ಎಂ. ಗುರುಮೂರ್ತಿ ಮಡಿಕೇರಿ, ಜು. ೧೭: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿ ಪ್ರತಿಷ್ಠಾಪಿಸಿ ಪೂಜಿಸುವ ಬದಲು ಅವರನ್ನು ಹಾಗೂ ಅವರ ಆದರ್ಶಗಳನ್ನು ಓದಿ ಅರ್ಥ ಮಾಡಿಕೊಳ್ಳುವ ಅಗತ್ಯವಿದೆ ಎಂದು ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಂ. ಗುರುಮೂರ್ತಿ ಅಭಿಪ್ರಾಯಪಟ್ಟರು.

ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ದಸಂಸ ಕೊಡಗು ಜಿಲ್ಲಾ, ತಾಲೂಕು ಪದಾಧಿಕಾರಿಗಳ ಆಯ್ಕೆ, ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಪ್ರೊ. ಬಿ. ಕೃಷ್ಣಪ್ಪ ಅವರ ನೆನಪು ಮತ್ತು ಸಂಘಟನೆಯ ಹೋರಾಟದ ವಿಚಾರಗಳ ಮನನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಡಾ. ಬಿ.ಆರ್. ಅಂಬೇಡ್ಕರ್ ಅವರು ಅತ್ಯುತ್ತಮ ಸಂವಿಧಾನ ನೀಡುವ ಮೂಲಕ ಇಡೀ ದೇಶಕ್ಕೆ ಮಾದರಿಯಾಗಿದ್ದಾರೆ. ಅಸ್ಪೃಶ್ಯತೆಯ ವಿರುದ್ಧ ಹೋರಾಡಿ ಮಹಾನಾಯಕ ಎನಿಸಿಕೊಂಡಿದ್ದಾರೆ ಎಂದು ಬಣ್ಣಿಸಿದರು. ಪ್ರೊ. ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ಧ್ವನಿ ಇಲ್ಲದವರಿಗೆ ಧ್ವನಿಯಾಗಿ ಪರಿಶಿಷ್ಟರ ಸ್ವಾಭಿಮಾನದ ಕಿಚ್ಚನ್ನು ಹೆಚ್ಚಿಸಿದೆ ಎಂದು ಗುರುಮೂರ್ತಿ ತಿಳಿಸಿದರು. ನಗರಸಭಾ ಮಾಜಿ ಅಧ್ಯಕ್ಷ ಹಾಗೂ ಅಂಬೇಡ್ಕರ್ ಭವನದ ಅಧ್ಯಕ್ಷ ಹೆಚ್.ಎಂ. ನಂದಕುಮಾರ್ ಮಾತನಾಡಿ, ಸಮುದಾಯದ ಮಂದಿ ಸಂಘಟನೆಯ ಮೂಲಕ ರಾಜಕೀಯ ವಾಗಿ ಒಗ್ಗಟ್ಟನ್ನು ಪ್ರದರ್ಶಿಸುವವರೆಗೆ ದೇಶದಲ್ಲಿ ಅಭಿವೃದ್ಧಿ ಕಾಣಲು ಸಾಧ್ಯವಿಲ್ಲ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಸಮಿತಿಯ ಜಿಲ್ಲಾ ಸಂಚಾಲಕಿ ಗಾಯತ್ರಿ ನರಸಿಂಹ, ಸಮುದಾಯದ ಜನರು ಆರ್ಥಿಕವಾಗಿ ಸಬಲರಾಗ ಬೇಕು. ಡಾ. ಬಿ.ಆರ್. ಅಂಬೇಡ್ಕರ್ ಅವರ ಆದರ್ಶ, ತತ್ವ ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುಂದೆ ಬರಬೇಕೆಂದು ಕರೆ ನೀಡಿದರು. ಮಹಿಳೆಯರು ಶಿಕ್ಷಣಕ್ಕೆ ಒತ್ತು ನೀಡಿ ಸಂಘಟಿತರಾದರೆ ಹಕ್ಕುಗಳಿಗಾಗಿ ಹೋರಾಟ ನಡೆಸಬಹುದೆಂದು ತಿಳಿಸಿದರು. ರಾಜ್ಯ ಸಂಘಟನಾ ಸಂಚಾಲಕ ಆರ್. ವೆಂಕಟೇಶ್ ನಾಗಮಂಗಲ, ಬಿ.ಎನ್. ಗಂಗಾಧರಪ್ಪ, ಫಕೀರಪ್ಪ ಮುಂಡಗೋಡ, ಮಹಿಳಾ ಒಕ್ಕೂಟದ ರಾಜ್ಯ ಸಂಚಾಲಕಿ ರತ್ನಮ್ಮ ಜೀವಿಕ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಸಮಿತಿ ವತಿಯಿಂದ ರಾಜ್ಯ ಸಮಿತಿಯ ನಾಯಕರನ್ನು ಸನ್ಮಾನಿಸಿ ಗೌರವಿಸಲಾಯಿತು. ರಾಜ್ಯ ಸಂಘಟನಾ ಸಂಚಾಲಕ ಶಿವಬಸಪ್ಪ, ಖಜಾಂಚಿ ಬಿ.ಎ. ಕಾಟ್ಕೆ, ರಾಜ್ಯ ದಲಿತ ಮಹಿಳಾ ಸಂಘಟನಾ ಸಂಚಾಲಕಿ ಭಾಗ್ಯ, ಹೋರಾಟಗಾರ್ತಿ ಡಾ. ಹೆಚ್.ಎಂ. ಕಾವೇರಿ, ಪ್ರಮುಖರಾದ ಗೋವಿಂದ ರಾಜದಾಸ್, ವೇದ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು. ಪವಿತ್ರ ಶಿವಕುಮಾರ್ ಸ್ವಾಗತಿಸಿ, ಬಾವ ಮಾಲ್ದಾರೆ ನಿರೂಪಿಸಿ, ವಂದಿಸಿದರು. ಮಾಸ್ಟರ್ ವಿಜಯಕುಮಾರ್ ಕಲಾತಂಡದಿAದ ಕ್ರಾಂತಿಗೀತೆ ನಡೆಯಿತು.

