ಪ್ರತಿಭಟನೆ ಎಚ್ಚರಿಕೆ

ಕುಶಾಲನಗರ, ಜು. ೧೪: ಕುಶಾಲನಗರ ಸಮೀಪದ ೭ನೇ ಹೊಸಕೋಟೆ ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಸಂದರ್ಭ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಸುನಿತಾಕುಮಾರಿ ಬಿಜೆಪಿ ಟೋಪಿ ಧರಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಗ್ಗೆ ಶಿಸ್ತು ಕ್ರಮ ಕೈಗೊಳ್ಳುವಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಣಾಧಿಕಾರಿ ವಿಫಲರಾಗಿದ್ದು, ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಪಂಚಾಯಿತಿ ಪ್ರತಿನಿಧಿಗಳೊಂದಿಗೆ ಸಿಇಒ ಕಚೇರಿಗೆ ಮುತ್ತಿಗೆ ಹಾಕಲಾಗುವುದೆಂದು ಕಾಂಗ್ರೆಸ್ ಪ್ರಮುಖರು ಎಚ್ಚರಿಕೆ ನೀಡಿದ್ದಾರೆ.

ಪತ್ರಿಕಾ ಭವನದಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಕಾಂಗ್ರೆಸ್ ಪಕ್ಷದ ಪ್ರಮುಖರಾದ ವಿ.ಪಿ ಶಶಿಧರ್, ಕೆ.ಪಿ. ಚಂದ್ರಕಲಾ, ಸರ್ಕಾರಿ ನೌಕರರು ರಾಜಕೀಯ ಪಕ್ಷದ ಕಾರ್ಯಕರ್ತರಂತೆ ವರ್ತಿಸಿದ್ದಾರೆ. ಶಾಸಕ ರಂಜನ್ ಅವರ ಉಪಸ್ಥಿತಿಯಲ್ಲಿ ಪ್ರಕರಣ ನಡೆದಿದ್ದು, ನೇರವಾಗಿ ಪ್ರೋತ್ಸಾಹ ನೀಡಿರುವ ಬಗ್ಗೆ ಖಂಡನೆ ವ್ಯಕ್ತಪಡಿಸಿದರು.ಈ ಪ್ರಕರಣದ ಬಗ್ಗೆ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಿಗೆ ದೂರು ನೀಡಿದ್ದು, ಕಾರ್ಯದರ್ಶಿ ಸುನಿತಾಕುಮಾರಿ ಅವರನ್ನು ಅಮಾನತ್ತುಗೊಳಿಸಲು ಒತ್ತಾಯಿಸಲಾಗಿದೆ. ಕೇವಲ ನೋಟಿಸ್ ನೀಡಿ ಅಧಿಕಾರಿಗಳು ಮೌನವಹಿಸಿದ್ದಾರೆ ಎಂದು ಆರೋಪಿಸಿದ ವಿ.ಪಿ. ಶಶಿಧರ್, ಕ್ರಮಕೈಗೊಳ್ಳದಿದ್ದಲ್ಲಿ ಮಡಿಕೇರಿಯಲ್ಲಿ ಸಿಇಒ ಕಚೇರಿಗೆ ಮುತ್ತಿಗೆ ಹಾಕಲಾಗುವುದೆಂದು ಎಚ್ಚರಿಸಿದರು.

ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ೭ನೇ ಹೊಸಕೋಟೆ ಪಂಚಾಯಿತಿ ಮಾಜಿ ಉಪಾಧ್ಯಕ್ಷರುಗಳಾದ ಎ.ಪಿ. ರಮೇಶ್, ಕುಂಞಕುಟ್ಟಿ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ರಜಾಕ್ ಇದ್ದರು.