ಮಡಿಕೇರಿ, ಜು. ೧೪: ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರಿದಿದೆ. ಇದೀಗ ಮಳೆಯೊಂದಿಗೆ ಗಾಳಿಯ ರಭಸವೂ ಹೆಚ್ಚಾಗಿದ್ದು, ವ್ಯಾಪಕ ಗಾಳಿ - ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿರುವುದು ಇನ್ನೂ ಸರಿಯಾಗಿಲ್ಲ. ಬಹುತೇಕ ಜಿಲ್ಲೆಯ ಎಲ್ಲೆಡೆ ಗಾಳಿ ಸಹಿತವಾಗಿ ಭಾರೀ ಮಳೆಯಾಗುತ್ತಿದ್ದು, ಮತ್ತಷ್ಟು ಹಾನಿಗಳು ಉಂಟಾಗುತ್ತಿವೆ. ಶಾಂತಳ್ಳಿಗೆ ೧೧.೩೬ ಇಂಚು ಹಾಗೂ ಭಾಗಮಂಡಲಕ್ಕೆ ೭.೮೦ ಇಂಚು ಭಾರೀ ಮಳೆಯಾಗಿದೆ.

ಮಳೆ - ಗಾಳಿಯ ರಭಸಕ್ಕೆ ಬಹುತೇಕ ಕಡೆಗಳಲ್ಲಿ ವಿದ್ಯುತ್ ಪೂರೈಕೆ ಒಲ್ಲದಂತಾಗಿದೆ. ರಸ್ತೆಗೆ ಭಾರೀ ಗಾತ್ರದ ಮರಗಳು ಬಿದ್ದಿದ್ದು, ಸಂಚಾರಕ್ಕೆ ಅಡಚಣೆಯಾಗಿದೆ. ಇದರೊಂದಿಗೆ ಬರೆಕುಸಿತ, ಮನೆಗಳಿಗೆ ಹಾನಿಯಾಗಿರುವ ಘಟನೆಗಳೂ ನಡೆದಿವೆ. ನದಿ - ತೊರೆಗಳಲ್ಲಿ ನೀರಿನ ಮಟ್ಟ ಮತ್ತಷ್ಟು ಏರಿಕೆಯಾಗುತ್ತಿದೆ.

ಜಿಲ್ಲೆಯಲ್ಲಿ ಕಳೆದ ೨೪ ಗಂಟೆಗಳ ಅವಧಿಯಲ್ಲಿ ೩.೭೩ ಇಂಚುಗಳಷ್ಟು ಸರಾಸರಿ ಮಳೆಯಾಗಿದೆ. ಕಾವೇರಿ - ಲಕ್ಷö್ಮಣತೀರ್ಥ ನದಿಗಳು ಉಕ್ಕಿ ಹರಿಯುತ್ತಿದ್ದು, ಮಳೆ ಇದೇ ರೀತಿ ಮುಂದುವರಿದಲ್ಲಿ ಪ್ರವಾಹ ಹೆಚ್ಚಾಗುವ ಸಾಧ್ಯತೆ ಕಂಡು ಬರುತ್ತಿದೆ. ದಕ್ಷಿಣ ಕೊಡಗಿನಲ್ಲಿ ನಾಲ್ಕೇರಿ ರಸ್ತೆಯಲ್ಲಿ ಲಕ್ಷö್ಮಣ ತೀರ್ಥ ನದಿ ಉಕ್ಕಿ ಹರಿಯುತ್ತಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿತ್ತು. ಶ್ರೀಮಂಗಲ ವ್ಯಾಪ್ತಿಯಲ್ಲಿ ಭಾರೀ ಮರಗಳು ರಸ್ತೆಗುರುಳಿದ್ದು, ಇವುಗಳನ್ನು ಸ್ಥಳೀಯರ ನೆರವಿನಿಂದ ತೆರವುಗೊಳಿಸಲಾಗಿದೆ.

ಮಡಿಕೇರಿ- ಸೋಮವಾರಪೇಟೆ ಅಧಿಕ

ಕಳೆದ ೨೪ ಗಂಟೆಗಳ ಅವಧಿಯಲ್ಲಿ ಮಡಿಕೇರಿ ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ ಸರಾಸರಿ ೪ ಇಂಚಿಗೂ ಅಧಿಕ ಮಳೆಯಾಗಿದೆ. ಮಡಿಕೇರಿ ತಾಲೂಕಿನಲ್ಲಿ ೪.೨೮ ಇಂಚು ಮಳೆಯಾಗಿದ್ದರೆ, ಸೋಮವಾರಪೇಟೆ ತಾಲೂಕಿನಲ್ಲಿ ೪.೩೯ ಇಂಚಿನಷ್ಟು ಮಳೆಯಾಗಿದೆ. ವೀರಾಜಪೇಟೆ ತಾಲೂಕಿನಲ್ಲಿ ೨.೫೨ ಇಂಚು ಮಳೆ ದಾಖಲಾಗಿದೆ. ಜನವರಿಯಿಂದ ಈ ತನಕ ಮಡಿಕೇರಿ ತಾಲೂಕಿಗೆ ೬೨.೫೪ ಇಂಚು, ವೀರಾಜಪೇಟೆಗೆ ೪೮.೫೨ ಹಾಗೂ ಸೋಮವಾರಪೇಟೆ ತಾಲೂಕಿಗೆ ೫.೧೨ ಇಂಚು ಮಳೆಯಾಗಿದೆ.