ಪದಾಧಿಕಾರಿಗಳ ಆಯ್ಕೆ

ಸಭಾ ಕಾರ್ಯಕ್ರಮದ ನಂತರ ಸಮಿತಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಜಿಲ್ಲಾ ಸಂಘಟನಾ ಸಂಚಾಲಕರಾಗಿ ಹೆಚ್. ಮಂಜುನಾಥ್ ಸೋಮವಾರಪೇಟೆ ಹಾಗೂ ಬಾವ ಮಾಲ್ದಾರೆ ವೀರಾಜಪೇಟೆ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ದೇವರಾಜು ಕುಡ್ಲೂರು ಆಯ್ಕೆಯಾದರು. ದಲಿತ ಮಹಿಳಾ ಒಕ್ಕೂಟದ ಜಿಲ್ಲಾ ಸಂಚಾಲಕಿಯಾಗಿ ಪವಿತ್ರ ಶಿವಕುಮಾರ್, ಸಂಘಟನಾ ಸಂಚಾಲಕಿಯಾಗಿ ಕೆ.ಆರ್. ಪವಿತ್ರ, ಕುಶಾಲನಗರ ತಾಲೂಕು ಸಂಚಾಲಕಿಯಾಗಿ ಗೌರಮ್ಮ ಜಯಣ್ಣ, ಸಂಘಟನಾ ಸಂಚಾಲಕಿಯಾಗಿ ಫೀಲೊಮಿನ ಜಾರ್ಜ್, ವಿದ್ಯಾರ್ಥಿ ಒಕ್ಕೂಟದ ಸಂಚಾಲಕರಾಗಿ ಹೆಚ್.ಆರ್. ಪ್ರಜ್ವಲ್ ವೀರಾಜಪೇಟೆ ನೇಮಕಗೊಂಡರು.

ಮಡಿಕೇರಿ ತಾಲೂಕು ಸಂಚಾಲಕರಾಗಿ ಹೆಚ್.ಎಂ. ವಿವೇಕ್, ಕುಶಾಲನಗರ ತಾಲೂಕು ಸಂಚಾಲಕರಾಗಿ ಎಂ. ಚಿರಂಜೀವಿ, ಗೌರವ ಸಲಹೆಗಾರರಾಗಿ ವರದರಾಜು ದಾಸ್ ಹಾಗೂ ಸೋಮವಾರಪೇಟೆ ತಾಲೂಕು ಸಂಚಾಲಕರಾಗಿ ನಾಗರಾಜು ಆಯ್ಕೆಯಾದರು.