ಚೆಯ್ಯಂಡಾಣೆ, ಜು.೧೩: ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೆಯ್ಯಂಡಾಣೆ ಪಟ್ಟಣ, ಕೊಕೇರಿ, ಚೇಲವಾರ, ನರಿಯಂದಡ ಗ್ರಾಮಗಳ ವ್ಯಾಪ್ತಿಯಲ್ಲಿ ಸುಮಾರು ೧೦ ದಿನಗಳಿಂದ ನಿರಂತರ ವಿದ್ಯುತ್ ಸಮಸ್ಯೆ ಉಂಟಾಗುತ್ತಿದ್ದು, ಹಲವಾರು ಬಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಸಮಸ್ಯೆ ಪರಿಹಾರವಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಹಲವಾರು ವಿದ್ಯುತ್ ಕಂಬಗಳಿಗೆ ಹಾನಿಯಾಗಿದ್ದು ಗ್ರಾಮಸ್ಥರ ಸಹಕಾರದಿಂದ ಹೊಸ ಕಂಬಗಳನ್ನು ಕೂಡ ಅಳವಡಿಸಲಾಗಿದೆ. ಆದರೂ ನಿರಂತರ ವಿದ್ಯುತ್ ಅಡಚಣೆ ಯಾಗುತ್ತಿದೆ. ವಿದ್ಯುತ್ ಸಮಸ್ಯೆಯಿಂದ ಮೊಬೈಲ್ ನೆಟ್ವರ್ಕ್ ಇಲ್ಲದೆ ಮೊಬೈಲ್ ಚಾರ್ಜ್ ಮಾಡಲಾಗದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಭಾಗದಲ್ಲಿ ಕಾಡಾನೆ ಹಾವಳಿ ಕೂಡ ಹೆಚ್ಚಿದ್ದು ಜನರು ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ವಿದ್ಯುತ್ ಸಮಸ್ಯೆಯಿಂದ ತೀವ್ರ ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥರು ಅಳಲನ್ನು ತೋಡಿದ್ದಾರೆ.

ಈ ಬಗ್ಗೆ ‘ಶಕ್ತಿ’ಯೊಂದಿಗೆ ಗ್ರಾಮಪಂಚಾಯಿತಿ ಅಧ್ಯಕ್ಷ ಬಿದ್ದಂಡ ರಾಜೇಶ್ ಅಚ್ಚಯ್ಯ ಮಾತನಾಡಿ ಚೆಯ್ಯಂಡಾಣೆ ವ್ಯಾಪ್ತಿಯಲ್ಲಿ ನಿರಂತರ ವಿದ್ಯುತ್ ಸಮಸ್ಯೆ ಉಂಟಾಗುತ್ತಿದ್ದು ಹಲವಾರು ಬಾರಿ ಮೇಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರೂ, ಯಾವುದೇ ಪ್ರಯೋಜನವಾಗಿಲ್ಲ. ೨ ವರ್ಷದ ಹಿಂದೆಯೇ ಇಲ್ಲಿಗೆ ಖಾಯಂ ಲೈನ್ ಮ್ಯಾನ್ ನಿಯೋಜಿಸಲು ಮನವಿ ಮಾಡಲಾಗಿತ್ತು. ಅದಕ್ಕೂ ಯಾವುದೇ ಸ್ಪಂದನ ದೊರೆತಿಲ.್ಲ ಕೂಡಲೇ ಚೆಸ್ಕಾಂ ಅಧಿಕಾರಿಗಳು ಚೆಯ್ಯಂಡಾಣೆ ವ್ಯಾಪ್ತಿಗೆ ಖಾಯಂ ಲೈನ್ ಮ್ಯಾನ್ ಅನ್ನು ನಿಯೋಜಿಸಬೇಕು. ಲೈನ್ ಮ್ಯಾನ್ ಇಲ್ಲದ ಕಾರಣ ಈ ವ್ಯಾಪ್ತಿಯಲ್ಲಿ ೩ ಅವಘಡ ಸಂಭವಿಸಿದ್ದು, ಕೂಡಲೇ ಈ ವ್ಯಾಪ್ತಿಯ ಗ್ರಾಮಸ್ಥರ ಸಮಸ್ಯೆಯನ್ನು ಪರಿಹರಿಸಬೇಕೆಂದು ಪತ್ರಿಕೆ ಮೂಲಕ ಮನವಿ ಮಾಡಿದ್ದಾರೆ.

ಇದಕ್ಕೂ ಸ್ಪಂದಿಸದಿದ್ದರೆ ಗ್ರಾಮಸ್ಥರು ಸಂಘ-ಸAಸ್ಥೆಗಳು, ಗ್ರಾಮ ಪಂಚಾಯಿತಿ ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳ ಸಹಯೋಗದೊಂದಿಗೆ ಸೆಸ್ಕ್ ಕಚೇರಿಗೆ ಮುತ್ತಿಗೆ ಹಾಕಿ ರಸ್ತೆ ತಡೆ ನಡೆಸಿ ಪ್ರತಿಭಟಿಸಲಾಗುವುದೆಂದು ಎಚ್ಚರಿಕೆ ನೀಡಿದ್ದಾರೆ.

-ಅಶ್ರಫ್