ಶಾಂತಳ್ಳಿ ೧೧.೩೬ - ಭಾಗಮಂಡಲಕ್ಕೆ ೭.೮೦ ಇಂಚು

ಕಳೆದ ೨೪ ಗಂಟೆಗಳ ಅವಧಿಯಲ್ಲಿ ಶಾಂತಳ್ಳಿಗೆ ೧೧.೩೬ ಇಂಚಿನಷ್ಟು ಹಾಗೂ ಭಾಗಮಂಡಲ ಹೋಬಳಿಯಲ್ಲಿ ೭.೮೦ ಇಂಚಿನಷ್ಟು ಭಾರೀ ಮಳೆಯಾಗಿದೆ. ಮಡಿಕೇರಿ ಕ.ಸ.ಬಾ. ೨.೪೭, ನಾಪೋಕ್ಲು ೩.೮೦. ಸಂಪಾಜೆಯಲ್ಲಿ ೩.೦೬ ಇಂಚು ಮಳೆ ಬಿದ್ದಿದೆ. ವೀರಾಜಪೇಟೆ ಕ.ಸ.ಬಾ. ೨.೧೩, ಹುದಿಕೇರಿ ೩.೪೪, ಶ್ರೀಮಂಗಲ ೪, ಪೊನ್ನಂಪೇಟೆ ೨.೬೪, ಅಮ್ಮತ್ತಿ ೧.೦೪, ಬಾಳಲೆ ಹೋಬಳಿಗೆ ೧.೮೯ ಇಂಚು ಮಳೆಯಾಗಿದೆ.

ಸೋಮವಾರಪೇಟೆ ತಾಲೂಕಿನಲ್ಲಿ

ಸೋಮವಾರಪೇಟೆ ಕ.ಸ.ಬಾ. ೪.೯೨, ಶನಿವಾರಸಂತೆ ೪.೦೨, ಕೊಡ್ಲಿಪೇಟೆ ೩.೬೯, ಕುಶಾಲನಗರ ೦.೭೨ ಹಾಗೂ ಸುಂಟಿಕೊಪ್ಪ ಹೋಬಳಿಯಲ್ಲಿ ೧.೬೪ ಇಂಚು ಮಳೆ ಸುರಿದಿದೆ.ಶಾಲೆಗಳಿಗೆ ರಜೆ

ಮಡಿಕೇರಿ ತಾಲೂಕಿನ ಬಹುತೇಕ ಕಡೆ ಹೆಚ್ಚು ಗಾಳಿ ಹಾಗೂ ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ತಾ. ೧೫ ರಂದು (ಇಂದು) ಶಾಲೆಗಳಿಗೆ ರಜೆ ನೀಡಲಾಗಿದೆ. ಈ ರಜಾ ದಿನದ ಕರ್ತವ್ಯವನ್ನು ಮುಂದಿನ ದಿನಗಳಲ್ಲಿ ಸರಿದೂಗಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ್ ಆದೇಶಿಸಿದ್ದಾರೆ.

*ದಕ್ಷಿಣ ಕೊಡಗಿನಲ್ಲಿ ಗಾಳಿ - ಮಳೆಯ ಅಬ್ಬರ ಮುಂದುವರೆದಿರುವ ಹಿನ್ನೆಲೆಯಲ್ಲಿ ಶಾಸಕ ಕೆ.ಜಿ. ಬೋಪಯ್ಯ ಅವರ ಸೂಚನೆ ಮೇರೆಗೆ ವೀರಾಜಪೇಟೆ ಹಾಗೂ ಪೊನ್ನಂಪೇಟೆ ತಾಲೂಕಿನ ಎಲ್ಲಾ ಶಾಲೆಗಳಿಗೆ ತಾ. ೧೫ ಹಾಗೂ ೧೬ ರಂದು ವೀರಾಜಪೇಟೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಬೀಳಗಿ ಅವರು ರಜೆ ಘೋಷಣೆ ಮಾಡಿದ್ದಾರೆ.ಶಾಲೆಗಳಿಗೆ ರಜೆ

ಮಡಿಕೇರಿ ತಾಲೂಕಿನ ಬಹುತೇಕ ಕಡೆ ಹೆಚ್ಚು ಗಾಳಿ ಹಾಗೂ ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ತಾ. ೧೫ ರಂದು (ಇಂದು) ಶಾಲೆಗಳಿಗೆ ರಜೆ ನೀಡಲಾಗಿದೆ. ಈ ರಜಾ ದಿನದ ಕರ್ತವ್ಯವನ್ನು ಮುಂದಿನ ದಿನಗಳಲ್ಲಿ ಸರಿದೂಗಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ್ ಆದೇಶಿಸಿದ್ದಾರೆ.

*ದಕ್ಷಿಣ ಕೊಡಗಿನಲ್ಲಿ ಗಾಳಿ - ಮಳೆಯ ಅಬ್ಬರ ಮುಂದುವರೆದಿರುವ ಹಿನ್ನೆಲೆಯಲ್ಲಿ ಶಾಸಕ ಕೆ.ಜಿ. ಬೋಪಯ್ಯ ಅವರ ಸೂಚನೆ ಮೇರೆಗೆ ವೀರಾಜಪೇಟೆ ಹಾಗೂ ಪೊನ್ನಂಪೇಟೆ ತಾಲೂಕಿನ ಎಲ್ಲಾ ಶಾಲೆಗಳಿಗೆ ತಾ. ೧೫ ಹಾಗೂ ೧೬ ರಂದು ವೀರಾಜಪೇಟೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಬೀಳಗಿ ಅವರು ರಜೆ ಘೋಷಣೆ ಮಾಡಿದ್ದಾರೆ.