ವಿಶೇಷ ವರದಿ: ರಫೀಕ್ ತೂಚಮಕೇರಿ

ಪೊನ್ನಂಪೇಟೆ, ಜು.೧೮: ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಹಾಮಳೆಗೆ ದಕ್ಷಿಣ ಕೊಡಗಿನ ಬಿಟ್ಟಂಗಾಲ ಸಮೀಪದ ವಿ. ಬಾಡಗ ಗ್ರಾಮ ತತ್ತರಿಸಿ ಹೋಗಿದೆ. ಎಡೆಬಿಡದೆ ಸುರಿಯುತ್ತಿರುವ ಭಾರಿ ಮಳೆಗೆ ವ್ಯಾಪಕವಾಗಿ ಕಾಫಿ ಉದುರುತ್ತಿದ್ದು, ಪರಿಣಾಮ ನೆಲದಲ್ಲಿ ಕಾಫಿಯ ರಾಶಿಯೇ ಕಂಡುಬರುತ್ತಿದೆ.

ಇದರಿಂದ ತೀವ್ರವಾಗಿ ಕಂಗಾಲಾಗಿರುವ ಬೆಳೆಗಾರರು ಸರಕಾರದ ನೆರವಿಗಾಗಿ ಎದುರು ನೋಡುತ್ತಿದ್ದಾರೆ. ಈ ವರ್ಷದ ಭಾರಿ ಮಳೆ ಗ್ರಾಮದ ಜನರ ಜನಜೀವನ ವನ್ನೇ ಅಸ್ತವ್ಯಸ್ತಗೊಳಿಸಿದೆ. ಈ ಕಾರಣದಿಂದ ಇದೊಂದು ವಿಶೇಷ ಪ್ರಕರಣ ಎಂದು ಪರಿಗಣಿಸಿ, ವಿ.ಬಾಡಗ ಗ್ರಾಮವನ್ನು ಈಗಿನಿಂದಲೇ ಅತಿವೃಷ್ಟಿ ಪೀಡಿತ ಗ್ರಾಮವೆಂದು ಘೋಷಿಸಬೇಕೆಂದು ಗ್ರಾಮದ ಬೆಳೆಗಾರರು ಒತ್ತಾಯಿಸಿದ್ದಾರೆ.

ಪ್ರತಿ ವರ್ಷ ಈ ಭಾಗಕ್ಕೆ ಮಳೆಯಾಗುತ್ತಿದ್ದರೂ ಈ ವರ್ಷ ಸುರಿದ ಮಳೆ ಕೃಷಿಗೆ ಬಾರಿ ಹೊಡೆತ ನೀಡಿದೆ. ಒಂದು ತಿಂಗಳ ಅವಧಿಯಲ್ಲಿ ವಿ.ಬಾಡಗ ಗ್ರಾಮಕ್ಕೆ೧೦೦ ಇಂಚಿಗೂ ಹೆಚ್ಚು ಮಳೆ ಸುರಿದಿದೆ. ಕಳೆದ ವಾರ ಒಂದೇ ದಿನ ೧೧.೬೦ ಇಂಚು ಮಳೆ ಬಿದ್ದು ದಾಖಲೆ ನಿರ್ಮಿಸಿದೆ. ದಿನದ ೨೪ ತಾಸುಗಳ ಕಾಲ ನಿರಂತರವಾಗಿ ಬೀಳುವ ಮಳೆ ವಿಶೇಷವಾಗಿ ಕಾಫಿ ಮತ್ತು ಕರಿಮೆಣಸು ಕೃಷಿಗೆ ದೊಡ್ಡ ಹೊಡೆತ ನೀಡಿದೆ. ಮಳೆಯೊಂದಿಗೆ ಬೀಸುವ ಭಾರಿ ಗಾಳಿ ಕೃಷಿಕರ ತೋಟದಲ್ಲಿ ಮರ ಮತ್ತು ಕರಿಮೆಣಸು ಬಳ್ಳಿ ನೆಲಕಚ್ಚಲು ಕಾರಣವಾಗಿದೆ. ಕೃಷಿಕರ ಆದಾಯದ ಪ್ರಮುಖ ಮೂಲವಾಗಿರುವ ಕಾಫಿ ಮತ್ತು ಕರಿಮೆಣಸು ನಾಶಗೊಂಡರೆ ಬದುಕು ಕಂಗಾಲಾಗುತ್ತದೆ ಎಂದು ತಮ್ಮ ಅಳಲು ತೋಡಿಕೊಂಡಿರುವ ಗ್ರಾಮದ ಕೃಷಿಕರು, ಸರಕಾರದ ನೆರವು ಮಾತ್ರ ಇದೀಗ ನಮಗೆ ಉಳಿದಿರುವ ಮಾರ್ಗ ಎಂದು ಹೇಳಿದ್ದಾರೆ.

