ಶ್ರೀಮಂಗಲ, ಜು. ೧೯: ಶ್ರೀಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೀರುಗ ಗ್ರಾಮದಲ್ಲಿ ಮಳೆ-ಗಾಳಿ ಹಿನ್ನೆಲೆ ಕಳೆದ ೧೦ ದಿನಗಳಿಂದ ಕಡಿತವಾಗಿದ್ದ ವಿದ್ಯುತ್ ಸಂಪರ್ಕವನ್ನು ಮಳೆ ಆರ್ಭಟ ತಗ್ಗಿದ್ದರು ನೀಡದೆ ಸತಾಯಿಸುತ್ತಿದ್ದ ಸೆಸ್ಕ್ ಇಲಾಖೆ ಕಾರ್ಯವೈಖರಿಗೆ ಬೇಸತ್ತು ಶ್ರೀಮಂಗಲ ವಿದ್ಯುತ್ ಸರಬರಾಜು ಕೇಂದ್ರದ ಕಚೇರಿ ಎದುರು ಏಕಾಂಗಿಯಾಗಿ ವ್ಯಕ್ತಿಯೋರ್ವರು ಧರಣಿ ನಡೆಸಿದರು.

ಶ್ರೀಮಂಗಲ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಮಾಣೀರ ಮುತ್ತಪ್ಪ ಅವರು ಧರಣಿ ನಡೆಸಿ ಪ್ರತಿಭಟನೆ ಮಾಡಿದರು.

ಕಳೆದ ೧೦ ದಿನಗಳಿಂದ ಬೀರುಗ ಗ್ರಾಮಕ್ಕೆ ವಿದ್ಯುತ್ ಸ್ಥಗಿತವಾಗಿದ್ದು ವಿದ್ಯುತ್ ಸಂಪರ್ಕ ನೀಡದ ಅಧಿಕಾರಿಗಳು ಹಾಗೂ ಲೈನ್‌ಮೆನ್‌ಗಳ ವಿರುದ್ಧ ಅವರು ಆಕ್ರೋಶ ವ್ಯಕ್ತಪಡಿಸಿದರು. ಮನೆಯಲ್ಲಿ ಓದುವ ಮಕ್ಕಳಿದ್ದು, ಹಾಗೆಯೇ ಕುಡಿಯುವ ನೀರಿಗೂ ವಿದ್ಯುತ್ ಇಲ್ಲದೇ ಸಮಸ್ಯೆ ಉಂಟಾಗಿದೆ.

ಸೆಸ್ಕ್ ಕಚೇರಿಗೆ ಬಂದರು ಅಧಿಕಾರಿಗಳು, ಲೈನ್‌ಮೆನ್‌ಗಳು ಕಾಣಸಿಗುವುದಿಲ್ಲ. ದೂರವಾಣಿ ಕರೆ ಸ್ವೀಕರಿಸುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿ ಧರಣಿ ನಡೆಸಿದರು.

ಧರಣಿ ವಿಚಾರ ತಿಳಿದು ಸೆಸ್ಕ್ ಇಇ ಅಶೋಕ್ ಅವರ ನಿರ್ದೇಶನದಂತೆ ಸೆಸ್ಕ್ ಗೋಣಿಕೊಪ್ಪ ಎ.ಇ.ಇ. ನೀಲ್ ಶೆಟ್ಟಿ, ಶ್ರೀಮಂಗಲ ಜೆ.ಇ. ಮನುಕುಮಾರ್ ಅವರು ವಿದ್ಯುತ್ ಸಂಪರ್ಕವನ್ನು ಮಂಗಳವಾರ ಮಧ್ಯಾಹ್ನದ ವೇಳೆಗೆ ಒದಗಿಸಿದ ಹಿನ್ನೆಲೆ ಧರಣಿಯನ್ನು ಅಂತ್ಯಗೊಳಿಸಲಾಯಿತು.

ತಾ. ೨೫ಕ್ಕೆ ಪ್ರತಿಭಟನೆ: ತಾ. ೨೫ಕ್ಕೆ ಶ್ರೀಮಂಗಲ ಸೆಸ್ಕ್ ಕಚೇರಿ ಎದುರು ಶ್ರೀಮಂಗಲ ಚೇಂಬರ್ ಆಫ್ ಕಾಮರ್ಸ್ ಸಂಘಟನೆ ನೇತೃತ್ವದಲ್ಲಿ ಮತ್ತು ಇತರ ಸಂಘಟನೆ ಮತ್ತು ಸಾರ್ವಜನಿಕರ ಬೆಂಬಲದಲ್ಲಿ ಸೆಸ್ಕ್ ಕಾರ್ಯವೈಖರಿ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಚೇಂಬರ್ ಅಧ್ಯಕ್ಷ ಮಾಣೀರ ಮುತ್ತಪ್ಪ ತಿಳಿಸಿದ್ದಾರೆ.