ಗೋಣಿಕೊಪ್ಪಲು, ಜು.೧೬: ಕಳೆದ ಹಲವು ದಿನಗಳಿಂದ ವಾಣಿಜ್ಯ ನಗರ ಗೋಣಿಕೊಪ್ಪಲು ಸಮೀಪ ನೆಲೆ ನಿಂತಿರುವ ೬ಕ್ಕೂ ಅಧಿಕ ಕಾಡಾನೆಯ ಹಿಂಡು ಇದೀಗ ಮತ್ತೆ ಅರವತ್ತೋಕ್ಲು ಭಾಗದ ಕಾಫಿ ತೋಟವನ್ನು ತನ್ನ ವಾಸಸ್ಥಳವನ್ನಾಗಿಸಿಕೊಂಡಿದೆ. ಈ ಭಾಗದಲ್ಲಿದ್ದ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟುವ ಕಾರ್ಯವನ್ನು ಪೊನ್ನಂಪೇಟೆ ವಲಯದ ಅರಣ್ಯ ಸಿಬ್ಬಂದಿಗಳು ಹಲವು ದಿನಗಳಿಂದ ನಡೆಸುತ್ತಿದ್ದಾರೆ. ಆದರೆ ಕಾಡಾನೆಗಳು ಮಾತ್ರ ಅರಣ್ಯ ಪ್ರದೇಶದತ್ತ ತೆರಳಲು ಹಿಂದೇಟು ಹಾಕುತ್ತಿವೆ.
ಸುರಿಯುತ್ತಿರುವ ಮಳೆಯ ನಡುವೆ ಕಳೆದೆರಡು ದಿನಗಳ ಹಿಂದೆ ಕಾಡ್ಲಯ್ಯಪ್ಪ ದೇವಾಲಯ ಆವರಣದ ದೇವರಕಾಡು ಅರಣ್ಯದಲ್ಲಿ ವಾಸವಿದ್ದ ೬ ಕಾಡಾನೆಗಳನ್ನು ಅರಣ್ಯ ಇಲಾಖೆಯ ಸಿಬ್ಬಂದಿಗಳು ಕಾಡಿಗೆ ಅಟ್ಟುವ ಕಾರ್ಯ ಕೈಗೊಂಡಿದ್ದರು. ಆನೆಗಳ ದಿಕ್ಕನ್ನು ಅರಣ್ಯದ ಕಡೆಗೆ ತಿರುಗಿಸುವ ವೇಳೆ ಕಾಡಾನೆ ಗುಂಪು ಸಿಬ್ಬಂದಿಗಳನ್ನು ಭಯಪಡಿಸಿ ತನ್ನ ದಿಕ್ಕನ್ನು ಬದಲಾಯಿಸಿ ಕುಂದ ಬೆಟ್ಟದ ಕಡೆಗೆ ಸಂಚರಿಸಿದ್ದವು. ಈ ವೇಳೆ ಸಿಬ್ಬಂದಿಗಳು ಬೆದರುಗುಂಡು ಹಾಗೂ ಪಟಾಕಿಗಳನ್ನು ಸಿಡಿಸಿದರಾದರೂ ಯಾವುದೇ ಪ್ರಯೋಜನವಾಗಲಿಲ್ಲ. ೨ ದಿನಗಳ ಕಾಲ ಕುಂದ ಬೆಟ್ಟದ ಆಸುಪಾಸಿನಲ್ಲಿ ಇದ್ದಂತಹ ಕಾಡಾನೆಗಳ ಗುಂಪು ಶನಿವಾರ ಮುಂಜಾನೆಯ ವೇಳೆ ಅರವತ್ತೋಕ್ಲು ಬಳಿಯ ಕಾಫಿ ಬೆಳೆಗಾರರಾದ ಕಡೇಮಾಡ ಜೀವನ್ರವರ ಕಾಫಿ ತೋಟದಲ್ಲಿ ನೆಲೆ ಕಂಡುಕೊAಡಿವೆ. ಕಾಫಿ ತೋಟದಲ್ಲಿರುವ ಹಲಸಿನ ಮರದಲ್ಲಿ ಬಿಟ್ಟಿರುವ ಹಣ್ಣುಗಳನ್ನು, ಕಾಯಿಗಳನ್ನು ತಿನ್ನುತ್ತ ಒಂದು ತೋಟದಿಂದ ಮತ್ತೊಂದು ತೋಟಕ್ಕೆ ಇವುಗಳ ಗುಂಪು ತೆರಳುತ್ತಿದೆ.
ಒಂದೇ ಸಮನೆ ಸುರಿಯುತ್ತಿರುವ ಮಳೆಯಿಂದಾಗಿ ತೋಟದಲ್ಲಿ ಕಾಣಿಸಿಕೊಳ್ಳುತ್ತಿರುವ ಕಾಡಾನೆ ಬಳಿಗೆ ಅರಣ್ಯ ಸಿಬ್ಬಂದಿಗಳು ತೆರಳಲು ಸಾಧ್ಯವಾಗುತ್ತಿಲ್ಲ. ಕಾಡಾನೆಗೆ ಅಳವಡಿಸಿರುವ ರೇಡಿಯೋ ಕಾಲರ್ನಿಂದ ಆನೆಗಳ ಸಂಚಾರವನ್ನು ಅರಣ್ಯ ಸಿಬ್ಬಂದಿಗಳು ಗಮನಿಸುತ್ತಿದ್ದಾರೆ. ತೋಟದ ಕಡೆಯಿಂದ ಪಟ್ಟಣ ಕಡೆಗೆ ಆನೆಗಳ ಸಂಚಾರ ಆರಂಭಗೊAಡಲ್ಲಿ ಕೂಡಲೇ ಸಿಬ್ಬಂದಿಗಳು ಆಯಕಟ್ಟಿನ ಪ್ರದೇಶಕ್ಕೆ ತೆರಳಿ ಕಾಡಾನೆಗಳು ಜನವಸತಿ ಕೇಂದ್ರದತ್ತ ಆಗಮಿಸದಂತೆ ಎಚ್ಚರಿಕೆ ವಹಿಸುತ್ತಿದ್ದಾರೆ.
ಸುತ್ತಮುತ್ತಲಿನ ಕಾಫಿ ತೋಟದಲ್ಲಿ ಕಾಡಾನೆಗಳು ನೆಲೆ ನಿಂತ ಹಿನೆÀ್ನಲೆಯಲ್ಲಿ ಹಾಗೂ ವಿಪರೀತ ಮಳೆ ಸುರಿಯುತ್ತಿರುವುದರಿಂದ ತೋಟದಲ್ಲಿ ಕಾರ್ಮಿಕರ ಕೆಲಸಕ್ಕೆ ರಜೆ ನೀಡಲಾಗಿದೆ. -ಹೆಚ್.ಕೆ.ಜಗದೀಶ್