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್ಫರ್) ಮೂಲಕ ಸರಕಾರದಿಂದ ಮರುಪಾವತಿಸಲು ಸರಕಾರ ಕ್ರಮಕೈಗೊಂಡಿದೆ. ಮೊದಲು ಗ್ರಾಹಕರು ವಿದ್ಯುತ್ ಶುಲ್ಕ ಪಾವತಿಸಬೇಕು ಅದಾದ ಬಳಿಕ ಸರಕಾರದಿಂದ ಡಿ.ಬಿ.ಟಿ. ಮೂಲಕ ಹಣ ಬೆಳೆಗಾರರಿಗೆ ಸಂದಾಯವಾಗಲಿದೆ.

ಷರತ್ತುಗಳೇನು?

ರಾಜ್ಯದಲ್ಲಿ ಸಣ್ಣ ಮತ್ತು ಮಧ್ಯಮ ಕಾಫಿ ಬೆಳೆಗಾರರ ೧೦ ಹೆಚ್.ಪಿ.ವರೆಗಿನ ನೀರಾವರಿ ವಿದ್ಯುತ್ ಪಂಪ್ ಸೆಟ್‌ಗಳ ವಿದ್ಯುತ್

(ಮೊದಲ ಪುಟದಿಂದ) ಶುಲ್ಕವನ್ನು ೧.೦೭.೨೦೨೨ ರಿಂದ ಬಳಕೆಯಾಗುವ ವಿದ್ಯುತ್ ಬಳಕೆಗೆ ಅನ್ವಯವಾಗುವಂತೆ ಗ್ರಾಹಕರುಗಳಿಗೆ ಮರುಪಾವತಿಸ ಲಾಗುವುದು.

ಫಲಾನುಭವಿಗಳು ಸಣ್ಣ ಮತ್ತು ಮಧ್ಯಮ ಕಾಫಿ ಬೆಳೆಗಾರರಾಗಿರುವ ಬಗ್ಗೆ ಸಂಬAಧಿಸಿದ ಇಲಾಖೆಯಿಂದ ದೃಢೀಕರಣ ಪತ್ರ ಒದಗಿಸಬೇಕು. ಈ ಪ್ರವರ್ಗದ ಗ್ರಾಹಕರುಗಳು ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ವಿವರ ಹಾಗೂ ಇತರೆ ಮಾಹಿತಿಗಳ ದೃಢೀಕೃತ ದಾಖಲೆಗಳನ್ನು ಒದಗಿಸುವುದು ಕಡ್ಡಾಯವಾಗಿದೆ. ವಿದ್ಯುತ್ ಸ್ಥಾವರಗಳಿಗೆ ಕರ್ನಾಟಕ ವಿದ್ಯುತ್‌ಚ್ಛಕ್ತಿ ನಿಯಂತ್ರಣ ಆಯೋಗವು ನಿಗದಿಪಡಿಸಿರುವ ವಿದ್ಯುತ್ ದರ ಸೂಚಿಯಂತೆ ಮಾಸಿಕ ವಿದ್ಯುತ್ ಬಿಲ್ಲನ್ನು ಸಿದ್ಧಪಡಿಸಿ ನೀಡಲಾಗುವುದು. ಈ ಸೌಲಭ್ಯಕ್ಕೆ ಅರ್ಹರಾಗುವ ಬಳಕೆದಾರರು ನಿಗದಿತ ಸಮಯದಲ್ಲಿ ಶುಲ್ಕ ಪಾವತಿಸಿದ ನಂತರ ಡಿಬಿಟಿ ಮೂಲಕ ಸರಕಾರದಿಂದ ವಿದ್ಯುತ್ ಸರಬರಾಜು ಸಂಸ್ಥೆಗಳಿಗೆ ಒದಗಿಸುವ ಸಹಾಯಧನವನ್ನು ಮಾಸಿಕ ವಿದ್ಯುತ್ ಬಳಕೆ ಶುಲ್ಕದ ಮೇಲೆ ವಿಧಿಸುವ ವಿದ್ಯುತ್ ತೆರಿಗೆಯನ್ನು ಹೊರತುಪಡಿಸಿ ನೇರವಾಗಿ ಗ್ರಾಹಕರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುವುದು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಈ ಪ್ರವರ್ಗದ ಗ್ರಾಹಕರುಗಳು ಒಂದು ಸ್ಥಾವರಕ್ಕೆ ಮಾತ್ರ ಉಚಿತ ವಿದ್ಯುತ್ ಸೌಲಭ್ಯ ಕಲ್ಪಿಸಲಾಗುವುದು ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ನೀರಾವರಿ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡಲು ಸರಕಾರದ ಸಮ್ಮತಿ