ಕಣಿವೆ, ಜು. ೨೦: ಕೃಷಿಕರು ಹೆಚ್ಚಿನ ಪ್ರಮಾಣದಲ್ಲಿ ಕೈಗೊಂಡಿರುವ ವಾಣಿಜ್ಯ ಬೆಳೆ ಶುಂಠಿಗೆ ಕೊಳೆ ರೋಗ ಬಾಧಿಸುತ್ತಿದೆ. ಇದರಿಂದಾಗಿ ರೈತರು ಅಪಾರ ನಷ್ಟಕ್ಕೆ ಸಿಲುಕಿದಂತಾಗಿದೆ.

ಕಳೆದ ಫೆಬ್ರವರಿ ಹಾಗೂ ಮಾರ್ಚ್ನಲ್ಲಿ ಬಿತ್ತನೆ ಮಾಡಿದ್ದ ಶುಂಠಿಗೆ ಕೇವಲ ಮೂರೇ ತಿಂಗಳಲ್ಲಿ ಕೊಳೆ ರೋಗ ಉಲ್ಭಣವಾಗುತ್ತಿದ್ದಂತೆ ಕಂಗಾಲಾದ ರೈತರು ರೋಗ ಹತೋಟಿಗೆ ಮಾಡಿದ ಪ್ರಯತ್ನಗಳು ವ್ಯರ್ಥವಾದ್ದರಿಂದ ಕೊನೆಗೆ ಬೆಳೆ ಕಟಾವು ಮಾಡಲು ಮುಂದಾಗುತ್ತಿದ್ದಾರೆ. ಮೊದಲೇ ಅಪಾರ ಹಣ ವ್ಯಯಿಸಿ ಬೆಳೆದ ಶುಂಠಿ ಫಸಲು ಕೈಕೊಟ್ಟದ್ದರಿಂದ ಸಿಕ್ಕಿದಷ್ಟಾದರೂ ಸಿಗಲಿ ಎಂದು ಸ್ಥಳೀಯ ಮಾರುಕಟ್ಟೆಗೆ ಒಯ್ಯುತ್ತಿದ್ದಾರೆ.

ಅವಧಿಗೆ ಮುನ್ನ ಕಟಾವು ಮಾಡುವ ರೋಗ ಪೀಡಿತ ಶುಂಠಿ ಫಸಲಿಗೆ ಸ್ಥಳೀಯ ಮಾರುಕಟ್ಟೆಯಲ್ಲಿ ೬೦ ಕೆ.ಜಿ. ಚೀಲವೊಂದಕ್ಕೆ ಅತ್ಯಂತ ಕಡಿಮೆ ಬೆಲೆ ಕೇವಲ ೭೦೦ ರೂಗಳಿಗೆ ಮಾರಾಟ ಮಾಡುತ್ತಿದ್ದಾರೆ. ಇದು ಶುಂಠಿ ಬೆಳೆಗಾರರಲ್ಲಿದ್ದ ಹುಮ್ಮಸ್ಸನ್ನು ಕುಗ್ಗಿಸಿದೆ.

ಜೊತೆಗೆ ಈ ಬಾರಿ ಕಳೆದ ಏಪ್ರಿಲ್‌ನಿಂದಲೂ ಶುಂಠಿ ಬೆಳೆಗೆ ಸಕಾಲಿಕವಾದ ಮಳೆ ಸುರಿದ ಪರಿಣಾಮ ಬೆಳೆಯೇನೋ ಚೆನ್ನಾಗಿ ಬಂದಿತ್ತಾದರೂ, ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಗೆ ಭೂಮಿಯೆಲ್ಲಾ ಶೀತಪೀಡಿತ ಗೊಂಡ ಪರಿಣಾಮ ಇದೀಗ ಬೆಳೆಗೆ ಕೊಳೆ ರೋಗ ಬಾಧಿಸುತ್ತಿದೆ. ಆದಾಗ್ಯೂ ಬಿತ್ತನೆ ಅವಧಿಯಿಂದ ಕಟಾವಿನವರೆಗಿನ ಕನಿಷ್ಟ ೬ ರಿಂದ ಗರಿಷ್ಠ ೮ ತಿಂಗಳು ಅವಧಿ ತುಂಬಿದ ಶುಂಠಿ ಫಸಲಿಗೆ ಮಾರುಕಟ್ಟೆಯಲ್ಲಿ ಅತ್ಯುತ್ತಮ ದರ ದೊರಕಲಿ ಎಂಬ ಹಂಬಲ ಹಲವು ಕೃಷಿಕರದ್ದಾಗಿದೆ.