ನಿರಂತರವಾಗಿ ಮಳೆ ಸುರಿದ ಕಾರಣ ಗ್ರಾಮದ ಬಹುತೇಕ ತೋಟಗಳಲ್ಲಿ, ರಸ್ತೆ ಬದಿಗಳಲ್ಲಿ ಜಲ ಎದ್ದು ತೋಡಿನಂತೆ ಹರಿಯತೊಡಗಿದೆ, ಕೆಲವು ತೋಟಗಳಲ್ಲಿ ಜಲಪಾತದಂತೆ ನೀರಿನ ಜಲಧಾರೆ ಹರಿಯುತ್ತಿದೆ. ಇದು ಮುಂದೆ ಕಾಫಿ ತೋಟಕ್ಕೆ ಬಹಳಷ್ಟು ಹಾನಿ ಉಂಟು ಮಾಡುವ ಮುನ್ಸೂಚನೆಯಾಗಿದೆ. ಗಿಡಗಳಿಗೆ ಹಾಕಿದ ಗೊಬ್ಬರ ನೀರು ಪಾಲಾಗಿದೆ. ದುಡಿದ ಶ್ರಮದ ಫಲವಾಗಿ ಉತ್ತಮವಾಗಿ ಬಂದಿದ್ದ ಕಾಫಿ ಪಸಲು ಮಣ್ಣು ಪಾಲಾಗಿದೆ ಎಂದು ನೋವು ಹೇಳಿಕೊಂಡಿರುವ ಬೆಳೆಗಾರರು, ಮೊದಲೇ ಕುಗ್ರಾಮವೆಂದು ಪರಿಗಣಿಸಲ್ಪಟ್ಟಿದ್ದ ವಿ. ಬಾಡಗ ಗ್ರಾಮದ ರಸ್ತೆಗಳು ಮಳೆಯಿಂದಾಗಿ ತೀವ್ರವಾಗಿ ಹಾನಿಗೊಂಡಿದೆ.

