ಮಡಿಕೇರಿ, ಜು. ೧೩: ಜಿಲ್ಲೆಯಲ್ಲಿ ವ್ಯಾಪಕವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕಾಫಿ ಬೆಳೆಗಾರರು ಆತಂಕಗೊಳ್ಳುವAತಾಗಿದೆ. ಜುಲೈ ತಿಂಗಳಿನಲ್ಲಿಯೇ ಬಹುತೇಕ ಕಡೆಗಳಲ್ಲಿ ಕಾಫಿ ಕೊಳೆರೋಗ ಕಾಣಿಸಿಕೊಳ್ಳುತ್ತಿರುವುದರೊಂದಿಗೆ ಉದುರುವಿಕೆಯೂ ಹೆಚ್ಚಾಗುತ್ತಿದೆ.
ಈಗಾಗಲೇ ಹಲವೆಡೆಗಳಲ್ಲಿ ಕಾಫಿ ತೋಟಗಳಲ್ಲಿ ಈ ಸಮಸ್ಯೆ ಎದುರಾಗಿರುವ ಬಗ್ಗೆ ಬೆಳೆಗಾರರು ಮಾಹಿತಿ ನೀಡಿದ್ದು, ಅಗತ್ಯ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಕಾಫಿ ಮಂಡಳಿ ಹಾಗೂ ಸರಕಾರದ ಮೂಲಕ ಕಾಫಿ ಬೆಳೆಗಾರರಿಗೆ ಸೂಕ್ತ ಪರಿಹಾರ ಕಲ್ಪಿಸಲು ಕ್ರಮಕೈಗೊಳ್ಳಬೇಕು ಈ ಬಗ್ಗೆ ಕಾಫಿ ಮಂಡಳಿ ಹಾಗೂ ಜಿಲ್ಲಾಡಳಿತದ ಮೂಲಕ ಸಮೀಕ್ಷೆ ನಡೆಸುವಂತೆ ಬೆಳೆಗಾರರು ಆಗ್ರಹಿಸಿದ್ದಾರೆ.
ದಕ್ಷಿಣ ಕೊಡಗಿನ ಶ್ರೀಮಂಗಲ, ಟಿ. ಶೆಟ್ಟಿಗೇರಿ, ಬಿರುನಾಣಿ, ಹುದಿಕೇರಿ ವಿಭಾಗದಲ್ಲಿ ಪ್ರಸ್ತುತ ಈ ಸಮಸ್ಯೆ ಅಧಿಕವಾಗಿದೆ ಎಂದು ಅಲ್ಲಿನ ಬೆಳೆಗಾರರು ತಿಳಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಶ್ರೀಮಂಗಲ ವಿಎಸ್ಎಸ್ಎನ್ ಅಧ್ಯಕ್ಷ ಅಜ್ಜಮಾಡ ಚಂಗಪ್ಪ ಅವರು ವ್ಯಾಪಕ ಮಳೆಯಿಂದಾಗಿ ಬೆಳೆಗಾರರು ಈ ಸಮಸ್ಯೆ ಎದುರಿಸುವಂತಾಗಿದೆ. ಈಗಾಗಲೇ ಕಾಯಿ ಕಟ್ಟಿರುವ ಕಾಫಿ ಗಿಡದಲ್ಲೇ ಕೊಳೆಯುತ್ತಿದೆ. ಇದರೊಂದಿಗೆ ದಿನೇ ದಿನೇ ಉದುರುವಿಕೆ ಹೆಚ್ಚುತ್ತಿರುವುದಾಗಿ ತಿಳಿಸಿದ್ದಾರೆ.
ಈ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳು ಗ್ರಾಮೀಣ ಪ್ರದೇಶವಾಗಿದ್ದು, ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಈ ಪ್ರದೇಶಕ್ಕೆ ಈಗಾಗಲೇ ಸುಮಾರು ೬೦ ರಿಂದ ೮೦ ಇಂಚಿನಷ್ಟು ಮಳೆಯಾಗಿದೆ. ಮಳೆಗಾಲದ ಅವಧಿ ಇನ್ನಷ್ಟು ಬಾಕಿ ಉಳಿದಿದ್ದು, ಈ ಸಮಯದಲ್ಲಿ ಮತ್ತಷ್ಟು ಹಾನಿಯಾಗುವ ಸಾಧ್ಯತೆಗಳ ಬಗ್ಗೆ ಬೆಳೆಗಾರರು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿರುವ ಗೋಣಿಕೊಪ್ಪಲುವಿನ ಕಾಫಿ ಮಂಡಳಿಯ ಉಪನಿರ್ದೇಶಕಿ ಡಾ. ಶ್ರೀದೇವಿ ಅವರು ಈ ಬಗ್ಗೆ ಪ್ರಸ್ತುತ ಬೆಳೆಗಾರರಿಂದ ದೂರು ಬರುತ್ತಿವೆ. ಈ ನಿಟ್ಟಿನಲ್ಲಿ ಬೆಳೆಗಾರರಿಗೆ ನಿರ್ವಹಣೆಯ ಕುರಿತಾಗಿ ಕೆಲವು ಸಲಹೆಗಳನ್ನು ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಅಧಿಕಾರಿಗಳಿಂದ ಪರಿಶೀಲನೆ
ಈ ಬಗ್ಗೆ ಕಾಫಿ ಮಂಡಳಿಯ ಸದಸ್ಯರಾದ ಮಚ್ಚಾಮಾಡ ಡಾಲಿ ಚಂಗಪ್ಪ ಹಾಗೂ ರಾಜ್ಯ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಅಜ್ಜಮಾಡ ಚಂಗಪ್ಪ ಅವರುಗಳು ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಇದರಂತೆ ಇಂದು ಉನ್ನತ ಅಧಿಕಾರಿಗಳ ಆದೇಶದಂತೆ ಕಾಫಿ ಮಂಡಳಿಯ ಅಧಿಕಾರಿಗಳು ಶ್ರೀಮಂಗಲ, ಕುರ್ಚಿ, ಬೀರುಗ, ಟಿ. ಶೆಟ್ಟಿಗೇರಿ, ನೆಮ್ಮಲೆ ಹಾಗೂ ಸುತ್ತಮುತ್ತಲಿನ ತೋಟಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.