ಶ್ರೀಮಂಗಲ, ಜು. ೧೭: ಶ್ರೀಮಂಗಲ ಹೋಬಳಿ ವ್ಯಾಪ್ತಿಯಲ್ಲಿ ಪ್ರಸಕ್ತ ವರ್ಷ ಜುಲೈ ತಿಂಗಳಲ್ಲಿ ನಿರಂತರವಾಗಿ ಸುರಿದ ಧಾರಾಕಾರ ಮಳೆ ಮತ್ತು ಬೀಸಿದ ಬಿರುಗಾಳಿ ಯಿಂದ ಕಾಫಿ ಫಸಲು ಶೇ.೫೦ ಕಿಂತ ಹೆಚ್ಚಾಗಿ ನಷ್ಟವಾಗಿದೆ.ಇದರೊಂದಿಗೆ ಅಡಿಕೆ,ಕಾಳುಮೆಣಸು ಬೆಳೆಗೆ ಕೊಳೆ ರೋಗ ತಗುಲಿ ಫಸಲು ನೆಲಕಚ್ಚಿದೆ.ಆದ್ದರಿಂದ ಕೂಡಲೇ ಕಾಫಿ ಮಂಡಳಿ,ತೋಟಗಾರಿಕಾ ಇಲಾಖೆ ಮತ್ತು ಕೃಷಿ ಇಲಾಖೆ ಬೆಳೆ ನಷ್ಟ ಸಮೀಕ್ಷೆ ನಡೆಸಿ ಸರಕಾರಕ್ಕೆ ಕೂಡಲೇ ವರದಿ ಸಲ್ಲಿಸಿ,ಬೆಳೆಗಾರರಿಗೆ ಪರಿಹಾರ ಒದಗಿಸಲು ಸೂಕ್ತ ಕ್ರಮಕೈಗೊಳ್ಳ ಬೇಕೆಂದು ಕೊಡಗು ಬೆಳೆಗಾರ ಒಕ್ಕೂಟದ ಶ್ರೀಮಂಗಲ ಹೋಬಳಿ ಅಧ್ಯಕ್ಷ ಕಾಳಿಮಾಡ ತಮ್ಮು ಮುತ್ತಣ್ಣ ಒತ್ತಾಯಿಸಿದ್ದಾರೆ.

ಶ್ರೀಮಂಗಲ ಹೋಬಳಿಯ ವ್ಯಾಪ್ತಿಯ ಬೆಳೆಹಾನಿ ತೋಟಗಳಿಗೆ ಭೇಟಿ ನೀಡಿ ಉಂಟಾಗಿರುವ ನಷ್ಟದ ಪ್ರಮಾಣದಿಂದ ಬೆಳೆಗಾರರಿಗೆ ಕಷ್ಟದ ಮೇಲೆ ಕಷ್ಟ ಉಂಟಾಗಿದ್ದು, ಚೇತರಿಸಿಕೊಳ್ಳಲು ಸಾಧ್ಯವಾಗದಂತೆ ಪ್ರತಿ ವರ್ಷ ಅತಿವೃಷ್ಟಿಗೆ ಈ ವ್ಯಾಪ್ತಿಯ ಬೆಳೆಗಾರರು ಸಿಲುಕುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಶ್ರೀಮಂಗಲ ಹೋಬಳಿಯ ಹಲವು ಕಡೆ ಈಗಾಗಲೇ ೧೦೦ ಇಂಚು ಮಳೆ ದಾಖಲಾಗಿದ್ದು,ಕಳೆದ ವರ್ಷ ಇದೇ ಅವಧಿಗಿಂತ ೩೦-೩೫ ಇಂಚು ಮಳೆ ಹೆಚ್ಚಾಗಿ ಸುರಿದಿದೆ.ಇನ್ನೂ ಮಳೆಗಾಲ ಶೇ.೬೦ ರಷ್ಟು ಅವಧಿ ಬಾಕಿ ಇದೆ,ಈ ಸಮಯದಲ್ಲಿಯೂ ಮಳೆ ಮತ್ತಷ್ಟು ಸುರಿದರೆ ಅಳಿದುಳಿದ ಫಸಲು ಸಹ ಬೆಳೆಗಾರರ ಕೈಗೆ ಸಿಗುವುದಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಕೊಳೆ ರೋಗಕ್ಕೆ ತುತ್ತಾಗಿ ನೆಲದಲ್ಲಿ ಉದುರಿರುವ ಕಾಫಿಯೊಂದಿಗೆ,ಕಾಫಿ ಗಿಡದ ಎಲೆಗಳು ಕಪ್ಪು ಬಣ್ಣಕ್ಕೆ ತಿರುಗಿ ಎಲೆ ಹಾಗೂ ಕಾಯಿ ಕಟ್ಟಿದ ಕಾಫಿ ಮಣಿಗಳು ಉದುರುತ್ತಿದ್ದು, ಇದರೊಂದಿಗೆ ಅಡಿಕೆ ಮತ್ತು ಕಾಳುಮೆಣಸು ಬೆಳೆಗೂ ಭಾರಿ ಪ್ರಮಾಣದಲ್ಲಿ ನಷ್ಟವಾಗಿದೆ ಎಂದರು.

ಈಗಾಗಲೇ ಈ ಬಗ್ಗೆ ಕಾಫಿ ಮಂಡಳಿ ಉಪ ನಿರ್ದೇಶಕರು ಲಿಖಿತ ಮನವಿ ಸಲ್ಲಿಸಿ, ನಷ್ಟಗೊಂಡ ಗ್ರಾಮಗಳಿಗೆ ಭೇಟಿ ನೀಡಿ ಸರಕಾರದ ನಷ್ಟದ ವರದಿ ಸಲ್ಲಿಸುವಂತೆ ಮನವಿ ಪತ್ರ ನೀಡಲಾಗಿದೆ ಎಂದರು.

ಈ ಸಂದರ್ಭ ಒಕ್ಕೂಟದ ಕಾರ್ಯದರ್ಶಿ ಬಾಚಂಗಡ ದಾದ ದೇವಯ್ಯ, ಶ್ರೀಮಂಗಲ ಗ್ರಾ.ಪಂ. ಅಧ್ಯಕ್ಷ ಅಜ್ಜಮಾಡ ಜಯ, ಬೆಳೆಗಾರರಾದ ಐಪುಮಾಡ ಶಂಭು, ಕೆ.ಎನ್. ಸಂದೀಪ್, ಅಜ್ಜಮಾಡ ಪ್ರಮೋದ್, ಬೊಜ್ಜಂಗಡ ಜಪ್ಪು ಮತ್ತಿತರರು ಹಾಜರಿದ್ದರು.