(ಕೆ.ಎಂ ಇಸ್ಮಾಯಿಲ್ ಕಂಡಕರೆ)

ಮಡಿಕೇರಿ, ಜು. ೧೬: ಜಿಲ್ಲೆಯ ಪ್ರಮುಖ ರಸ್ತೆಗಳಲ್ಲಿ ಒಂದಾಗಿರುವ ಚೆಟ್ಟಳ್ಳಿ-ಮಡಿಕೇರಿ ಸಂಪರ್ಕ ಕಲ್ಪಿಸುವ ರಸ್ತೆಗೆ ಕಳೆದ ಹಲವಾರು ವರ್ಷಗಳಿಂದ ಅಪಾಯವಿದ್ದರೂ ಸಹಾ, ಜಿಲ್ಲಾಡಳಿತ ಮಾತ್ರ ಎಚ್ಚೆತ್ತುಕೊಳ್ಳದೆ ಚೆಟ್ಟಳ್ಳಿ-ಮಡಿಕೇರಿ ರಸ್ತೆಯನ್ನು ನಿರ್ಲಕ್ಷಿಸಿದಂತಿದೆ.

ಮಳೆಗಾಲದಲ್ಲಿ ಮಾತ್ರವಲ್ಲ, ಉಳಿದ ಸಮಯದಲ್ಲೂ ಕೂಡ ಈ ರಸ್ತೆಯಲ್ಲಿ ವಾಹನ ಚಲಾಯಿಸುವುದು ಸಾಹಸವಾಗಿದೆ. ಕೊಂಚ ಎಡವಿದರೆ ಬೃಹತ್ ಗುಂಡಿಯೊಳಗೆ ಇರುವುದು ಪಕ್ಕಾ. ಹಲವಾರು ಬಾರಿ ಅಪಘಾತಗಳು ಸಂಭವಿಸಿ, ವಾಹನಗಳು ಗುಂಡಿಯೊಳಗೆ ಬಿದ್ದ ನಿದರ್ಶನಗಳಿವೆ.

ಇದೀಗ ಮಳೆಗಾಲದಲ್ಲಿ ಚೆಟ್ಟಳ್ಳಿ- ಮಡಿಕೇರಿ ರಸ್ತೆಯಲ್ಲಿ ವಾಹನ ಚಲಾಯಿಸಲು ಎಲ್ಲರೂ ಹಿಂದೇಟು ಹಾಕುತ್ತಾರೆ. ಕಾರಣವೇನೆಂದರೆ ಗುಡ್ಡಗಳು ಯಾವಾಗ ಜರಿದು ಬೀಳುತ್ತೆ ಎಂದು ಹೇಳಲು ಅಸಾಧ್ಯ!

ಬೃಹತ್ತಾದ ಬೆಟ್ಟ, ಗುಡ್ಡಗಳ ನಡುವೆ ಜೀವ ಕೈಯಲ್ಲಿ ಹಿಡಿದು ವಾಹನ ಸವಾರರು ಚಲಾಯಿಸಬೇಕಾಗಿದೆ.

ಖಾಸಗಿ ಕಂಪೆನಿಗಳ ಕೇಬಲ್!

ರಸ್ತೆ ಸಂಪೂರ್ಣ ಹಾಳು

ಚೆಟ್ಟಳ್ಳಿ- ಮಡಿಕೇರಿ ಮುಖ್ಯರಸ್ತೆಯ ಅಬ್ಯಾಲ ಭಾಗದಲ್ಲಿ ಖಾಸಗಿ ಕಂಪೆನಿಯವರು ಕೇಬಲ್ ಅಳವಡಿಸಲು ರಸ್ತೆಯನ್ನು ಅಗೆದು ಬೃಹತ್ ಗುಂಡಿಗಳನ್ನು ತೋಡಿದ್ದಾರೆ. ಆದರೆ ಗುಂಡಿಗಳನ್ನು ಸರಿಯಾಗಿ ಮುಚ್ಚದೆ, ಕೇಬಲ್ ಅಳವಡಿಸಿದ್ದಾರೆ. ಇದರ ಪರಿಣಾಮ ವಾಹನಗಳು ಗುಂಡಿಯೊಳಗೆ ಸಿಲುಕಿ, ಅಪಘಾತಕ್ಕೊಳಗಾದ ಘಟನೆಗಳಿವೆ. ರಸ್ತೆ ಬದಿಯಲ್ಲಿ ಗುಂಡಿಗಳನ್ನು ತೋಡಿರುವುದರಿಂದ, ರಸ್ತೆ ಬಿರುಕು ಬಿಡುತ್ತಿದೆ. ಈ ರಸ್ತೆಯಲ್ಲಿ ವಾಹನ ಸವಾರರು ಕೊಂಚ ಎಡವಿದರೆ ಬೃಹತ್ ಕಂದಕದೊಳಗೆ ಬೀಳುವ ಅಪಾಯವಿದೆ. ಕೇಬಲ್ ಅಳವಡಿಸಲು ಅನುಮತಿ ನೀಡಿದ ಜಿಲ್ಲಾಡಳಿತದ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಮಡಿಕೇರಿ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ

