ಮಡಿಕೇರಿ, ಜು. ೧೯: ಕಳೆದ ಎಂಟು ವರ್ಷಗಳ ಅಧಿಕಾರಾವಧಿಯಲ್ಲಿ ಜಿಲ್ಲೆಯನ್ನು ಪ್ರತಿನಿಧಿಸುತ್ತಿರುವ ಸಂಸದರು ಹಾಗೂ ಶಾಸಕರುಗಳು ಕೊಡಗು ಜಿಲ್ಲೆಗೆ ನೀಡಿರುವ ಯೋಜನೆ ಹಾಗೂ ಅನುದಾನಗಳ ಬಗ್ಗೆ ಶ್ವೇತ ಪತ್ರ ಹೊರಡಿಸಬೇಕೆಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷ ಆಗ್ರಹಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಎಂ. ಲಕ್ಷö್ಮಣ್, ಈ ಹಿಂದೆ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಇದ್ದಾಗ ಕೊಡಗು ಜಿಲ್ಲೆಗೆ ನೀಡಿರುವ ಅನುದಾನದ ಬಗ್ಗೆ ಮಾಹಿತಿ ನೀಡಲು ಸಿದ್ಧರಿದ್ದೇವೆ. ಬಿಜೆಪಿ ಸರಕಾರದ ಯೋಜನೆಗಳ ಮಾಹಿತಿ ನೀಡಲಿ. ಕಾಂಗ್ರೆಸ್ ಸರಕಾರದ ಸಂಸದರಿದ್ದಾಗ ಕಾಫಿ ಮಂಡಳಿಗೆ ಮೂವರನ್ನು ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿತ್ತು, ಬಿಜೆಪಿಯವರು ಎಂಟು ವರ್ಷದಿಂದ ಯಾರನ್ನು ಮಾಡಿದ್ದಾರೆ?, ಆಕಾಶವಾಣಿ, ದೂರದರ್ಶನ ಕೇಂದ್ರ, ಕಾಫಿಗೆ ಮುಕ್ತ ಮಾರುಕಟ್ಟೆ, ಪ್ರವಾಸೋದ್ಯಮದ ಅಭಿವೃದ್ಧಿಗೆ ಯೋಜನೆಗಳನ್ನು ನೀಡಲಾಗಿತ್ತು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ೫ ವರ್ಷದಲ್ಲಿ ೩,೩೫೩ ಕೋಟಿ ಅನುದಾನ ಒದಗಿಸಲಾಗಿತ್ತು. ಬಿಜೆಪಿ ಸರಕಾರ ಕೊಟ್ಟಿರುವ ಅನುದಾನದ ಬಗ್ಗೆ ಶ್ವೇತ ಪತ್ರ ಒದಗಿಸಬೇಕೆಂದು ಆಗ್ರಹಿಸಿದರು. ಸಂಸದರು ಮತ್ತು ಶಾಸಕರು ಕೊಡಗಿಗೆ ನೀಡಿರುವ ಅನುದಾನದ ಬಗ್ಗೆ ಬಹಿರಂಗ ಚರ್ಚೆಗೆ ಬರಲಿ, ತಾವೂ ಸಿದ್ಧರಿರುವದಾಗಿ ಸವಾಲು ಹಾಕಿದರು.

ಹಣ ಎಲ್ಲಿಗೆ ಹೋಗುತ್ತಿದೆ..?

