ಮಡಿಕೇರಿ, ಜು. ೧೨: ಕರ್ನಾಟಕ ದಲಿತ ಸಂಘರ್ಷ ಸಮಿತಿಯ ನಗರ ಸಮಿತಿಯಿಂದ ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿ.ಯು.ಸಿ.ಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ಹನ್ನೆರಡು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಪತ್ರಿಕಾ ಭವನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಭಾಷಣ ಮಾಡಿದ ದಿವಾಕರ್ ಹೆಚ್.ಎಲ್., ಕಳೆದ ಬಹಳಷ್ಟು ವರ್ಷಗಳಿಂದ ಸತತವಾಗಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಈ ರೀತಿ ಸನ್ಮಾನ ಕಾರ್ಯಕ್ರಮವನ್ನು ನಾವು ಹಮ್ಮಿಕೊಳ್ಳುತ್ತಿದ್ದು, ವಿದ್ಯಾರ್ಥಿಗಳು ಓದಿನ ಕಡೆ ಆಕರ್ಷಿತರಾಗಬೇಕು ಮತ್ತು ಉನ್ನತ ಮಟ್ಟದ ಅಧಿಕಾರಿಗಳಾಗಬೇಕೆನ್ನುವುದು ನಮ್ಮ ಕನಸಾಗಿದೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೊಡಗು ಜಿಲ್ಲಾ ಅಂಬೇಡ್ಕರ್ ನಿಗಮದ ವ್ಯವಸ್ಥಾಪಕ ಹೆಚ್.ಪಿ. ಚಂದ್ರಶೇಖರ್, ದಿವಾಕರ್ ಅವರ ನೇತೃತ್ವದಲ್ಲಿ ದಲಿತ ಸಂಘರ್ಷ ಸಮಿತಿಯು ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸುವಂತಹ ಅನೇಕ ಕಾರ್ಯಕ್ರಮ ಮಾಡುತ್ತಿದ್ದು, ಇದು ಅತ್ಯಂತ ಶ್ರೇಷ್ಠವಾದ ಕಾರ್ಯವಾಗಿದ್ದು ಇಂತಹ ಉಪಯೋಗಿ ಕಾರ್ಯಕ್ರಮಗಳು ಇನ್ನಷ್ಟು ನಡೆಯುತ್ತಿರಬೇಕು ಎಂದರು.

ಮುಖ್ಯ ಭಾಷಣಕಾರ ಸ್ಕೌಟ್ಸ್-ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತ ಕೆ.ಟಿ. ಬೇಬಿ ಮ್ಯಾಥ್ಯು, ದಲಿತ ಸಂಘರ್ಷ ಸಮಿತಿ ಆಯೋಜಿಸಿದ ಕಾರ್ಯಕ್ರಮ ಸಮಾಜಮುಖಿಯಾಗಿದೆ ಎಂದರು.

ಡಿ.ಎಸ್.ಎಸ್. ತಾಲೂಕು ಸಂಚಾಲಕ ದೀಪಕ್ ಪೊನ್ನಪ್ಪ, ವರ್ಷಂಪ್ರತಿ ಇಂತಹ ಹಲವಾರು ಸನ್ಮಾನ ಕಾರ್ಯಕ್ರಮಗಳನ್ನು ನಾವು ನಡೆಸುತ್ತಿದ್ದು, ವಿದ್ಯಾರ್ಥಿಗಳ ಸಾಧನೆಯನ್ನು ಪ್ರೋತ್ಸಾಹಿಸುವುದು ನಮ್ಮ ಧ್ಯೇಯ. ಡಾ. ಬಿ.ಆರ್. ಅಂಬೇಡ್ಕರ್ ಅವರು ತೋರಿಸಿದ ಹಾದಿಯಲ್ಲಿ ನಾವು ನಡೆದರೆ ಜೀವನದಲ್ಲಿ ಯಶಸ್ಸು ಸಾಧ್ಯ. ಪುಸ್ತಕಗಳನ್ನು ಓದುವುದನ್ನು ರೂಢಿಸಿಕೊಂಡಲ್ಲಿ ಸಮಾಜದ ಆಳ, ಅಗಲವನ್ನು ತಿಳಿದುಕೊಳ್ಳಬಹುದಾಗಿದೆ ಹಾಗೂ ಇದು ಬದುಕಿಗೂ ಪರಿಣಾಮಕಾರಿಯಾಗಿದೆ. ಅಂಬೇಡ್ಕರ್ ಅವರ ತತ್ವಾದರ್ಶಗಳನ್ನು ಜೀವನದಲ್ಲಿ ರೂಢಿಸಿಕೊಳ್ಳಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ನಗರ ಸಂಚಾಲಕ ಸಿ.ಪಿ. ಸಿದ್ದೇಶ್ವರ, ಸಮಾಜ ಸೇವಕ ನಾಸಿರ್, ವೇಲುಸ್ವಾಮಿ ಮತ್ತಿತರರು ಹಾಜರಿದ್ದರು. ಸಂತೋಷ್ ನಿರೂಪಿಸಿ, ವಿದ್ಯಾರ್ಥಿನಿ ಭೂಮಿಕ ವಂದಿಸಿದರು.