ಚೆಟ್ಟಳ್ಳಿ, ಜು. ೧೪: ಪೊನ್ನತ್‌ಮೊಟ್ಟೆಯಲ್ಲಿ ಹಾನಿಗೊಳಗಾದ ೩ ಮನೆಗಳ ಕುಟುಂಬ ಸೇರಿ ಅಪಾಯದಂಚಿನಲ್ಲಿರುವ ೭ ಕುಟುಂಬಗಳಿಗೆ ಪಕ್ಕದ ಆರ್.ಎಸ್. ಚೆಟ್ಟಳ್ಳಿ ಸರಕಾರಿ ಶಾಲೆಯಲ್ಲಿ ಕಾಳಜಿ ಕೇಂದ್ರವನ್ನು ತೆರೆದು ಆಶ್ರಯ ನೀಡಲಾಗಿದೆ. ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಸದಸ್ಯೆ ರಸಿನಾ ಹಾಗೂ ಸುಮಿತ್ರಾ ಪೊನ್ನತ್‌ಮೊಟ್ಟೆಯಲ್ಲಿರುವ ಕುಟುಂಬಗಳ ಸಂಕಷ್ಟದ ಪರಿಸ್ಥಿತಿಯನ್ನು ಜಿಲ್ಲಾಧಿಕಾರಿ ಕಂದಾಯ ಇಲಾಖೆ ಚೆಟ್ಟಳ್ಳಿ ಪಂಚಾಯಿತಿಯ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಅಧಿಕಾರಿಗಳು ಖುದ್ದು ಸ್ಥಳ ಪರಿಶೀಲಿಸಿದರು. ನಿತ್ಯದ ಊಟದ ವ್ಯವಸ್ಥೆ ಇತರೆ ಸೌಲಭ್ಯಗಳನ್ನು ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ನೀಡಿದರೆ ಕಂದಾಯ ಇಲಾಖಾ ಅಧಿಕಾರಿಗಳು ದಿನದಿತ್ಯದ ಬಳಕೆಯ ವಸ್ತುಗಳನ್ನು ಒದಗಿಸಿದರು. ಆರೋಗ್ಯ ಇಲಾಖೆಯು ನೆರವು ನೀಡಿದೆ.

ಚೆಟ್ಟಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಪಂಚಾಯಿತಿ ಅಧ್ಯಕ್ಷ ಪಿ.ಟಿ. ಮುತ್ತಪ್ಪ ಅಧ್ಯಕ್ಷತೆಯಲ್ಲಿ ತುರ್ತು ಸಭೆ ನಡೆದು ೩ ಮನೆಗಳಿಗೆ ತುರ್ತು ಪರಿಹಾರ ನೀಡಬೇಕು. ಅಪಾಯದ ಅಂಚಿನಲ್ಲಿರುವ ಕುಟುಂಬಗಳನ್ನು ನಿವೇಶನ ರಹಿತರ ಪಟ್ಟಿಯಲ್ಲಿ ಸೇರಿಸುವ ಮೂಲಕ ಸೌಲಭ್ಯಗಳನ್ನು ನೀಡಬೇಕೆಂದು ಆರ್.ಎಸ್. ಚೆಟ್ಟಳ್ಳಿ ವಾರ್ಡ್ ಸದಸ್ಯೆ ರಸಿನಾ ಒತ್ತಾಯಿಸಿದರು.