ಸಿದ್ದಾಪುರದಿಂದ ಮಡಿಕೇರಿ ತಲುಪಲು ಚೆಟ್ಟಳ್ಳಿ- ಅಬ್ಯಾಲ ಮುಖ್ಯ ರಸ್ತೆಯಾಗಿದೆ. ಸಿದ್ದಾಪುರದಿಂದ -ಮಡಿಕೇರಿಗೆ ಪ್ರಯಾಣ ಬೆಳೆಸುವವರು ಚೆಟ್ಟಳ್ಳಿ ಮಾರ್ಗವಾಗಿ ಮಡಿಕೇರಿಗೆ ಹೋಗುವುದು ಸಹಜ.

ಆದರೆ ಇತ್ತೀಚಿನ ವರ್ಷಗಳಲ್ಲಿ ವಾಹನ ಸವಾರರು ಅಪಾಯದ ಭಯದಿಂದ ಈ ಮಾರ್ಗದಲ್ಲಿ ವಾಹನ ಚಲಾಯಿಸುವುದು ವಿರಳವಾಗಿದೆ.

ಸಿದ್ದಾಪುರದಿಂದ-ಅರೆಕಾಡು, ಮರಗೋಡು ಹಾಗೂ ಕತ್ತಲೆಕಾಡು ಮಾರ್ಗವಾಗಿ ಮಡಿಕೇರಿಗೆ ಹೋಗುತ್ತಿದ್ದಾರೆ.

ಚೆಟ್ಟಳ್ಳಿ ಪಟ್ಟಣದವರಿಗೆ ಅಬ್ಯಾಲ ಮಾರ್ಗವಾಗಿ ಮಡಿಕೇರಿಗೆ ಕೇವಲ ೧೫ ಕಿಲೋಮೀಟರ್ ಪ್ರಯಾಣ ಮಾತ್ರ ಇರುವುದು. ಆದರೆ ಚೆಟ್ಟಳ್ಳಿ-ಮಡಿಕೇರಿ ರಸ್ತೆಯಲ್ಲಿನ ಅಪಾಯದ ಭಯದಿಂದ ಸುಂಟಿಕೊಪ್ಪ ಮಾರ್ಗವಾಗಿ ಮಡಿಕೇರಿಗೆ ತೆರಳುತ್ತಿದ್ದಾರೆ.

ವರ್ಷವಿಡೀ ಕಾಮಗಾರಿ - ವಾಹನ ಸವಾರರಿಗೆ ಕಿರಿಕಿರಿ...!

ಚೆಟ್ಟಳ್ಳಿ- ಮಡಿಕೇರಿ ರಸ್ತೆಯಲ್ಲಿ ಎಲ್ಲಿ ನೋಡಿದರೂ ವರ್ಷವಿಡೀ ಕಾಮಗಾರಿ ನಡೆಯುತ್ತಿರುತ್ತದೆ.

ಲೋಕೋಪಯೋಗಿ ಇಲಾಖೆಯಿಂದ ರಸ್ತೆಯ ಬದಿಯಲ್ಲಿ ಅಪಾಯ ಸಂಭವಿಸದೆ ಇರಲು ತಡೆಗೋಡೆ ನಿರ್ಮಿಸಿದ್ದರು.