ಬೆಲೆ ಏರಿಕೆ, ಜಿಎಸ್‌ಟಿ ಹೇರುವ ಮೂಲಕ ಕೇಂದ್ರ ಸರಕಾರ ಜನಸಾಮಾನ್ಯರ ರಕ್ತ ಹೀರುತ್ತಿದೆ. ತಿನ್ನುವ ಅನ್ನಕ್ಕೂ ಜಿಎಸ್‌ಟಿ ಹಾಕಲಾಗಿದೆ. ಇದಾ ಅಚ್ಚೇ ದಿನ್ ಎಂದು ಪ್ರಶ್ನಿಸಿದ ಲಕ್ಷö್ಮಣ್, ಬ್ಯಾಂಕ್, ಎಲ್‌ಐಸಿ ಸೇರಿದಂತೆ ಸರಕಾರದ ಸ್ವಾಮ್ಯತೆಯ ಸಂಸ್ಥೆಗಳನ್ನು ಖಾಸಗೀಕರಣ ಮಾಡಲಾಗುತ್ತಿದೆ. ಜನರಿಂದ ಸಂಗ್ರಹಿಸುತ್ತಿರುವ ಹಣ ಎಲ್ಲಿಗೆ ಹೋಗುತ್ತಿದೆ ಎಂದು ಕೇಳಿದರು.

ವಿಪಕ್ಷವನ್ನು ದಮನ ಮಾಡುವ ಯತ್ನ

ಕೆಪಿಸಿಸಿ ಉಪಾಧ್ಯಕ್ಷ, ವಿನಯ್‌ಕುಮಾರ್ ಸೊರಕೆ ಮಾತನಾಡಿ, ಭಾರತ ಅಮೃತ ಮಹೋತ್ಸವ ಹಾಗೂ ಸಿದ್ಧರಾಮಯ್ಯ ಅವರಿಗೆ ೭೫ ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿಯೂ ಪಾದಯಾತ್ರೆ ಮಾಡುವ ಮೂಲಕ ಬೃಹತ್ ಸಂಖ್ಯೆಯಲ್ಲಿ ಬೆಂಗಳೂರಿನಲ್ಲಿ ಕೆಪಿಸಿಸಿ ನೇತೃತ್ವದಲ್ಲಿ ಸಮಾವೇಶ ಏರ್ಪಡಿಸಲಾಗಿದೆ ಎಂದು ತಿಳಿಸಿದರು. ಕೇಂದ್ರ ಸರಕಾರ ರಾಹುಲ್ ಗಾಂಧಿ ಹಾಗೂ ಪಕ್ಷದ ನಾಯಕಿ ಸೋನಿಯಾ ಗಾಂಧಿ ಅವರುಗಳನ್ನು ಇಡಿ ತನಿಖೆಗೆ ಒಳಪಡಿಸುವ ಮೂಲಕ ವಿಪಕ್ಷಗಳನ್ನು ದಮನ ಮಾಡುವ ಕಾರ್ಯ ಮಾಡುತ್ತಿದೆ. ಸೋನಿಯಾ ಗಾಂಧಿ ಅವರಿಗೆ ತಾ. ೨೩ ರಂದು ವಿಚಾರಣೆಗೆ ಹಾಜರಾಗಲು ಸೂಚಿಸಲಾಗಿದೆ. ಕೇಂದ್ರದ ಈ ನೀತಿಯನ್ನು ವಿರೋಧಿಸಿ ತಾ. ೨೧ ರಂದು ದೇಶದ ಆಯಾ ರಾಜ್ಯಗಳ ರಾಜಧಾನಿಗಳಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ತಾ. ೨೨ ರಂದು ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಯಲಿದ ಎಂದು ತಿಳಿಸಿದರು.

