ವೀರಾಜಪೇಟೆ, ಜು. ೧೪: ವೀರಾಜಪೇಟೆ ತಾಲೂಕು ಕಂದಾಯ ಇಲಾಖೆ ವತಿಯಿಂದ ವೀರಾಜಪೇಟೆ ಹೋಬಳಿ ಮತ್ತು ಅಮ್ಮತ್ತಿ ಹೋಬಳಿಯ ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ, ಸಾಗುವಳಿ ಚೀಟಿ, ವಿವಿಧ ಪಿಂಚಣಿ ಸೌಲಭ್ಯ ವಿತರಣೆ ಕಾರ್ಯ ವೀರಾಜಪೇಟೆ ಮಹಿಳಾ ಸಮಾಜದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ೪೩ ಜನರಿಗೆ ಹಕ್ಕುಪತ್ರ, ೩೭ ಸಾಗುವಳಿ ಚೀಟಿ, ೪೨ ಪಿಂಚಣಿ ಆದೇಶವನ್ನು ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಹಾಗೂ ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ವಿತರಿಸಿದರು.

ಹಕ್ಕುಪತ್ರ ನೀಡಿದ ಬಳಿಕ ಫಲಾನುಭವಿಗಳನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಕೆ.ಜಿ. ಬೋಪಯ್ಯ, ವೀರಾಜಪೇಟೆ ಹಾಗೂ ಅಮ್ಮತ್ತಿ ಹೋಬಳಿಯ ಜನರಿಗೆ ಹಕ್ಕುಪತ್ರ ಹಾಗೂ ಸಾಗುವಳಿ ಚೀಟಿ ನೀಡುವ ವಿಶೇಷ ಕಾರ್ಯಕ್ರಮವಿದು. ಈ ಸಂದರ್ಭದಲ್ಲಿ ಅರ್ಹರಿಗೆ ಕಾನೂನು ಪ್ರಕಾರ ಹಕ್ಕುಪತ್ರ ನೀಡಲಾಗುತ್ತಿದೆ. ಇನ್ನೂ ಅರ್ಜಿ ಸಲ್ಲಿಸಲು ಬಿಟ್ಟುಹೋಗಿರುವವರು ೫೭ ಸಿ ಅಡಿಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಸಮಿತಿಗೆ ಇನ್ನೂ ಒಂದು ವರ್ಷ ಸಮಯವಿದೆ. ತಮಗೆ ಸಿಕ್ಕ ಜಾಗವನ್ನು ಬೇರೆಯವರಿಗೆ ಮಾರಾಟ ಮಾಡಿದರೆ ತಪ್ಪಾಗುತ್ತದೆ. ಕಾನೂನಿಗೆ ಈಗ ತಿದ್ದುಪಡಿಯಾಗಿದೆ. ಅದರನ್ವಯ ಅಂಥವರ ಗ್ರ‍್ಯಾಂಟ್ ತೆರವು ಮಾಡಲಾಗುತ್ತದೆ ಹಾಗೂ ದಂಡ ವಿಧಿಸಲಾಗುತ್ತದೆ ಎಂದರು.

ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಮಾತನಾಡಿ, ಕಡುಬಡವರಿಗೆ ಹಕ್ಕುಪತ್ರ ಹಾಗೂ ಸಾಗುವಳಿ ಚೀಟಿ ನೀಡುವುದರಿಂದ ಅವರ ಜೀವನಮಟ್ಟ ಸ್ವಲ್ಪಮಟ್ಟಿಗಾದರೂ ಸುಧಾರಿಸಿ ದಂತಾಗುತ್ತದೆ. ಸರ್ಕಾರದಲ್ಲಿ ಸಮಾಜದ ಕಟ್ಟಕಡೆಯ ಮನುಷ್ಯರಿಗಾಗಿ ಅನೇಕ ಉತ್ತಮ ಯೋಜನೆಗಳು ಇವೆ. ಅದರ ಸದುಪಯೋಗವನ್ನು ಜನತೆ ಪಡೆದುಕೊಳ್ಳಬೇಕು ಎಂದರು.

ಅಕ್ರಮ-ಸಕ್ರಮ ಸಮಿತಿಯ ಅಧ್ಯಕ್ಷ ಗಿರೀಶ್ ಗಣಪತಿ ಪ್ರಾಸ್ತಾವಿಕವಾಗಿ ಕಾರ್ಯಕ್ರಮದ ಬಗ್ಗೆ ಮಾತನಾಡಿ, ಯಾರು ಕೂಡಾ ತಮಗೆ ಸಿಕ್ಕ ಹಕ್ಕುಪತ್ರಗಳನ್ನು ಮಾರಿಕೊಳ್ಳಬಾರದು ಎಂದರು. ಮುಂಬರುವ ದಿನಗಳಲ್ಲಿ ಸರ್ವೆ ಇಲಾಖೆಯ ಪರಿಶೀಲನೆ ಪೂರ್ಣವಾದ ಬಳಿಕ ಉಳಿದವರಿಗೆ ಹಕ್ಕುಪತ್ರ ನೀಡಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಯೋಗಾನಂದ್, ಬಗರ್ ಹುಕುಂ ಸಮಿತಿಯ ಸದಸ್ಯರುಗಳಾದ ದಿನೇಶ್ ಹೆಚ್., ಯಮುನಾ ಚೆಂಗಪ್ಪ, ಕಂದಾಯ ಅಧಿಕಾರಿ ಹರೀಶ್, ಜಿ.ಪಂ. ಮಾಜಿ ಸದಸ್ಯರುಗಳಾದ ಶಶಿ ಸುಬ್ರಮಣಿ, ಅಚ್ಚಪಂಡ ಮಹೇಶ್ ಗಣಪತಿ, ಬಿಜೆಪಿ ಪ್ರಮುಖರುಗಳಾದ ಪಟ್ರಪಂಡ ರಘು ನಾಣಯ್ಯ, ಮಧು ದೇವಯ್ಯ ಉಪಸ್ಥಿತರಿದ್ದರು.