ವರದಿ : ಬಿ.ಜಿ. ರವಿಕುಮಾರ್ ಬೆಂಗಳೂರು, ಜು. ೧೮ : ಕೇಂದ್ರ ಪರಿಸರ ಸಚಿವಾಲಯ ಪಶ್ಚಿಮ ಘಟ್ಟ ಸೂಕ್ಷö್ಮ ವಲಯದ ಬಗ್ಗೆ ಹೊರಡಿಸಿರುವ ಅಧಿಸೂಚನೆ ವಿರುದ್ಧ, ಕಾನೂನಿನ ಹೋರಾಟ ನಡೆಸಲು, ಮಲೆನಾಡು ಹಾಗೂ ಕರಾವಳಿ ಪ್ರದೇಶದ ಸಚಿವರು ಹಾಗೂ ಶಾಸಕರು ನಿರ್ಧಾರ ಕೈಗೊಂಡರು.ಈ ಕುರಿತು, ಗೃಹ ಸಚಿವ ಆರಗ ಜ್ಞಾನೇಂದ್ರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಿದ್ದು, ಅಧಿಸೂಚನೆ ವಿರುದ್ಧ ಆಕ್ರೋಶ ವ್ಯಕ್ತವಾಯಿತು.

ಸಭೆಯ ನಂತರ, ಮಾಧ್ಯಮಗಳೊಂದಿಗೆ ಮಾತನಾಡಿದ ಗೃಹ ಸಚಿವರು, ಕೇಂದ್ರ ಪರಿಸರ ಸಚಿವಾಲಯದ ಅಧಿಸೂಚನೆ ಕುರಿತು, ಸಭೆಯಲ್ಲಿ ಪಕ್ಷ ಬೇಧ ಮರೆತು, ಒಕ್ಕೊರಲಿನ ವಿರೋಧ ವ್ಯಕ್ತವಾಗಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಭೆಯಲ್ಲಿ ಭಾಗವಹಿಸಿ ಮಾತನಾಡಿದ್ದಾರೆ.

ಅಧಿಸೂಚನೆ ವಿರುದ್ಧ ಕಾನೂನಿನ ಹೋರಾಟ ಮಾಡುವುದಲ್ಲದೆ, ಜನಾಭಿಪ್ರಾಯ ಸಂಗ್ರಹಕ್ಕೆ ನಿರ್ಧರಿಸಲಾಗಿದೆ. ಅಧಿಸೂಚನೆ ವಿರುದ್ಧ, ಪರಿಸರ ಸಚಿವರ ಬಳಿಗೆ ಮುಖ್ಯಮಂತ್ರಿಯವರ ನೇತೃತ್ವದಲ್ಲಿ, ಲೋಕಸಭಾ ಸದಸ್ಯರ ಹಾಗೂ ಶಾಸಕರನ್ನು ಒಳಗೊಂಡ ನಿಯೋಗವನ್ನು ತೆಗೆದುಕೊಂಡು ಹೋಗಲಾಗುತ್ತದೆ.

ವರದಿಯ ಬಗ್ಗೆ ಈ ಹಿಂದೆ ವ್ಯಕ್ತವಾದ ಯಾವುದೇ ಆಕ್ಷೇಪಣೆಗಳನ್ನು ಪರಿಗಣಿಸಿಲ್ಲ ಎಂದ ಸಚಿವರು, ಸರಿಯಾದ ಹಾಗೂ ವೈಜ್ಞಾನಿಕ ಸರ್ವೆ ಕಾರ್ಯ ನಡೆದಿಲ್ಲವೆಂದು ಹೇಳಿದರು.

ಒಂದು ವೇಳೆ ಅಧಿಸೂಚನೆ ಅನುಷ್ಠಾನಗೊಂಡರೆ ಗ್ರಾಮೀಣ ಭಾಗದ ಜನತೆಯ ಬದುಕು ಅಸಹನೀಯವಾಗುತ್ತದೆ. ಅಧಿಸೂಚನೆಯನ್ನು ಶತಾಯ ಗತಾಯ ವಿರೋಧಿಸಲಾಗುತ್ತದೆ ಎಂದು ತಿಳಿಸಿದರು.

ಸಭೆಯಲ್ಲಿ ಸಂಪುಟ ಸದಸ್ಯರಾದ ಆನಂದ್ ಸಿಂಗ್, ಶಿವರಾಮ್ ಹೆಬ್ಬಾರ್, ಎಸ್. ಅಂಗಾರ, ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ, ಮಡಿಕೇರಿ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಹಾಗೂ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು ಭಾಗವಹಿಸಿದ್ದರು.