ಲೋಕಾಯುಕ್ತ ತನಿಖೆಗೆ

ಕೆಪಿಸಿಸಿ ಪ್ರಮುಖ, ಹಿರಿಯ ವಕೀಲ ಚಂದ್ರಮೌಳಿ ಮಾತನಾಡಿ, ಜಿಲ್ಲೆಯಲ್ಲಿ ವಿಕೋಪ, ಭೂಕಂಪನಗಳು ಸಂಭವಿಸುತ್ತಿದ್ದರೂ ಸರಕಾರ ಎಚ್ಚೆತ್ತುಕೊಂಡಿಲ್ಲ. ವಿಕೋಪಕ್ಕೆ ಪ್ರತ್ಯೇಕ ನಿಧಿಯಿದ್ದು, ಅದನ್ನೂ ಬಳಸಿಕೊಂಡಿಲ್ಲ. ಮುನ್ನೆಚ್ಚರಿಕೆ ವಹಿಸುವಲ್ಲಿಯೂ ವಿಫಲವಾಗಿದೆ. ವಿಪತ್ತು ನಿರ್ವಹಣಾ ಘಟಕವನ್ನು ಜಿಲ್ಲೆಯಲ್ಲಿ ಶಾಶ್ವತವಾಗಿ ಇರಿಸಿಕೊಳ್ಳಬೇಕಾಗುತ್ತದೆ, ಸಂಸದರು, ಶಾಸಕರು, ಸರಕಾರದಿಂದ ಇದು ಸಾಧ್ಯವಾಗುತ್ತಿಲ್ಲ. ಇನ್ನಾದರೂ ಮುನ್ನೆಚ್ಚರಿಕೆಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಜಿಲ್ಲಾಡಳಿತದ ಬಳಿಯ ತಡೆಗೋಡೆ ಕುಸಿತಕ್ಕೆ ಕಳಪೆ ಕಾಮಗಾರಿ ಕಾರಣ ಎಂದ ಅವರು, ಇದನ್ನು ಲೋಕಾಯುಕ್ತ ತನಿಖೆಗೆ ಒಳಪಡಿಸಲು ಒತ್ತಾಯಿಸುವದಾಗಿ ಹೇಳಿದರು.

ಪಶ್ಚಿಮ ಘಟ್ಟಗಳ ಸೂಕ್ಷö್ಮ ಪರಿಸರ ತಾಣಕ್ಕೆ ಸಂಬAಧಿಸಿದAತೆ ಜು.೪ರಂದು ಅಧಿಸೂಚನೆ ಹೊರಡಿಸಲಾಗಿದೆ. ಕೆಲವು ಪರಿಸರವಾದಿಗಳ ಮಾತು ಕೇಳಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದರಿಂದಾಗಿ ಜನಜೀವನ ಅಸ್ತವ್ಯಸ್ತಗೊಳ್ಳಲಿದೆ. ಎಲ್ಲ ರೀತಿಯ ಗಣಿಗಾರಿಕೆಗಳು ಸ್ಥಗಿತಗೊಳ್ಳಲಿದ್ದು, ಸ್ವಂತ ಉಪಯೋಗಕ್ಕೂ ಮರಳು, ಕಲ್ಲು ಸಿಗದಂತಾಗುವದು. ಹಾಗಾಗಿ ಜಲ್ಲೆಯ ಜನತೆ ಗುಳೆ ಹೋಗುವ ಸಾಧ್ಯತೆ ಇದೆ ಎಂದು ಹೇಳಿದರು. ಈ ಸಂಬAಧ ವಿವಿಧ ಸಂಘಟನೆಗಳು ತಾ. ೨೮ ರಂದು ಹಮ್ಮಿಕೊಂಡಿರುವ ಬಂದ್‌ಗೆ ಕಾಂಗ್ರೆಸ್ ಬೆಂಬಲಿಸುವದಾಗಿ ಹೇಳಿದರು.

ಧರ್ಮ ರಾಜಕೀಯ ಬೇಡ

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ ಮಾತನಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿಯಾದ ಹೇಳಿಕೆಗಳನ್ನು ಹರಿಯಬಿಟ್ಟು ಸಮುದಾಯಗಳ ನಡುವೆ ಒಡಕು ಮೂಡಿಸುವ ಹುನ್ನಾರವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಗೋಷ್ಠಿಯಲ್ಲಿ ವಿಧಾನಪರಿಷತ್ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ, ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕೆ.ಕೆ. ಮಂಜುನಾಥ್ ಕುಮಾರ್ ಇದ್ದರು.