ಗೋಣಿಕೊಪ್ಪ ವರದಿ, ಜು. ೧೭: ಭಾರತೀಯ ಕೃಷಿ ಅನುಸಂಧಾನ ಪರಿಷತ್ ಸ್ಥಾಪನೆಯ ನಂತರ ಆಹಾರ ಉತ್ಪನ್ನವನ್ನು ರಪ್ತು ಮಾಡುವಷ್ಟು ದೇಶ ಬೆಳವಣಿಗೆ ಕಂಡಿದೆ ಎಂದು ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದ ಪ್ರಭಾರ ಮುಖ್ಯಸ್ಥ ಡಾ. ಕೆ. ಎ. ದೇವಯ್ಯ ಅಭಿಪ್ರಾಯಪಟ್ಟರು.

ಭಾರತೀಯ ಕೃಷಿ ಅನುಸಂಧಾನ ಪರಿಷತ್‌ನ ೯೪ ನೇ ಸಂಸ್ಥಾಪನಾ ದಿನಾಚರಣೆ ಪ್ರಯುಕ್ತ ಕೆವಿಕೆ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾರತೀಯ ಕೃಷಿ ಅನುಸಂಧಾನ ಪರಿಷತ್‌ನ ಸ್ಥಾಪನೆಯ ನಂತರದ ಬೆಳವಣಿಗೆ ಬಗ್ಗೆ ಅವರು ಬೆಳಕು ಚೆಲ್ಲಿದರು. ಸ್ವಾತಂತ್ರö್ಯ ಪೂರ್ವದ ವರ್ಷಗಳಲ್ಲಿ ಸಾಕಷ್ಟು ಆಹಾರ ಪದಾರ್ಥಗಳನ್ನು ಭಾರತ ಆಮದು ಮಾಡಿಕೊಂಡಿರುವ ಉದಾಹರಣೆಗಳಿವೆ. ಭಾರತೀಯ ಕೃಷಿ ಅನುಸಂಧಾನ ಪರಿಷತ್ ಹಾಗೂ ಅಂಗಸAಸ್ಥೆಗಳ ಸಂಶೋಧನೆಗಳಿAದ ಅಧಿಕ ಇಳುವರಿ ತಳಿಗಳ ಅನ್ವೇಷಣೆ ಮಾಡಿ ವಿದೇಶಕ್ಕೆ ಆಹಾರ ರಪ್ತು ಮಾಡುತ್ತಿರುವುದು ಕೃಷಿ ಅವಲಂಬಿತ ದೇಶದ ವಿಶೇಷತೆಯಾಗಿದೆ. ಇತ್ತೀಚೆಗೆ ರಷ್ಯಾ-ಯೂಕ್ರೇನ್ ಯುದ್ಧ ಸಂದರ್ಭ ಕೂಡ ಆಹಾರ ಒದಗಿಸುವ ಮಹತ್ವದ ಕಾರ್ಯವನ್ನು ದೇಶ ಮಾಡಿದೆ ಎಂದರು.

ಪ್ರಗತಿಪರ ರೈತ ಸೋಮೇಂಗಡ ಗಣೇಶ್ ತಿಮ್ಮಯ್ಯ ಮಾತನಾಡಿ, ಕೆವಿಕೆ ತಂತ್ರಜ್ಞಾನವು ನಮ್ಮ ಕೃಷಿ ವ್ಯವಸ್ಥೆಯಲ್ಲಿ ಸಾಕಷ್ಟು ಜಾಗೃತಿ ಮೂಡಿಸಿದೆ. ವಿನೂತನ ತಂತ್ರಜ್ಞಾನದಿAದ ಸಮಗ್ರ ಕೃಷಿ ಮೂಲಕ ಆರ್ಥಿಕ ಸಬಲೀಕರಣಕ್ಕೆ ಕಾರಣವಾಗಿದೆ ಎಂದರು. ಪ್ರಗತಿ ಪರ ರೈತ ಬಸಪ್ಪ ಮಾತನಾಡಿ, ಭತ್ತ, ಕಾಫಿ, ಏಲಕ್ಕಿ ನಂತರವೂ ಕೂಡ ಸಾಕಷ್ಟು ಕೃಷಿ ತಂತ್ರಜ್ಞಾನವನ್ನು ಕೆವಿಕೆ ನಮಗೆ ನೀಡಿದೆ. ಇದು ನಮ್ಮ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದರು.