ಭಾರೀ ಮಳೆಯಿಂದಾಗಿ ಕೃಷಿಗೆ ಹಾನಿಯಾಗುತ್ತಿರುವುದು ಒಂದೆಡೆ ಯಾದರೆ ಕಾಡಾನೆಗಳ ಹಾವಳಿಯು ಈ ಭಾಗದ ಕೃಷಿಕರನ್ನು ಹೆಚ್ಚು ಬಾಧಿಸುತ್ತಿದೆ. ಕಾಫಿ ತೋಟಗಳಲ್ಲಿ ದಿನಗಟ್ಟಲೆ ಬೀಡುಬಿಡುವ ಕಾಡಾನೆಗಳ ಹಿಂಡು ಫಸಲು ಸೇರಿದಂತೆ ಕಾಫಿ ತೋಟವನ್ನೇ ನಾಶಗೊಳಿಸುತ್ತಿದೆ. ಜೊತೆಗೆ ಗ್ರಾಮದ ಸುತ್ತಮುತ್ತ ಆಗಿಂದಾಗೆ ಕಾಣಿಸಿಕೊಳ್ಳುತ್ತಿರುವ ಹುಲಿ ಗ್ರಾಮಸ್ಥರ ನಿದ್ದೆಗೆಡಿಸಿದೆ. ವನ್ಯಜೀವಿಗಳ ಹಾವಳಿಯಿಂದಾಗಿ ವಿದ್ಯಾರ್ಥಿಗಳು ಪ್ರತಿದಿನ ಜೀವಭಯದಿಂದಲೇ ಶಾಲಾ ಕಾಲೇಜುಗಳಿಗೆ ತೆರಳುವ ಅನಿವಾರ್ಯ ಪರಿಸ್ಥಿತಿಯೊಂದಿಗೆ ದಿನದೂಡು ವಂತಾಗಿದೆ ಎಂದು ತಮ್ಮ ಯಾತನೆಯನ್ನು ವಿವರಿಸಿರುವ ಗ್ರಾಮಸ್ಥರು, ಈ ಕುರಿತು ಅರಣ್ಯ ಇಲಾಖೆಗೆ ನಿರಂತರವಾಗಿ ಮನವಿ ಸಲ್ಲಿಸುತ್ತಿದ್ದರೂ ನಿರೀಕ್ಷಿತ ಫಲ ಕಾಣುತ್ತಿಲ್ಲ ಎಂದು ದೂರಿದ್ದಾರೆ.

‘ಶಕ್ತಿ'ಯೊಂದಿಗೆ ಮಾತನಾಡಿದ ಗ್ರಾಮದ ಮುಖಂಡ ಅಮ್ಮುಣಿಚಂಡ ರಂಜಿ ಪೂಣಚ್ಚ ಅವರು, ಈ ಭಾಗಕ್ಕೆ ವಾರ್ಷಿಕವಾಗಿ ಹೆಚ್ಚು ಮಳೆಯಾಗು ತ್ತಿದ್ದರೂ ಕೃಷಿಗಳಿಗೆ ದೊಡ್ಡ ಪ್ರಮಾಣದ ಹಾನಿಯಾಗುತ್ತಿರಲಿಲ್ಲ. ಆದರೆ ಈ ವರ್ಷದ ಮಳೆ ಕೃಷಿಕರನ್ನು ಕಣ್ಣೀರಿನಿಂದ ಕೈ ತೊಳೆಯುವಂತೆ ಮಾಡಿದೆ ಎಂದು ನೋವು ಹಂಚಿಕೊAಡಿದ್ದಾರೆ. ಜಿಲ್ಲಾಧಿಕಾರಿಗಳು ಕೂಡಲೇ ಗ್ರಾಮಕ್ಕೆ ಭೇಟಿ ನೀಡಿ ಇಲ್ಲಿನ ಬೆಳೆಗಾರರು ಅನುಭವಿಸುತ್ತಿರುವ ನರಕಯಾತನೆಯ ನೈಜತೆಯ ಬಗ್ಗೆ ಪರಿಶೀಲಿಸಬೇಕು. ಅಲ್ಲದೆ ಕಾಫಿ ಮಂಡಳಿಯ ಅಧಿಕಾರಿಗಳು ಮತ್ತು ವಿಜ್ಞಾನಿಗಳು ಗ್ರಾಮಕ್ಕೆ ಭೇಟಿ ನೀಡಿ ಕಾಫಿ ಬೆಳೆಗಾಗಿರುವ ಹಾನಿಯನ್ನು ಖುದ್ದು ವೀಕ್ಷಿಸಿ ವಸ್ತುಸ್ಥಿತಿಯ ವರದಿಯನ್ನು ಸಲ್ಲಿಸಬೇಕು. ಈ ಆಧಾರದಲ್ಲಿ ವಿ.ಬಾಡಗ ಗ್ರಾಮವನ್ನು ಅತಿವೃಷ್ಟಿ ಪೀಡಿತ ಗ್ರಾಮ ಎಂದು ಘೋಷಿಸಿ ಬೆಳೆಗಾರಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.