ಪೊನ್ನಂಪೇಟೆ, ಜು. ೨೦: ಕೊಡಗು ಜಿಲ್ಲಾ ದಲಿತ ಸಂಘರ್ಷ ಸಮಿತಿ ವತಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಿ ಮುಖ್ಯಮಂತ್ರಿ ಅವರಿಗೆ ಪತ್ರ ಬರೆದಿದ್ದು ಮನವಿ ಪತ್ರವನ್ನು ಪೊನ್ನಂಪೇಟೆ ತಹಶೀಲ್ದಾರ್ ಪ್ರಶಾಂತ್ ಕುಮಾರ್ ಅವರಿಗೆ ಹಸ್ತಾಂತರಿಸಿದರು. ಸರಕಾರ ಇದೇ ಜುಲೈ ೧೮ ರಿಂದ ಜನಸಾಮಾನ್ಯರ ಆಹಾರ ಪದಾರ್ಥಗಳ ಮೇಲೆ ಜಿ.ಎಸ್.ಟಿ. ತೆರಿಗೆಯನ್ನು ವಿಧಿಸಿರುವುದನ್ನು ದ.ಸಂ.ಸ. ಕೊಡಗು ಜಿಲ್ಲಾ ಶಾಖೆ ತೀವ್ರವಾಗಿ ಖಂಡಿಸಿದ್ದು, ಜನ ಸಾಮಾನ್ಯರು ಬಳಸುವ ಎಲ್ಲಾ ವಸ್ತುಗಳ ಮೇಲೆ ಶೇ. ೧೨ ರಿಂದ ೧೮ ರವರೆಗೆ ತೆರಿಗೆ ದರ ಹೆಚ್ಚಿಸಿರುವುದು ನಿಜಕ್ಕೂ ಜನಸಾಮಾನ್ಯರು ಆತಂಕ ಪಡುವಂತಾಗಿದೆ. ದಿನಬಳಕೆಯ ಅಗತ್ಯ ವಸ್ತುಗಳ ಮೇಲೆ ಜಿ.ಎಸ್.ಟಿ. ಹಾಕಿ ಜನ ಸಾಮಾನ್ಯರನ್ನು ಲೂಟಿ ಮಾಡಿ ಮಾನವೀಯತೆ ಮತ್ತು ಕರುಣೆಯನ್ನು ಸರಕಾರ ಮರೆಯುತ್ತಿರುವುದು ದುರದೃಷ್ಟಕರವಾಗಿದೆ. ಇಂತಹ ಅವೈಜ್ಞಾನಿಕ ಮತ್ತು ಜನ ವಿರೋಧಿ ಜಿ.ಎಸ್.ಟಿ. ತೆರಿಗೆಯನ್ನು ರದ್ದುಗೊಳಿಸಿ ಜನಸಾಮಾನ್ಯರು ಆತಂಕವಿಲ್ಲದ ಬದುಕು ನಡೆಸಲು ಕೇಂದ್ರ ಸರಕಾರ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ದ.ಸಂ.ಸ. ಒತ್ತಾಯಿಸಿದೆ. ಕೇಂದ್ರ ಸರಕಾರ ಜಾರಿಗೆ ತಂದಿರುವ ಅಗ್ನಿಪಥ್ ಯೋಜನೆ ಯುವಕರನ್ನು ಶಿಕ್ಷಣದಿಂದ ವಂಚಿಸುವ ಮತ್ತು ಕೋಮು ಮತ್ತು ಮತೀಯವಾದಕ್ಕೆ ತಮಗೆ ಬೇಕಾದಂತೆ ಬಳಸಿಕೊಳ್ಳುವ ಹುನ್ನಾರವಾಗಿದೆ ಎಂದು ದೂರಿತು. ಸರಕಾರಿ ಪೈಸಾರಿ ಜಾಗವನ್ನು ತೋಟ ಮಾಲೀಕರು ಅತಿಕ್ರಮಣ ಮಾಡಿಕೊಂಡು ತೋಟ, ಕೃಷಿ ಮಾಡಿಕೊಂಡವರಿಗೆ ೩೦ ವರ್ಷಗಳವರೆಗೆ ಲೀಸ್‌ಗೆ ಕೊಡುವ ಬಡವರ ವಿರೋಧಿ ಕಾನೂನನ್ನು ಕೂಡಲೇ ರದ್ದುಗೊಳಿಸಬೇಕು. ಪೈಸಾರಿ ಜಾಗಗಳನ್ನು ಅತಿಕ್ರಮಗೊಂಡ ಭೂಮಾಲೀಕರಿಂದ ತೆರವುಗೊಳಿಸಿ ಸರಕಾರ ವಶಕ್ಕೆ ಪಡೆದು ನಿವೇಶನ ರಹಿತರು, ಬಡವರಿಗೆ ಹಂಚಬೇಕು ಎಂದು ಆಗ್ರಹಿಸಿದರು.