ಪ್ರಗತಿಪರ ಕೃಷಿಕ ಹನೀಫ್ ಮಹಮ್ಮದ್ ಮಾತನಾಡಿ, ಕೇವಲ ಭತ್ತ, ಕಾಫಿ ಬೆಳೆಗೆ ಸೀಮಿತವಾಗಿದ್ದ ನಮ್ಮ ಕೃಷಿ ಪದ್ದತಿಯನ್ನು ಸಮಗ್ರ ಕೃಷಿ ಪದ್ದತಿಗೆ ವಿಸ್ತರಿಸಿಕೊಳ್ಳಲು ಕೆವಿಕೆ ತಂತ್ರಜ್ಞಾನ ನೆರವಾಗಿದೆ. ಮನೆಗೆ ಬೇಕಾದ ಪ್ರತಿಯೊಂದು ಆಹಾರವನ್ನು ನಾವು ಉತ್ಪಾದಿಸುತ್ತಿದ್ದೇವೆ ಎಂದರು. ಕೆವಿಕೆ ತಜ್ಞ ಡಾ. ಎಂ. ಎನ್. ಹರೀಶ್ ಇಂಧನ ಉಳಿತಾಯದ ಬಗ್ಗೆ ಸಲಹೆ ನೀಡಿದರು. ದೇಶದಲ್ಲಿ ಬಳಕೆಯಾಗುವ ಇಂಧನದಲ್ಲಿ ಕೇವಲ ಶೇ. ೧೫ ರಷ್ಟು ಮಾತ್ರ ಭಾರತ ಉತ್ಪಾದಿಸುತ್ತಿದೆ. ಉಳಿದ ಇಂಧನವನ್ನು ಆಮದು ಮಾಡಿಕೊಳ್ಳಲಾಗುತ್ತಿದ್ದು, ಜನರು ಇಂಧನ ಉಳಿತಾಯಕ್ಕೆ ಒತ್ತು ನೀಡಬೇಕು ಎಂದರು. ಎಲೆಕ್ಟಿçಕ್ ವಾಹನ, ಮನೆಯಲ್ಲಿ ಮಿತವಾದ ವಿದ್ಯುತ್ ಬಳಕೆ, ವಾಹನದಲ್ಲಿ ಗುಣಮಟ್ಟ ಕಾಯ್ದುಕೊಳ್ಳುವುದು ಹೆಚ್ಚು ಅವಶ್ಯ. ಮಾಲಿನ್ಯ ಕೂಡ ಕಡಿಮೆಗೊಳಿಸಬಹುದು ಎಂದರು.

ಪೊನ್ನAಪೇಟೆ ಅರಣ್ಯ ಮಹಾವಿದ್ಯಾಲಯದ ವಿಜ್ಞಾನಿ ಡಾ. ಗಣೇಶ್ ಪ್ರಸಾದ್ ಮಾತನಾಡಿ, ಜೈವಿಕ ಇಂಧನ ಬಳಕೆಗೆ ಮುಂದಾಗಬೇಕಿದೆ. ಮುಂದಿನ ೧೦ ವರ್ಷಗಳಲ್ಲಿ ಇಂಧನ ಕೊರತೆ ಕಾಡುವ ಮುಂಚೆ ಎಚ್ಚೆತ್ತುಕೊಳ್ಳಬೇಕಿದೆ ಎಂದರು. ಈ ಸಂದರ್ಭ ನವದೆಹಲಿಯಲ್ಲಿ ನಡೆದ ಭಾರತೀಯ ಕೃಷಿ ಅನುಸಂಧಾನ ಪರಿಷತ್‌ನ ೯೪ ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ, ಕೇಂದ್ರ ಕೃಷಿ ಸಚಿವ ನರೇಂಧ್ರ ಸಿಂಗ್ ಥೋಮಲ್ ಅವರೊಂದಿಗೆ ರೈತರ ಸಂವಾದ ಕಾರ್ಯಕ್ರಮದ ನೇರ ಪ್ರಸಾರ ವೀಕ್ಷಿಸಲಾಯಿತು. ಕೆವಿಕೆ ವಿಜ್ಞಾನಿಗಳಾದ ಡಾ. ಪ್ರಭಾಕರ್, ಡಾ. ವೀರೇಂದ್ರಕುಮಾರ್ ಇದ್ದರು.