ಮಡಿಕೇರಿ, ಜು. ೧೮: ಇತ್ತೀಚೆಗೆ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರು ಮಳೆ ಹಾನಿ ವೀಕ್ಷಣೆಗೆ ಜಿಲ್ಲೆಗೆ ಆಗಮಿಸಿದ್ದ ಸಂದರ್ಭ ಸರಕಾರದ ಪರಿಷ್ಕೃತ ಆದೇಶದಂತೆ ಭೂಪರಿವರ್ತನೆ ಮಾಡಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದ್ದು, ಅದರಂತೆ ಜಿಲ್ಲಾಧಿಕಾರಿಗಳು ತಮ್ಮ ಕಚೇರಿಯಲ್ಲಿರುವ ಭೂಪರಿವರ್ತನೆ ಕಡತಗಳನ್ನು ಕೂಡಲೇ ವಿಲೇವಾರಿ ಮಾಡುವಂತೆ ಬಿಜೆಪಿ ಗ್ರಾಮಾಂತರ ಮಂಡಲ ಒತ್ತಾಯಿಸಿದೆ.

ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಂಡಲದ ಅಧ್ಯಕ್ಷ ಕಾಂಗಿರ ಸತೀಶ್ ಮಾತನಾಡಿದರು. ಕೆಲವರು ಪರಿಸರ ಸಂರಕ್ಷಣೆ ಮಾಡುವ ಹೆಸರಿನಲ್ಲಿ ಯಾವುದೇ ಆಧಾರವಿಲ್ಲದೆ ಇತ್ತೀಚೆಗೆ ಜಿಲ್ಲೆಯ ಕೆಲವು ಭಾಗಗಳಲ್ಲಿ ಆದಂತಹ ಸಣ್ಣ ಪ್ರಮಾಣದ ಭೂಕಂಪ ಮತ್ತು ಭೂಮಿಯ ಒಳಗಡೆ ಆಗುವ ಶಬ್ಧವನ್ನು ನೆಪವಾಗಿಟ್ಟುಕೊಂಡು ಭೂ ಪರಿವರ್ತನೆ ಮಾಡಬಾರದು ಹಾಗೂ ಹೋಂಸ್ಟೇ, ರೆಸಾರ್ಟ್ಗಳನ್ನು ಬಂದ್ ಮಾಡಬೇಕು ಎಂಬುದಾಗಿ ಆಗ್ರಹಿಸುತ್ತಿದ್ದು, ಇದಕ್ಕೆ ಯಾವುದೇ ವೈಜ್ಞಾನಿಕ ಆಧಾರಗಳು ಇಲ್ಲ.

ಇತ್ತೀಚೆಗೆ ಭೂಕಂಪನ ಆದಂತಹ ಪ್ರದೇಶಗಳಾದ ಕರಿಕೆ, ಚೆಂಬು, ಪೆರಾಜೆ ಮತ್ತು ಸಂಪಾಜೆಗಳಲ್ಲಿ ಯಾವುದೇ ಹೋಂಸ್ಟೇ ಮತ್ತು ರೆಸಾರ್ಟ್ಗಳಿಲ್ಲ. ಭೂವಿಜ್ಞಾನಿಗಳು ಸ್ಥಳ ಪರಿಶೀಲನೆ ಮಾಡಿ ಭೂ ಪರಿವರ್ತನೆಗೂ ಭೂಕಂಪನಕ್ಕೂ ಯಾವುದೇ ಸಂಬAಧವಿಲ್ಲವೆAದು ತಿಳಿಸಿದ್ದಾರೆ ಎಂದರು.

೨೦೧೮-೧೯ರಲ್ಲಿ ಆದ ಭೂಕುಸಿತದ ಪರಿಣಾಮಗಳನ್ನು ಪರಿಶೀಲಿಸಿ ಭೂ ವಿಜ್ಞಾನಿಗಳು ಸರಕಾರಕ್ಕೆ ವರದಿಯನ್ನು ನೀಡಿದ್ದು, ಈ ವರದಿಯನ್ನು ಆಧರಿಸಿ ಸರಕಾರವು ಕಳೆದ ವರ್ಷ ೨೭.೦೯.೨೦೨೧ರಲ್ಲಿ ಜಿಲ್ಲಾಧಿಕಾರಿಗಳಿಗೆ ಸ್ಥಳ ಪರಿಶೀಲಿಸಿ ಭೂ ಪರಿವರ್ತನೆಗೆ ಆದೇಶ ನೀಡುವ ಅಧಿಕಾರವನ್ನು ನೀಡಿತ್ತು. ಅದರಂತೆ ಜಿಲ್ಲಾಧಿಕಾರಿಗಳು ಸರಕಾರದ ಆದೇಶದಂತೆ ಈಗಾಗಲೇ ಭೂ ಪರಿವರ್ತನೆ ಮಾಡುತ್ತಿದ್ದಾರೆ. ಇತ್ತೀಚೆಗೆ ಇದನ್ನು ಪುರಸ್ಕರಿಸಿ ಕಂದಾಯ ಇಲಾಖಾ ಪ್ರಧಾನ ಕಾರ್ಯದರ್ಶಿಗಳು ಜಿಲ್ಲಾಧಿಕಾರಿಗಳ ಸಭೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಪೂರ್ಣ ಅಧಿಕಾರವನ್ನು ಕೂಡ ನೀಡಿದ್ದಾರೆ.

ಜಿಲ್ಲಾಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಜಿಲ್ಲಾ ಮಟ್ಟದಲ್ಲಿರುವ ಸಮಿತಿಯ ಶಿಫಾರಸ್ಸಿನೊಂದಿಗೆ ಕೃಷಿ ಭೂಮಿಯನ್ನು ಕೃಷಿಯೇತರ ಚಟುವಟಿಕೆಗಳಿಗೆ ಉಪಯೋಗಿಸಲು ಆದೇಶ ನೀಡಲಾಗಿದೆ. ಸರಕಾರದ ಈ ರೀತಿಯ ಸ್ಪಷ್ಟ ಆದೇಶವಿದ್ದರೂ ಇಲ್ಲಿನ ಕೆಲವೇ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಪರಿಸರದ ಹೆಸರಿನಲ್ಲಿ ಜಿಲ್ಲಾಡಳಿತದ ಮೇಲೆ ಇಲ್ಲಸಲ್ಲದ ಆರೋಪ ಮಾಡುವುದನ್ನು ಪಕ್ಷವು ತೀವ್ರವಾಗಿ ಖಂಡಿಸುತ್ತದೆ ಎಂದು ಹೇಳಿದರು.

ಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಡೀನ್ ಬೋಪಣ್ಣ, ಕೋಡಿರ ಪ್ರಸನ್ನ, ಉಪಾಧ್ಯಕ್ಷ ಬೆಪ್ಪುರನ ಮೇದಪ್ಪ, ಕಾರ್ಯದರ್ಶಿ ಪಾಡಿಯಮ್ಮಂಡ ಮನು ಮಹೇಶ್ ಉಪಸ್ಥಿತರಿದ್ದರು.