ವಿಶೇಷ ವರದಿ: ಹೆಚ್.ಕೆ. ಜಗದೀಶ್ ಗೋಣಿಕೊಪ್ಪಲು, ಜು. ೧೯: ದಕ್ಷಿಣ ಕೊಡಗಿನ ಬಹುತೇಕ ಗ್ರಾಮಗಳಲ್ಲಿ ನಿರಂತರ ಕಾಡಾನೆಗಳು ಹಿಂಡು ಹಿಂಡಾಗಿ ಕಾಣಿಸಿ ಕೊಳ್ಳುತ್ತಿದ್ದು, ಈ ಭಾಗದ ರೈತರು, ಕಾರ್ಮಿಕರು ತೀವ್ರ ರೀತಿಯ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬ್ರಹ್ಮಗಿರಿ ತಪ್ಪಲು ಹಾಗೂ ನಾಗರಹೊಳೆ ರಾಷ್ಟಿçÃಯ ಉದ್ಯಾನವನದಿಂದ ಆಗಮಿಸಿರುವ ನೂರಾರು ಕಾಡಾನೆಗಳು ಈ ಭಾಗದ ರೈತರ ಕಾಫಿ ತೋಟದಲ್ಲಿ ನೆಲೆ ನಿಂತಿವೆ. ಹಲವು ಕಾಡಾನೆಗಳು ಕಾಫಿ ತೋಟದಲ್ಲಿಯೇ ತನ್ನ ವಂಶಾಭಿವೃದ್ಧಿ ಮಾಡಿಕೊಳ್ಳುತ್ತಿದ್ದು, ಆನೆಗಳ ಸಂತತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ.
ರೈತರು ತಮ್ಮ ತೋಟ ಹಾಗೂ ಭತ್ತದ ಗದ್ದೆಗಳನ್ನು ನಿರ್ವಹಿಸುವುದೇ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಹಲವು ರೈತರು ತೋಟ ಹಾಗೂ ಭತ್ತದ ಗದ್ದೆಗಳಿಗೆ ಸೋಲಾರ್ ತಂತಿ ಬೇಲಿ ಅಳವಡಿಸಿದ್ದರೂ ಇವುಗಳನ್ನು ಲೆಕ್ಕಿಸದೆ ರಾತ್ರಿಯ ವೇಳೆ ಗದ್ದೆ ಹಾಗೂ ತೋಟಗಳಿಗೆ ಲಗ್ಗೆ ಇಡುತ್ತಿವೆ. ರೈತರ ತೋಟಗಳು ವಿಸ್ತಾರವಾಗಿರುವುದರಿಂದ ಹಾಗೂ ತೋಟದಲ್ಲಿ ಬಾಳೆ, ತೆಂಗು, ಅಡಿಕೆ ಹಲಸಿನ ಹಣ್ಣು ಇತ್ಯಾದಿ ಆಹಾರಗಳು ಹೆಚ್ಚಾಗಿ ಲಭಿಸುತ್ತಿರು ವುದರಿಂದ ಕಾಡಾನೆ ಹಿಂಡುಗಳು ಒಂದು ತೋಟದಿಂದ ಮತ್ತೊಂದು ತೋಟದತ್ತ ಹೆಜ್ಜೆ ಹಾಕುತ್ತಿವೆ. ಇದರಿಂದ ಈ ಭಾಗದ ರೈತರ ಪರಿಸ್ಥಿತಿ ಅಯೋಮಯವಾಗಿದೆ.
ಅರಣ್ಯ ಇಲಾಖೆಯ ಸಿಬ್ಬಂದಿಗಳು ತೋಟದಲ್ಲಿ ನೆಲೆ ನಿಂತಿರುವ ಕಾಡಾನೆಗಳನ್ನು ಓಡಿಸುವ ಪ್ರಯತ್ನ ಮಾಡಿದರೂ ಒಂದು ತೋಟದಿಂದ ಮತ್ತೊಂದು ತೋಟದ ಮಾರ್ಗವಾಗಿ ಅರಣ್ಯ ಪ್ರದೇಶ ತಲುಪುವಷ್ಟರಲ್ಲಿ ಕತ್ತಲೆ ಆವರಿಸುತ್ತಿದೆ. ಇದರಿಂದ ಬೆರಳೆಣಿಕೆಯ ಸಿಬ್ಬಂದಿಗಳಿAದ ಕಾಡಾನೆಗಳನ್ನು ಓಡಿಸಲು ಸಾಧ್ಯವಾಗುತ್ತಿಲ್ಲ. ಕಾಡಾನೆಯ ಹಿಂಡಿನಲ್ಲಿ ಮರಿ ಆನೆಗಳು ಕಂಡು ಬಂದಿರುವುದರಿAದ ಆನೆಗಳನ್ನು ಓಡಿಸುವುದು ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ತಮ್ಮ ಜೀವವನ್ನು ಪಣಕ್ಕಿಟ್ಟು ರೈತರ ತೋಟದಲ್ಲಿ ನೆಲೆ ನಿಂತಿರುವ ಕಾಡಾನೆಗಳನ್ನು ಓಡಿಸುವ ವೇಳೆ ಅನೇಕ ಸಿಬ್ಬಂದಿಗಳು ಸಮಸ್ಯೆಗಳನ್ನು ಎದುರಿಸಿದ್ದಾರೆ.