ದೇಶದಲ್ಲಿ, ರಾಜ್ಯದಲ್ಲಿ, ಜಿಲ್ಲೆಯಲ್ಲಿ ಧಾರ್ಮಿಕ ಭಾವನೆಗಳಿಗೆ ವೈಯಕ್ತಿಕ ಹಾಗೂ ಸಾಮಾಜಿಕ ಸ್ವಾಭಿಮಾನಕ್ಕೆ ದಕ್ಕೆ ತರುವಂತಹ ಯಾವುದೇ ಪ್ರಕರಣಗಳಲ್ಲಿ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು.

ಕೊಡಗಿನಲ್ಲಿ ಭೂಮಾಲೀಕರ ಲೈನ್ ಮನೆಗಳಲ್ಲಿ ಜೀತ ಮಾಡುತ್ತಿರುವ ಆಧಿವಾಸಿಗಳು, ಮೂಲನಿವಾಸಿಗಳನ್ನು ಸರ್ವೆ ನಡೆಸಿ ಅವರಿಗೆ ಸರ್ಕಾರಿ ಜಾಗವನ್ನು ಹಂಚಲು ನಿವೇಶನಗಳನ್ನು ಮಂಜೂರು ಮಾಡಲು ರಾಜ್ಯಸರ್ಕಾರ ವಿಶೇಷ ಕಾನೂನು ರೂಪಿಸಬೇಕು.

ಪೊನ್ನಂಪೇಟೆ ತಾಲೂಕಿನ ಕೆ. ಬಾಡಗ ಗ್ರಾಮದ ನಿವೇಶನ ರಹಿತರಿಗೆ ಕಾಯ್ದಿರಿಸಿದ ಒತ್ತುವರಿಯಾಗಿರುವ ಜಾಗವನ್ನು ಸರ್ವೆ ನಡೆಸಿ ಸರ್ಕಾರ ವಶಕ್ಕೆ ಪಡೆದು ನಿವೇಶನ ರಹಿತರಿಗೆ ಹಂಚಬೇಕು. ಹೈಸೊಡ್ಲೂರು ಪೈಸಾರಿ ಜಾಗದಲ್ಲಿ ವಾಸವಿರುವ ೭೪ ಕುಟುಂಬಗಳ ಮೇಲೆ ದ್ವೇಷ ಸಾಧನೆಗಾಗಿ ಕ್ರಿಮಿನಲ್ ಮೊಕದ್ದಮೆ ಹೂಡಿ ಕಿರುಕುಳ ನೀಡುತ್ತಿರುವ ಭೂ ಒತ್ತುವರಿದಾರರ ವಿರುದ್ಧ ಕ್ರಮ ಕೈಗೊಂಡು ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.

ಬೇಡಿಕೆ ಈಡೇರಲಿಲ್ಲವಾದರೆ ದ.ಸಂ.ಸ. ತೀವ್ರ ಹೋರಾಟಕ್ಕೆ ಮುಂದಾಗಲಿದೆ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ. ಮನವಿ ಪತ್ರ ಸಲ್ಲಿಸುವ ಸಂಧರ್ಭ ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಪರಶುರಾಮ್, ವಿಭಾಗೀಯ ಸಂಚಾಲಕ ಕೃಷ್ಣಪ್ಪ, ದಲಿತ ಮುಖಂಡರುಗಳಾದ ಗೋವಿಂದಪ್ಪ, ಮುತ್ತ ಪಿ.ಎಸ್. ಮರಿಸ್ವಾಮಿ, ಮಹಾದೇವ, ತಂಗರಾಜ್, ಗಿರೀಶ್, ಮಂಜು, ರಾಜೇಶ್, ಮುರುಗ ಉಪಸ್ಥಿತರಿದ್ದರು.