ಪಾಲಿಬೆಟ್ಟ, ಜು. ೧೨: ಪಾಲಿಬೆಟ್ಟದಲ್ಲಿ ಅಂದಾಜು ೪ ಕೋಟಿ ೯೩ ಲಕ್ಷ ವೆಚ್ಚದ ಸುಸಜ್ಜಿತ ಮೆಟ್ರಿಕ್ ಪೂರ್ವ ಬಾಲಕರ ನಿಲಯ ಕಟ್ಟಡವನ್ನು ಶಿಕ್ಷಣ ಸಚಿವರು ಹಾಗೂ ಕೊಡಗು ಜಿಲ್ಲೆಯ ಉಸ್ತುವಾರಿ ಸಚಿವ ಬಿ.ಸಿ. ನಾಗೇಶ್ ಉದ್ಘಾಟಿಸಿದರು. ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವ ಮೂಲಕ ಸರ್ಕಾರವು ಹಲವಾರು ಯೋಜನೆಗಳನ್ನು ನೀಡಿದ್ದು, ಅಟಲ್ ಬಿಹಾರಿ ವಾಜಪೇಯಿ ಭಾರತ ದೇಶದಲ್ಲಿ ಯಾರು ವಿದ್ಯಾಭ್ಯಾಸದಿಂದ ವಂಚಿತರಾಗಬಾರದು ಎಂಬ ಯೋಜನೆಯನ್ನು ರೂಪಿಸಿದ್ದರು. ಅರಣ್ಯದಿಂದ ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ತೊಂದರೆ ಆಗಬಾರದೆಂದು ಇಂತಹ ವಸತಿ ನಿಲಯಗಳನ್ನು ನಿರ್ಮಿಸಲಾಗಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ವನ್ನು ಪಡೆದು ಉತ್ತಮ ಪ್ರಜೆಯಾಗಿ ಬದುಕನ್ನು ಕಟ್ಟಿಕೊಳ್ಳಬೇಕೆಂದು ಹೇಳಿದರು.
ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ ಗಿರಿಜನ ವಿದ್ಯಾರ್ಥಿಗಳಿಗೆ ಮನೆಯಿಂದ ಬಂದು ವಿದ್ಯಾಭ್ಯಾಸ ಮಾಡಲು ಕಷ್ಟ ಆಗುವುದರಿಂದ ಮತ್ತು ಕೂಲಿ ಕಾರ್ಮಿಕರ ಮಕ್ಕಳೆ ಈ ಭಾಗದಲ್ಲಿ ಹೆಚ್ಚು ಇರುವುದರಿಂದ ಇಂತಹ ವಸತಿ ನಿಲಯವನ್ನು ಸರ್ಕಾರ ನಿರ್ಮಿಸಿದೆ ಎಂದರು.
ವಿದ್ಯಾರ್ಥಿಗಳಿಗೆ ರಾಜ್ಯದಾದ್ಯಂತ ಈಗಾಗಲೇ ಸಮವಸ್ತç ವಿತರಣೆಯಾಗಿದೆ. ಪಠ್ಯಪುಸ್ತಕಗಳು ಇನ್ನು ಒಂದು ವಾರದಲ್ಲಿ ವಿತರಣೆ ಯಾಗಲಿದೆ ಎಂದು ತಿಳಿಸಿದರು.
ಗಿರಿಜನ ಇಲಾಖೆಯ ತಾಲೂಕು ಅಧಿಕಾರಿ ಗುರುಶಾಂತಪ್ಪ ಪ್ರಾಸ್ತಾವಿಕ ನುಡಿಯಾಡಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ್, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಭಂವರ್ ಸಿಂಗ್ ಮೀನಾ, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಗಿರೀಶ್ ಗಣಪತಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೇತ್ರ, ಉಪಾಧ್ಯಕ್ಷೆ ಎಂ.ಬಿ. ಪವಿತ್ರ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವಿಜು ಸುಬ್ರಮಣಿ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಅಜಿತ್ ಕರುಂಬಯ್ಯ ಉಪಸ್ಥಿತರಿದ್ದರು.
-ಪುತ್ತಂ ಪ್ರದೀಪ್