ಸೋಮವಾರಪೇಟೆ, ಜು. ೨೦: ಲೋಕೋಪಯೋಗಿ ಇಲಾಖೆಯ ಅಭಿಯಂತರರು, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದ ರಸ್ತೆಗಳ ವಾರ್ಷಿಕ ನಿರ್ವಹಣೆ ಕಾಮಗಾರಿ ಮರೀಚಿಕೆಯಾಗಿದ್ದು, ತಾಲೂಕಿನ ಪಿಡಬ್ಲೂö್ಯಡಿಗೆ ಸೇರಿದ ರಸ್ತೆಗಳಲ್ಲಿ ಸಂಚಾರ ದುಸ್ತರವಾಗುತ್ತಿದೆ.

ಲೋಕೋಪಯೋಗಿ ಇಲಾಖೆಗೆ ಸೇರಿದ ರಸ್ತೆಗಳ ವಾರ್ಷಿಕ ನಿರ್ವಹಣೆಗೆಂದು ಪ್ರತಿ ವರ್ಷ ಲಕ್ಷಾಂತರ ರೂಪಾಯಿ ಅನುದಾನ ಬಿಡುಗಡೆಯಾಗುತ್ತಿದ್ದರೂ ಇದರ ವೈಜ್ಞಾನಿಕ ಬಳಕೆಯ ಕೊರತೆಯಿಂದಾಗಿ ರಸ್ತೆಗಳು ಸಂಚಾರಕ್ಕೆ ಅಯೋಗ್ಯವಾಗುತ್ತಲೇ ಇವೆ.

ಕೊಡಗಿನ ಹವಾಮಾನವನ್ನು ಮನಗಂಡು ಮಳೆಗಾಲಕ್ಕೂ ಮುನ್ನವೇ ವಾರ್ಷಿಕ ನಿರ್ವಹಣೆ ಮಾಡಬೇಕಾದ ಲೋಕೋಪಯೋಗಿ ಇಲಾಖೆ, ಮಳೆಗಾಲ ಮುಗಿದ ನಂತರ ರಸ್ತೆಯ ಬದಿಗಳಲ್ಲಿ ಕೆರೆದು, ಜನರ ಕಣ್ಣೊರೆಸುವ ತಂತ್ರ ಮಾಡುತ್ತಿದೆ.

ಪ್ರತಿ ವರ್ಷದ ಮಳೆಗಾಲದಲ್ಲಿ ತಾಲೂಕಿನ ಲೋಕೋಪಯೋಗಿ ಇಲಾಖಾ ರಸ್ತೆಗಳು, ಜಿಲ್ಲಾ ಮುಖ್ಯ ರಸ್ತೆಗಳಲ್ಲಿ ಸಂಚಾರ ಮಾಡುವುದೇ ದುಸ್ತರವಾಗಿದ್ದು, ಚರಂಡಿಗಳಲ್ಲಿ ಹರಿಯಬೇಕಾದ ಮಳೆ ನೀರು ರಸ್ತೆಯ ಮೇಲೆಯೇ ಹರಿಯುವುದರಿಂದ ಇರುವ ರಸ್ತೆಗಳೂ ಸಹ ಇನ್ನಷ್ಟು ಹದಗೆಡುತ್ತಿವೆ.

ಪ್ರತಿ ವರ್ಷ ಮಳೆ ಮುಗಿದು ಬೇಸಿಗೆ ಶುರುವಾಗುವ ಸಮಯದಲ್ಲಿ ರಸ್ತೆ ಬದಿ ಚರಂಡಿ ನಿರ್ಮಾಣ ನಡೆಯುತ್ತದೆ. ಅಲ್ಪ ಸ್ವಲ್ಪ ಮಣ್ಣು ಕೆರೆದು ಬಿಲ್ ಮಾಡಿಕೊಂಡು ಜೇಬು ತುಂಬಿಸಿಕೊಳ್ಳುವ ಕಾರ್ಯ ನಡೆಯುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತಿ ವರ್ಷದ ಮಳೆಗಾಲ ಆರಂಭಕ್ಕೂ ಮನ್ನವೇ ರಸ್ತೆ ಬದಿ ಚರಂಡಿ ನಿರ್ಮಾಣ ಮಾಡಿದರೆ ಮಾತ್ರ ರಸ್ತೆ ಬಾಳಿಕೆ ಬರುತ್ತದೆ. ಇದನ್ನು ಬಿಟ್ಟು ಬೇಸಿಗೆಯಲ್ಲಿ ಚರಂಡಿ ನಿರ್ಮಾಣ ಮಾಡುವುದ ರಿಂದ ಸರ್ಕಾರದ ಕೋಟ್ಯಾಂತರ ಅನುದಾನ ನೀರು ಪಾಲಾಗುತ್ತದೆ. ಪೂರ್ವ ಮುಂಗಾರು ರಸ್ತೆ ನಿರ್ವಹಣೆ ಕ್ರಿಯಾ ಯೋಜನೆಗೆ ಕೂಡಲೆ ಅನುಮೋದನೆ ನೀಡುವಂತೆ ಅಧಿಕಾರಿಗಳು ಸಂಬAಧಿಸಿದ ಇಲಾಖೆಗೆ ಪತ್ರ ಬರೆದು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಸೋಮವಾರಪೇಟೆ ಲೋಕೋಪಯೋಗಿ ಉಪ ವಿಭಾಗಕ್ಕೆ ಒಳಪಟ್ಟ ರಸ್ತೆಗಳ ಮೇಲೆ ನೀರು ಹರಿಯುತ್ತಿದ್ದು ವಾಹನ ಸಂಚಾರಕ್ಕೆ ತೊಡಕಾಗುತ್ತಿದೆ. ತಕ್ಷಣ ರಸ್ತೆ ಬದಿ ಚರಂಡಿ ನಿರ್ಮಿಸಿ ಮಳೆ ನೀರು ಸರಾಗ ಹರಿವಿಗೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದ್ದು ರಸ್ತೆಯ ಚರಂಡಿಗಳು ಮುಚ್ಚಿರುವುದರಿಂದ ನೀರು ರಸ್ತೆಯ ಮೇಲೆ ಹರಿದು ರಸ್ತೆ ಹಾಳಾಗುತ್ತಿದೆ. ಆದ್ದರಿಂದ ಪೂರ್ವ ಮುಂಗಾರು ರಸ್ತೆ ನಿರ್ವಹಣೆ ಕ್ರಿಯಾ ಯೋಜನೆಗೆ ಕೂಡಲೆ ಅನುಮೋದನೆ ನೀಡುವಂತೆ ಶಾಂತಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬಗ್ಗನ ಅನಿಲ್ ಅವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.