ಕಾಫಿ ತೋಟದಲ್ಲಿ ಆನೆಗಳ ಹೊಸ ಸಂತತಿಯೇ ಸೃಷ್ಟಿಯಾಗುತ್ತಿದೆ. ಇದರಿಂದಾಗಿ ರೈತರ ಬದುಕು ದುಸ್ತರವಾಗುತ್ತಿದೆ. ಭತ್ತ ಸೇರಿದಂತೆ ಹಲವು ಬಗೆಯ ಬೆಳೆಗಳನ್ನು ಬೆಳೆಯಲಾರದೆ ರೈತ ತನ್ನ ಭೂಮಿಯನ್ನು ಪಾಳು ಬಿಡುವ ಪರಿಸ್ಥಿತಿಗೆ ಈ ಕಾಡಾನೆಗಳು ತಂದೊಡ್ಡಿದೆ. ಇವುಗಳ ನಡುವೆ ಕಾರ್ಮಿಕರ ಸಹಕಾರದಿಂದ ಭೂಮಿಯನ್ನು ಹದಗೊಳಿಸಿ ಭತ್ತ ಬೆಳೆದರೂ ಇವುಗಳನ್ನು ನಡು ರಾತ್ರಿಯ ವೇಳೆ ಕಾಡಾನೆಗಳ ಹಿಂಡು ನುಗ್ಗಿ ಹಾಳು ಮಾಡುತ್ತಿದೆ. ಇದರಿಂದ ರೈತನ ಆರ್ಥಿಕ ವ್ಯವಸ್ಥೆಗೆ ಕೊಡಲಿ ಪೆಟ್ಟು ಬಿದ್ದಂತಾಗಿದೆ. ಅರಣ್ಯ ಪ್ರದೇಶದಲ್ಲಿ ಸೀಮಿತಗೊಂಡಿದ್ದ ಕಾಡಾನೆಗಳು ಇದೀಗ ಪ್ರತಿ ದಿನ ರೈತರ ತೋಟದಲ್ಲಿ ನಾಗರಿಕರಿಗೆ ದರ್ಶನ ನೀಡುತ್ತಿದೆ. ಅದರಲ್ಲೂ ಒಂಟಿ ಸಲಗ ಕಾಣಿಸಿಕೊಳ್ಳುತ್ತಿರುವುದು ಜನರಲ್ಲಿ ಭಯದ ವಾತಾವರಣ ನಿರ್ಮಾಣ ವಾಗಲು ಕಾರಣವಾಗಿದೆ. ಕಳೆದ ಒಂದು ದಶಕಗಳಿಂದ ಕಾಡಾನೆಗಳು ನಾಡಿನ ತೋಟದ ವಾಸವನ್ನು ಕಂಡುಕೊAಡಿವೆ. ಬಹುತೇಕ ಆನೆಗಳು ಕಾಫಿ ತೋಟದಲ್ಲಿಯೇ ವಾಸಿಸುತ್ತಿವೆ. ಇದರಿಂದ ಕೊಡಗಿನ ರೈತರ ಆರ್ಥಿಕತೆ ಹಾಗೂ ಬದುಕಿಗೆ ಪೆಟ್ಟು ಬಿದ್ದಿದೆ. ಅನೇಕ ಬಾರಿ ಅರಣ್ಯ ಸಿಬ್ಬಂದಿಗಳು ತೋಟದಿಂದ ಅರಣ್ಯಕ್ಕೆ ಅಟ್ಟಿದರೂ ಮತ್ತೆ ತೋಟಗಳತ್ತ ಮುಖಮಾಡುತ್ತಿವೆ. ಕೊಡಗಿನಲ್ಲಿ ಇತ್ತೀಚೆಗೆ ಅತಿ ಹೆಚ್ಚು ಮಾನವ-ಆನೆ ಸಂಘರ್ಷ ಪ್ರಕರಣಗಳು ದಾಖಲಾಗಿದ್ದು ಅನೇಕ ಕಾರ್ಮಿಕರ ಜೀವಗಳು ಕಾಡಾನೆಗಳಿಗೆ ಬಲಿಯಾಗಿವೆ.
