ಮಡಿಕೇರಿ, ಜು. ೧೨: ರಾಜ್ಯಮಟ್ಟದ ವಿವಿಧ ನಿಗಮ ಮಂಡಳಿ, ಪ್ರಾಧಿಕಾರಗಳ ಅಧ್ಯಕ್ಷರ ಹಾಗೂ ಉಪಾಧ್ಯಕ್ಷರ ನಾಮನಿರ್ದೇಶನವನ್ನು ರದ್ದುಗೊಳಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದೇಶ ಹೊರಡಿಸಿದ್ದಾರೆ.

ಅದರನ್ವಯ ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಸಮಿತಿ ಅಧ್ಯಕ್ಷರಾಗಿದ್ದ ರವಿಕುಶಾಲಪ್ಪ ಅವರ ಅಧ್ಯಕ್ಷ ಸ್ಥಾನವೂ ರದ್ದಾಗಿದೆ. ಈ ಬಗ್ಗೆ ‘ಶಕ್ತಿ’ಯೊಂದಿಗೆ ಮಾತನಾಡಿದ ರವಿಕುಶಾಲಪ್ಪ ಅವರು, ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷನಾಗಿ ಅಲ್ಪಾವಧಿಯಲ್ಲಿ ಉತ್ತಮ ಕೆಲಸ ಮಾಡಿರುವ ತೃಪ್ತಿ ತನಗಿದೆ ಎಂದು ಹೇಳಿದರು.

ಕೊಡಗು ಸೇರಿದಂತೆ ಪಶ್ಚಿಮ ಘಟ್ಟ ವ್ಯಾಪ್ತಿಯ ಬೇರೆ ಬೇರೆ ಜಿಲ್ಲೆಗಳ ಜನಪ್ರತಿನಿಧಿಗಳು, ಅಧಿಕಾರಿ ವರ್ಗದ ಸಹಕಾರದೊಂದಿಗೆ ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಯಿತು ಎಂದು ರವಿಕುಶಾಲಪ್ಪ ಹೇಳಿದರು.