ಕಣಿವೆ, ಜು. ೧೮: ಸಾಕಾನೆಗಳನ್ನು ನಿರ್ವಹಿಸುವ ಆನೆಗಳ ಮಾವುತರು ಹಾಗೂ ಕಾವಾಡಿಗಳ ಸಂಘದ ಸಭೆ ದುಬಾರೆಯ ಸಾಕಾನೆಯ ಶಿಬಿರದಲ್ಲಿ ಸಂಘದ ಕೇಂದ್ರ ಸಮಿತಿ ಉಪಾಧ್ಯಕ್ಷರು ಆದ ದುಬಾರೆಯ ಹಿರಿಯ ಮಾವುತ ಜೆ.ಕೆ. ಡೋಬಿ ಅಧ್ಯಕ್ಷತೆಯಲ್ಲಿ ನಡೆಯಿತು.
ಆನೆಗಳ ಮಾವುತರು ಹಾಗೂ ಕಾವಾಡಿಗಳಿಗೆ ಹೆಚ್ಚಿನ ವೇತನ ನೀಡುವ ಬಗ್ಗೆ ಕಳೆದ ಅನೇಕ ವರ್ಷಗಳ ಹಿಂದೆಯೇ ಸರ್ಕಾರ ಆದೇಶ ಹೊರಡಿಸಿದ್ದರೂ ಕೂಡ ಇದುವರೆಗೂ ವೇತನ ತಾರತಮ್ಯ ನಿವಾರಣೆಯಾಗಿಲ್ಲ. ಅಲ್ಲದೇ ಕರ್ನಾಟಕ ರಾಜ್ಯಾದ್ಯಂತ ಇರುವ ಸಾಕಾನೆ ಶಿಬಿರಗಳಲ್ಲಿ ಖಾಲಿ ಇರುವ ಮಾವುತರು ಹಾಗೂ ಕಾವಾಡಿಗಳ ಹುದ್ದೆಗಳನ್ನು ಭರ್ತಿ ಮಾಡದಿರುವ ಬಗ್ಗೆ ಗಂಭೀರ ಚರ್ಚೆಗಳು ನಡೆದವು.
ಖಾಲಿ ಇರುವ ಮಾವುತರು ಹಾಗೂ ಕಾವಾಡಿಗಳ ಹುದ್ದೆಗಳನ್ನು ನೇರ ನೇಮಕಾತಿಯ ಮೂಲಕ ಭರ್ತಿ ಮಾಡಿಕೊಳ್ಳಬೇಕು ಎಂಬ ಒತ್ತಾಯ ಸಭೆಯಲ್ಲಿ ಕೇಳಿ ಬಂತು.
ಮುAಬರುವ ಸೆಪ್ಟೆಂಬರ್ ತಿಂಗಳ ಒಳಗೆ ಮಾವುತರು ಹಾಗೂ ಕಾವಾಡಿಗಳ ಬೇಡಿಕೆಗಳನ್ನು ಸರ್ಕಾರ ಈಡೇರಿಸದಿದ್ದಲ್ಲಿ ಅಕ್ಟೋಬರ್‌ನಲ್ಲಿ ಪ್ರತೀ ವರ್ಷ ಜರುಗುವ ಮೈಸೂರಿನ ವಿಶ್ವ ವಿಖ್ಯಾತ ದಸರಾದ ಅಂಬಾರಿ ಸೇವೆಗೆ ಆನೆಗಳನ್ನು ಕಳಿಸದಂತೆ ಹಾಗೂ ಆನೆಗಳ ಜೊತೆ ತೆರಳದಂತೆ ಬಹಿಷ್ಕರಿಸಿ ಪ್ರತಿಭಟನೆ ನಡೆಸುವ ಬಗ್ಗೆ ಸಭೆಯಲ್ಲಿ ಒಮ್ಮತದ ನಿರ್ಣಯ ಕೈಗೊಳ್ಳಲಾಯಿತು.
ಮೈಸೂರು ದಸರಾ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಕೊಡಗಿನ ದುಬಾರೆಯಿಂದ ಪ್ರತೀ ವರ್ಷ ವಿಜಯ, ವಿಕ್ರಮ, ಧನಂಜಯ, ಹರ್ಷ, ಪ್ರಶಾಂತ್, ಗೋಪಿ, ಕಾವೇರಿ, ಈಶ್ವರ ಸೇರಿದಂತೆ ಒಟ್ಟು ಏಳು ಆನೆಗಳು ತೆರಳುತ್ತಿದ್ದು ಒಂದೇ ಒಂದು ಆನೆಗಳನ್ನು ಒಯ್ಯದೇ ಇರಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ದುಬಾರೆ ಸಾಕಾನೆ ಶಿಬಿರದ ಹಿರಿಯ ಮಾವುತ ಜೆ.ಕೆ. ಡೋಬಿ, ನಾವು ನಮ್ಮ ಬೇಡಿಕೆಗಳನ್ನು ನೆರವೇರಿಸಿ ಕೊಡಿ ಎಂದು ಸರ್ಕಾರಗಳಿಗೆ ಅನೇಕ ಬಾರಿ ಒತ್ತಾಯಿಸಿದ್ದೇವೆ. ದುಬಾರೆಯ ಜಂಗಲ್ ಕ್ಯಾಂಪ್‌ಗೆ ಬಂದಿದ್ದ ಅರಣ್ಯ ಸಚಿವರಿಗೆ, ಇಲಾಖೆಯ ಹಿರಿಯ ಅಧಿಕಾರಿಗಳಿಗೆ, ಮೊನ್ನೆಯಷ್ಟೇ ಭೇಟಿ ನೀಡಿದ್ದ ರಾಜ್ಯಪಾಲರಿಗೆ ಮನವಿ ನೀಡಿದ್ದೇವೆ. ಆದರೂ ಭರವಸೆ ಈಡೇರದ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದರು.
ಸಭೆಯಲ್ಲಿ ಮಾವುತರು ಹಾಗೂ ಕಾವಾಡಿಗಳ ಕೇಂದ್ರ ಸಂಘದ ಅಧ್ಯಕ್ಷ ಗೌನ್ ಖಾನ್, ಮತ್ತಿಗೋಡು ಸಾಕಾನೆ ಶಿಬಿರದ ಅಧ್ಯಕ್ಷ ಜೆ.ಕೆ. ವಸಂತ, ಅಂಬಾರಿ ಹೊರುವ ಅರ್ಜುನ, ಅಭಿಮನ್ಯು, ಬಲರಾಮ ಸೇರಿದಂತೆ ಎಲ್ಲಾ ಮುಖ್ಯ ಆನೆಗಳ ಮಾವುತರು ಪಾಲ್ಗೊಂಡಿದ್ದರು.
ವರದಿ: ಕೆ.ಎಸ್. ಮೂರ್ತಿ