ಅಲ್ಲದೇ ರಸ್ತೆಯ ಬದಿಯಲ್ಲಿ ಮಣ್ಣು ಹಾಕಿ, ಕಲ್ಲುಕಟ್ಟಿದ್ದಾರೆ. ಕಿರಿದಾದ ರಸ್ತೆಯಲ್ಲಿ ವರ್ಷವಿಡೀ ಕಾಮಗಾರಿ ನಡೆಸುತ್ತಿರುವುದರಿಂದ, ವಾಹನಗಳು ಸಾಲುಗಟ್ಟಿನಿಂತ ಹಲವಾರು ಘಟನೆಗಳಿವೆ. ಅಲ್ಲದೇ ಕಳಪೆ ಕಾಮಗಾರಿಯಿಂದ ತಡೆಗೋಡೆ ಕುಸಿತಗೊಂಡಿತ್ತು. ತಡೆಗೋಡೆ ಭಾಗದಲ್ಲಿ ಮಣ್ಣು ಶೇಖರಿಸಿ ಇಟ್ಟಿರುವುದರಿಂದ ಮಳೆಗಾಲದಲ್ಲಿ ಮಣ್ಣು ಕುಸಿತಗೊಳ್ಳುತ್ತಿದೆ.

ಎಚ್ಚೆತ್ತುಕೊಳ್ಳದಿದ್ದರೆ ರಸ್ತೆಯೇ ನಾಪತ್ತೆ ಆಗಬಹುದು!...

ಬರೆಯ ಮೇಲಿರುವ ಮರಗಳು ನೆಲಕ್ಕುರುಳಿ, ರಸ್ತೆ ಸಂಪರ್ಕ ಕಡಿತಗೊಂಡಿದೆ. ರಸ್ತೆಯ ಬದಿಯಲ್ಲಿ ಬೃಹತ್ತಾದ ಮರಗಳು ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಚೆಟ್ಟಳ್ಳಿ-ಮಡಿಕೇರಿ ರಸ್ತೆಯ ಅಬ್ಯಾಲದಲ್ಲಿ ಬೃಹತ್ತಾದ ಬೆಟ್ಟ-ಗುಡ್ಡಗಳಿವೆ. ಈ ಬೆಟ್ಟ-ಗುಡ್ಡಗಳ ನಡುವೆ, ವಾಹನ ಸವಾರರು ನಿತ್ಯ ತಮ್ಮ ಜೀವ ಕೈಯಲ್ಲಿ ಹಿಡಿದು ಸಂಚರಿಸುತ್ತಿದ್ದಾರೆ. ತಡೆಗೋಡೆ ನಿರ್ಮಾಣದ ಹೆಸರಿನಲ್ಲಿ ಜೆಸಿಬಿಯಿಂದ ಬರೆಯಲ್ಲಿನ ಮಣ್ಣು ತೆಗೆದು ಇಲಾಖೆ ಮತ್ತಷ್ಟು ಅಪಾಯಕ್ಕೆ ಎಡೆಮಾಡಿಕೊಟ್ಟಿದೆ. ಅಬ್ಯಾಲ ಸುತ್ತಮುತ್ತಲು ನೂರಾರು ಕುಟುಂಬಗಳು ಜೀವನ ನಡೆಸುತ್ತಿದ್ದಾರೆ.

ಚೆಟ್ಟಳ್ಳಿ-ಮಡಿಕೇರಿ ರಸ್ತೆಯಲ್ಲಿ ಬರೆ ಜರಿಯದಂತೆ ವೈಜ್ಞಾನಿಕವಾಗಿ ಜಿಲ್ಲಾಡಳಿತ ಕ್ರಮಕೈಗೊಳ್ಳದಿದ್ದರೆ, ಚೆಟ್ಟಳ್ಳಿ-ಮಡಿಕೇರಿ ಬರೀ ಇತಿಹಾಸವಾಗಿ ಉಳಿಯುತ್ತದೆ ಹೊರತು ರಸ್ತೆಯೇ ನಾಪತ್ತೆಯಾಗಿಬಿಡುತ್ತದೆ.

ಚೆಟ್ಟಳ್ಳಿ- ಮಡಿಕೇರಿ ಸಮಸ್ಯೆಗೆ ಲೋಕೋಪಯೋಗಿ ಇಲಾಖೆ ಶಾಶ್ವತ ಪರಿಹಾರ ಮಾಡಬೇಕಿದೆ.