ಸೋಮವಾರಪೇಟೆ, ಜು. ೧೨: ನಿರಂತರ ಮಳೆಯಿಂದಾಗಿ ವಾತಾವರಣದಲ್ಲಿ ತೇವಾಂಶ ಅಧಿಕಗೊಂಡು ಒಂದೇ ದಿನ ಮೂರು ಜಾನುವಾರುಗಳು ಸಾವನ್ನಪ್ಪಿವೆ.

ತಾಲೂಕಿನ ಶಾಂತಳ್ಳಿ ಹೋಬಳಿ ವ್ಯಾಪ್ತಿಯ ಬೆಟ್ಟದಳ್ಳಿ ಗ್ರಾ.ಪಂ.ಯ ಬೆಟ್ಟದಕೊಪ್ಪ ಗ್ರಾಮದ ಹೂವಮ್ಮ ಅವರಿಗೆ ಸೇರಿದ ೧೦ ವರ್ಷದ ಎತ್ತು ಮೇಯಲು ತೆರಳಿದ್ದ ಸಂದರ್ಭ ಗದ್ದೆಯಲ್ಲಿ ಸಾವನ್ನಪ್ಪಿದ್ದು ಅಂದಾಜು ೩೦ ಸಾವಿರ ನಷ್ಟ ಸಂಭವಿಸಿದೆ.

ಕುAದಳ್ಳಿ ಸಮೀಪದ ಕನ್ನಳ್ಳಿ ಗ್ರಾಮದ ಸರೋಜ ಎಂಬವರಿಗೆ ಸೇರಿದ ೬ ತಿಂಗಳ ಗಂಡು ಕರು ಅತೀ ಶೀತದಿಂದ ಸಾವನ್ನಪ್ಪಿದ್ದು, ಮಾಲೀಕರಿಗೆ ರೂ. ೫ ಸಾವಿರ ನಷ್ಟ ಸಂಭವಿಸಿದೆ.

ಅತೀ ಶೀತಕ್ಕೆ ಶಾಂತಳ್ಳಿ ಹೋಬಳಿ ವ್ಯಾಪ್ತಿಯ ತೋಳೂರುಶೆಟ್ಟಳ್ಳಿ ಗ್ರಾಮದ ಹೆಚ್.ಕೆ. ಗುರಪ್ಪ ಅವರಿಗೆ ಸೇರಿದ ಒಂದೂವರೆ ವರ್ಷದ ಕರು ಸಾವನ್ನಪ್ಪಿದೆ. ಮೇಯಲು ಬಿಟ್ಟಿದ್ದ ಜಾನುವಾರು ಶೀತಕ್ಕೆ ಬಲಿಯಾಗಿದೆ.

ಸ್ಥಳಕ್ಕೆ ಪಶು ವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಬದಾಮಿ ಹಾಗೂ ಕಂದಾಯ ಇಲಾಖೆಯ ಅಧಿಕಾರಿ ಕರಿಬಸವ ರಾಜು, ಉಮೇಶ್ ಸೇರಿದಂತೆ ಇತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ನಷ್ಟದ ಬಗ್ಗೆ ಕಂದಾಯ ಇಲಾಖೆಗೆ ವರದಿ ಸಲ್ಲಿಸಿದ್ದಾರೆ.