ಕಾಫಿ ಕಾಯಿ ಉದುರುವಿಕೆ ಹಾಗೂ ಮುಂಗಾರಿನ ಕೊಳೆ ರೋಗಗಳ ನಿರ್ವಹಣೆಯ ಸಲಹೆ

ಕಾಯಿ ಬೆಳವಣಿಗೆಯ ಆರಂಭಿಕ ಹಂತದಲ್ಲಿ, ನಿರಂತರ ಮಳೆ ಬೇರು ವಲಯದ ಜಲಾವೃತ ಮತ್ತು ತೇವಾಂಶ ಹೆಚ್ಚಿಸುವುದರ ಮೂಲಕ ವೆಟ್ ಫೀಟ್ ಸ್ಥಿತಿಯನ್ನು ಉಂಟುಮಾಡಿ ಬಲಿಯುವ ಮುನ್ನವೇ ಕಾಯಿಗಳ ಉದುರುವಿಕೆಗೆ ಕಾರಣವಾಗುತ್ತದೆ. ಇಂತಹ ಬಿಕ್ಕಟ್ಟಿನ ವಾತಾವರಣವು, ಅರೇಬಿಕಾ ಹಾಗೂ ರೋಬಸ್ಟಾ ಕಾಫಿ ಎರಡರಲ್ಲೂ ಕೊಳೆ ರೋಗ ಹಾಗೂ ತೊಟ್ಟು ಕೊಳೆ ರೋಗಗಳು ಹೆಚ್ಚಾಗಲು ಅನುಕೂಲಕರವಾಗಿದೆ. ಸಾಮಾನ್ಯವಾಗಿ, ಅರೇಬಿಕಾ ಹಾಗೂ ರೋಬಸ್ಟಾ ಕಾಫಿಯಲ್ಲಿ ಅನುಕ್ರಮವಾಗಿ ೫-೮% ಹಾಗೂ ೧೦-೧೫% ಕಾಯಿ ಉದುರುವಿಕೆ ನೈಸರ್ಗಿಕ ಪ್ರಕ್ರಿಯೆಯಾಗಿ ಕಂಡುಬರುತ್ತದೆ. ಕಾಯಿ ಉದುರುವಿಕೆ ಸಾಮಾನ್ಯಕ್ಕಿಂತ ಹೆಚ್ಚಾದಲ್ಲಿ, ಅದು ವೆಟ್ ಫೀಟ್ ಸ್ಥಿತಿ ಹಾಗೂ ಮುಂಗಾರಿನ ಕೊಳೆ ರೋಗಗಳಿಂದಾಗಿ ಆಗಿರುತ್ತದೆ. ಈ ವರ್ಷದ ಬೇಸಿಗೆಯಲ್ಲಿ ಬಂದ ಮಧ್ಯಂತರ ಮಳೆಗಳು ಮುಂಗಾರಿನಲ್ಲಿ ಕೊಳೆ ರೋಗಗಳು ಉಲ್ಬಣಿಸಲು ಅನುಕೂಲಕರವಾದ ವಾತಾವರಣವನ್ನು ಸೃಷ್ಟಿಸಿದವು. ಆದ್ದರಿಂದ ವೆಟ್ ಫೀಟ್ ಕಾರಣದಿಂದಾಗಿ ಆದ ಹಾರ್ಮೋನ್ ಅಸಮತೋಲನದಿಂದ ಕಾಯಿ ಉದುರುವುದನ್ನು ತಡೆಯಲು,ಎಲ್ಲಾ ಕಾಫಿ ಬೆಳೆಗಾರರು ಕೆಳಕಂಡ ಕ್ರಮಗಳನ್ನು ಕೈಗೊಳ್ಳಲು ಸಲಹೆ ನೀಡಲಾಗಿದೆ.

೧. ಹೆಚ್ಚಿನ ನೀರು ಬಸಿದು ಹೋಗಲು ಚರಂಡಿಗಳು ಹಾಗೂ ತೊಟ್ಟಿಲು ಗುಂಡಿಗಳನ್ನು ಸ್ವಚ್ಛಗೊಳಿಸುವುದು

೨. ಮುಂಗಾರಿನಲ್ಲಿ, ಬೇರು ವಲಯದಲ್ಲಿ ನೀರು ನಿಲ್ಲವುದನ್ನು ತಡೆಯಲು ಹಾಗೂ ನೀರು ತ್ವರಿತವಾಗಿ ಆವಿಯಾಗಲು, ಗಿಡಗಳ ಬುಡದಿಂದ ದರಗನ್ನು ತೆಗೆದು ನಾಲ್ಕು ಗಿಡಗಳ ನಡುವೆ ರಾಶಿ ಮಾಡುವುದು