ಆನೆ-ಮಾನವ ಸಂಘರ್ಷ ತಪ್ಪಿಸಲು ರ‍್ಯಾಪಿಡ್ ರೆಸ್ಪಾನ್ಸ್ ಟೀಂ’ ರಚನೆಯಾಗಿದ್ದು ಪಾಲಿಬೆಟ್ಟ ಸಮೀಪದ ಅರಣ್ಯ ಅಂಚಿನಲ್ಲಿ ಈ ತಂಡವು ಬೀಡುಬಿಟ್ಟಿವೆ. ೨೦ಕ್ಕೂ ಅಧಿಕ ತೋಟದಲ್ಲಿರುವ ಕಾಡಾನೆಗಳಿಗೆ ಆನೆ ಕಾಲರ್ ಅಳವಡಿಸಲಾಗಿದೆ. ಇಲ್ಲಿರುವ ಆರ್‌ಆರ್‌ಟಿ ತಂಡದ ಸಿಬ್ಬಂದಿಗಳು ಆನೆಗಳಲ್ಲಿ ಅಳವಡಿಸಿರುವ ರೇಡಿಯೋ ಕಾಲರ್‌ನಿಂದ ಬರುವ ಸಂದೇಶ ಅನುಸರಿಸಿ ಆನೆಗಳನ್ನು ಯಾವ ಭಾಗದಲ್ಲಿವೆ ಎಂಬ ಸಂದೇಶವನ್ನು ಪಡೆದು ಆ ಭಾಗದ ರೈತರ, ನಾಗರಿಕರ ಮೊಬೈಲ್ ಫೋನ್‌ಗಳಿಗೆ ಈ ಸಂದೇಶಗಳನ್ನು ರವಾನಿಸಿ ಆನೆಗಳ ಸಂಚಾರ ಇರುವುದರಿಂದ ಎಚ್ಚರಿಕೆಯಲ್ಲಿ ಇರುವಂತೆ ಸೂಚನೆ ರವಾನಿ ಸುತ್ತಿದ್ದಾರೆ. ಕಾಡಾನೆಗಳು ಆರ್‌ಆರ್‌ಟಿ ತಂಡದ ಕಣ್ಣಿಗೆ ಬಿದ್ದಲ್ಲಿ ಇವುಗಳನ್ನು ತಮ್ಮಲ್ಲಿರುವ ಪಟಾಕಿ ಸಿಡಿಸಿ ಕಾಡಿಗೆ ಓಡಿಸುವ ಪ್ರಯತ್ನ ಮಾಡುತ್ತಾರೆ. ಸಂದರ್ಭಕ್ಕ ನುಗುಣವಾಗಿ ಗುಂಡುಗಳನ್ನು ಗಾಳಿಯಲ್ಲಿ ಹಾರಿಸಿ ಆನೆಗಳನ್ನು ಓಡಿಸುತ್ತಾರೆ.
