ಕುಶಾಲನಗರ, ಜು. ೧೪: ವಿದ್ಯಾರ್ಥಿಗಳ ಸಾಧನೆಯನ್ನು ಗುರುತಿಸಿ ಗೌರವಿಸುವ ಮೂಲಕ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡಬೇಕು ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅಭಿಪ್ರಾಯ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಕೊಡಗು ಜಿಲ್ಲಾ ಘಟಕದ ಆಶ್ರಯದಲ್ಲಿ ಕುಶಾಲನಗರದ ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿ.ಯು.ಸಿ. ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಮತ್ತು ಶೇ. ೧೦೦ ಫಲಿತಾಂಶ ಪಡೆದ ಕಾಲೇಜುಗಳಿಗೆ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಕಾಲೇಜುಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡಿ ಮಕ್ಕಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಲು ಪ್ರತಿಯೊಬ್ಬ ಶಿಕ್ಷಕರು ಶ್ರಮಿಸುವಂತೆ ಕರೆ ನೀಡಿದರು.

ಕೊಡಗು ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷ ಫಿಲಿಪ್‌ವಾಸ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ೨೦೨೨ ರ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಶೇ. ೧೦೦ ಫಲಿತಾಂಶ ಪಡೆದ ಜಿಲ್ಲೆಯ ಕಾಲೇಜುಗಳ ಮುಖ್ಯಸ್ಥರನ್ನು ಅಭಿನಂದಿಸಿ, ಗೌರವಿಸಲಾಯಿತು. ಈ ಸಂದರ್ಭ ಕೊಡಗು ಜಿಲ್ಲಾ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಪಿ.ಆರ್. ವಿಜಯ್, ನಿವೃತ್ತ ಉಪ ನಿರ್ದೇಶಕ ಜಿ. ಕೆಂಚಪ್ಪ, ಉಪನ್ಯಾಸಕರ ಸಂಘದ ಪ್ರಮುಖರಾದ ಅಶ್ವಿನಿ ಕುಮಾರ್, ವಿವೇಕಾನಂದ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಕ್ಲಾರ ರೇಷ್ಮ, ಉಪನ್ಯಾಸಕರ ಸಂಘದ ಜಿಲ್ಲಾ ಸಮಿತಿಯ ಕಾರ್ಯಧ್ಯಕ್ಷ ಟಿ. ಹೇಮಂತ್‌ಕುಮಾರ್, ಪ್ರಧಾನ ಕಾರ್ಯದರ್ಶಿ ಹಂಡ್ರAಗಿ ನಾಗರಾಜ್, ತಾಲೂಕು ಸಮಿತಿಯ ಅಧ್ಯಕ್ಷರು, ಕಾರ್ಯಕಾರಿ ಮಂಡಳಿ ಸದಸ್ಯರು ಹಾಜರಿದ್ದರು.