೩. ಗಿಡಗಳಲ್ಲಿ ಸಾಕಷ್ಟು ಗಾಳಿಯಾಡಲು, ಗಿಡಗಳ ನೆತ್ತಿ ಬಿಡಿಸುವುದು ಹಾಗೂ ಪುಡಿ ಚಿಗುರು ಮತ್ತು ಕಂಬ ಚಿಗುರುಗಳನ್ನು ತೆಗೆಯುವುದು

೪. ಮುಂಗಾರಿನಲ್ಲಿ ಮಳೆಯು ಬಿಡುವು ಕೊಟ್ಟ ಸಮಯದಲ್ಲಿ,ಬೇರುಗಳ ಕ್ರಿಯಾಶೀಲವಾಗಿಸಲು ಹಾಗೂ ಕಾಯಿಗಳು ಬೆಳೆಯಲು ಎಕರೆಗೆ ಒಂದು ಚೀಲ ಯೂರಿಯಾ ಗೊಬ್ಬರವನ್ನು ಹಾಕುವುದು

೫. ಈಗಿನ ಪರಿಸ್ಥಿತಿಯಲ್ಲಿ, ಗಿಡಗಳ ಸ್ವಚ್ಛತೆಯನ್ನು ಕಾಪಾಡಲು ಸಲಹೆಯನ್ನು ನೀಡಲಾಗಿದೆ. ರೋಗದ ಸೋಂಕನ್ನು ಕಡಿಮೆ ಮಾಡಲು ಹಾಗೂ ಹರಡದಂತೆ ತಡೆಯಲು, ಬಾಧಿತ ಗಿಡಗಳ ಎಲ್ಲಾ ಸೋಂಕಿತ ಭಾಗಗಳನ್ನು, ಅಂದರೆ ಎಲೆಗಳು, ಕಾಯಿಗಳು, ಗಿಡಗಳ ಮೇಲೆ ಬಿದ್ದಿರುವ ನೆರಳು ಮರದ ಎಲೆಗಳು ಎಲ್ಲವನ್ನು ತೆಗೆದು ಮಣ್ಣಿನಲ್ಲಿ ಹೂತು ಹಾಕಿ ನಾಶ ಮಾಡುವುದು.

೬. ಗಿಡಗಳನ್ನು ಸ್ವಚ್ಛಗೊಳಿಸಿದ ನಂತರ ಮತ್ತು ಮಳೆ ಬಿಡುವು ಕೊಟ್ಟಾಗ, ಶಿಲೀಂದ್ರ ನಾಶಕದ ಸಿಂಪರಣೆಯನ್ನು ಮಾಡುವುದು. ಪೈರಕ್ಲೊಸ್ಟೊçಬಿನ್ ಮತ್ತು ಎಪಿಕೊನಝೋಲ್ (ಒಪೆರಾ) ಅಥವಾ ಟೆಬುಕೊನಝೋಲ್ ೨೫.೯% ಇಸಿ (ಫಾಲಿಕ್ಯೂರ್) ಶಿಲೀಂದ್ರ ನಾಶಕವನ್ನು ೨೦೦ ಲೀಟರ್ ನೀರಿಗೆ ೨೦೦ ಮಿಲಿ ಮತ್ತು ೫೦ ಮಿಲಿ ಪ್ಲಾನೋಫಿಕ್ಸ್ ಹಾರ್ಮೋನ್ ಜೊತೆಗೆ ಯಾವುದಾದರೂ ಅಂಟು ದ್ರಾವಣದೊಂದಿಗೆ ಬೆರೆಸಿ ಸಿಂಪಡಿಸುವುದು. ಎಲೆಗಳ ಮೇಲೆ ಮತ್ತು ಕೆಳಭಾಗ, ಬೆಳೆಯುತ್ತಿರುವ ಕಾಯಿಗಳು ಮತ್ತು ಹೊಸ ರೆಕ್ಕೆಗಳು, ಸೋಂಕಿತ ಎಲ್ಲಾ ಭಾಗಗಳಿಗೆ ತಾಗುವಂತೆ ಶಿಲೀಂದ್ರ ನಾಶಕವನ್ನು ಸಿಂಪಡಿಸುವುದು.

- ಸಂಶೋಧನಾ ನಿರ್ದೇಶಕರು, ಕೇಂದ್ರೀಯ ಕಾಫಿ ಸಂಶೋಧನಾ ಸಂಸ್ಥೆ, ಚಿಕ್ಕಮಗಳೂರು ಜಿಲ್ಲೆ.