ನಾಪೋಕ್ಲು, ಜು. ೧೭: ಒಂದೆಡೆ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ಕೃಷಿಕರು ಹೈರಾಣಾಗಿದ್ದರೆ ಮತ್ತೊಂದೆಡೆ ಕಾಡುಪ್ರಾಣಿಗಳ ಉಪಟಳದಿಂದ ತತ್ತರಿಸುವಂತಾಗಿದೆ. ದೊಡ್ಡಪುಲಿಕೋಟು ಮತ್ತು ಅಯ್ಯಂಗೇರಿ ಗ್ರಾಮಸ್ಥರು ಕಾಡಾನೆಗಳ ಹಾವಳಿಯಿಂದ ಚಿಂತಾಕ್ರಾAತರಾಗಿದ್ದಾರೆ.

ದೊಡ್ಡಪುಲಿಕೋಟು ಗ್ರಾಮದ ಕರವಂಡ ಕುಟುಂಬಸ್ಥರಾದ ಅಪ್ಪಣ್ಣ, ಸುರೇಶ ಮತ್ತಿತರ ಬೆಳೆಗಾರರ ತೋಟಗಳಿಗೆ ನುಗ್ಗಿದ ಕಾಡಾನೆಗಳು ದಾಂಧಲೆ ನಡೆಸಿವೆ. ಅಧಿಕ ಪ್ರಮಾಣದ ಬೆಳೆ ನಾಶವಾಗಿದೆ. ಕಾಡಾನೆಗಳು ಕಾಫಿ, ಅಡಿಕೆ, ತೆಂಗು ಮತ್ತಿತರ ಬೆಳೆಗಳನ್ನು ನಾಶಪಡಿಸುತ್ತಿವೆ. ಅರಣ್ಯ ಇಲಾಖೆ ಆನೆಗಳನ್ನು ಕಾಡಿಗಟ್ಟಲು ಕ್ರಮಕೈಗೊಳ್ಳಬೇಕೆಂದು ಗ್ರಾಮಸ್ಥರಾದ ಅಪ್ಪಣ್ಣ ಆಗ್ರಹಿಸಿದ್ದಾರೆ.

ಅರಣ್ಯಾಧಿಕಾರಿ ಮಂಜುನಾಥ್ ಮಾತನಾಡಿ, ಅಯ್ಯಂಗೇರಿ ಮತ್ತು ದೊಡ್ಡಪುಲಿಕೋಟು ಗ್ರಾಮಗಳಲ್ಲಿ ಕಾಡಾನೆಗಳು ಧಾಳಿ ನಡೆಸಿ ಕೃಷಿ ಫಸಲನ್ನು ನಷ್ಟಗೊಳಿಸುತ್ತಿವೆ. ಅರಣ್ಯ ಇಲಾಖೆ ವತಿಯಿಂದ ಅಯ್ಯಂಗೇರಿ ಗ್ರಾಮದಿಂದ ಆನೆಗಳನ್ನು ಕಾಡಿಗಟ್ಟಲಾಗಿತ್ತು. ಇದೀಗ ಮರಳಿ ಬಂದಿರುವ ಕಾಡಾನೆಗಳು ದೊಡ್ಡ ಪುಲಿಕೋಟು ಗ್ರಾಮದಲ್ಲಿ ಸಮಸ್ಯೆ ತಂದೊಡ್ಡಿವೆ. ಇಲಾಖಾ ವತಿಯಿಂದ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.