ಪ್ರಮುಖವಾಗಿ ದಕ್ಷಿಣ ಕೊಡಗಿನ ಬ್ರಹ್ಮಗಿರಿ ತಪ್ಪಲಿನ ಪ್ರದೇಶಗಳಾದ ಕುಟ್ಟ, ಮಂಚಳ್ಳಿ, ಕುರ್ಚಿ, ಕಾಯಿ ಮಾನಿ, ಕುಮಟೂರು, ಬೀರುಗ, ತೆರಾಲು, ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿರುವ ರೈತರ ಕಾಫಿ ತೋಟಗಳನ್ನೇ ಕಾಡಾನೆಗಳು ಆಶ್ರಯ ತಾಣವಾಗಿ ಮಾಡಿಕೊಂಡಿದೆ. ನಾಗರಹೊಳೆ ವ್ಯಾಪ್ತಿಗೆ ಬರುವ ಇರ್ಪು ಜಲಪಾತದ ಸಮೀಪ ಕಾಡಾನೆಗಳಿಗೆ ಹೆಚ್ಚಾಗಿ ನೀರು ಲಭಿಸುತ್ತಿರುವುದರಿಂದ ಈ ಸುತ್ತಮುತ್ತಲಿನಲ್ಲಿ ಕಾಡಾನೆಯ ಹಿಂಡು ತಮ್ಮ ಮರಿಗಳೊಂದಿಗೆ ಸುಖವಾಗಿ ನೆಲೆಸಿವೆ. ಕಾಡಾನೆಗಳು ಗದ್ದೆಗಳಿಗೆ ಧಾಂಗುಡಿ ಇಟ್ಟು ಹಾಳು ಮಾಡುವುದಲ್ಲದೆ ರೈತರ ಗದ್ದೆ ಬದಿಯಲ್ಲಿ ಕೆರೆಗಳಿಗೆ ಅಳವಡಿಸಿರುವ ಪಂಪ್ ಸೆಟ್‌ಗಳನ್ನು ಧ್ವಂಸಗೊಳಿಸಿ ಲಕ್ಷಾಂತರ ಬೆಲೆಯ ಪಂಪ್‌ಸೆಟ್‌ಗಳನ್ನು ಹಾಳು ಮಾಡುತ್ತಿವೆ.
ಕಾಡಾನೆಗಳು ರೈತರ ತೋಟಗಳಲ್ಲಿ ಕಾಣಿಸಿಕೊಳ್ಳುವ ಹಿನ್ನೆಲೆಯಲ್ಲಿ ರೈತನಿಗೆ ಆಗುತ್ತಿರುವ ಆರ್ಥಿಕ ಸಂಕಷ್ಟದ ಬಗ್ಗೆ ಹಲವು ಸಂಘಟನೆಗಳು ಪ್ರತಿಭಟನೆ ನಡೆಸಿ ಅಧಿಕಾರಿಗಳನ್ನು ಹಾಗೂ ಸಚಿವರನ್ನು ತರಾಟೆಗೆ ತೆಗೆದು ಕೊಂಡಿವೆ. ಈ ವೇಳೆ ಅಧಿಕಾರಿಗಳು ಆನೆ-ಮಾನವ ಸಂಘರ್ಷ ತಡೆಯಲು ಪ್ರಯತ್ನಗಳು ನಡೆಯುತ್ತಿವೆ ಎಂದು ಸಮಧಾನದ ಉತ್ತರ ನೀಡಿ ತೆರಳುತ್ತಿದ್ದಾರೆ. ಆನೆ ಕಂದಕ, ರೈಲ್ವೆ ಬ್ಯಾರಿಕೇಡ್ ಹಾಗೂ ಸೋಲಾರ್ ಬೇಲಿಗಳನ್ನು, ತಂತಿಗಳನ್ನು ಅಳವಡಿಸಲು ಈಗಾಗಲೇ ಕೋಟ್ಯಾಂತರ ಹಣವನ್ನು ಇಲಾಖೆಯು ವ್ಯಯ ಮಾಡಿದೆ. ಆದರೆ ತಿತಿಮತಿ ಸುಳುಗೋಡು ಮಾರ್ಗದಲ್ಲಿ ರೈಲ್ವೆ ಬ್ಯಾರಿಕೇಡ್ ಕಾಮಗಾರಿ ಕಳೆದ ಎರಡು ವರ್ಷಗಳಿಂದಲೂ ನಡೆಯುತ್ತಿದ್ದರೂ ಇನ್ನೂ ಕೂಡ ಪೂರ್ಣ ಪ್ರಮಾಣದಲ್ಲಿ ಕಾಮಗಾರಿ ಮುಕ್ತಾಯಗೊಂಡಿಲ್ಲ. ಇದರಿಂದ ಈ ಭಾಗದ ಕಾಡಾನೆಗಳು ರಾತ್ರಿಯ ವೇಳೆ ಕಾಫಿ ತೋಟದಲ್ಲಿ ನೆಲೆ ನಿಂತು ಮುಂಜಾನೆಯ ವೇಳೆ ಅರಣ್ಯ ಪ್ರದೇಶಕ್ಕೆ ತೆರಳುವ ವೇಳೆ ಮಾನವನ ಮೇಲೆ ದಾಳಿಗಳು ನಡೆಯುತ್ತಿವೆ. ಇದರಿಂದ ಅಮಾಯಕ ಕಾರ್ಮಿಕರು ಬಲಿಯಾಗುತ್ತಿದ್ದಾರೆ.