ಸುಂಟಿಕೊಪ್ಪ, ಜು. ೧೨: ಸಮೀಪದ ಚೆಟ್ಟಳ್ಳಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನೆ ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸ್ವಸ್ಥ ಶಾಲೆಯ ಸಿ.ಬಿ.ಆರ್. ಸಂಯೋಜಕ ಮುರುಗೇಶ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನದಲ್ಲಿ ಒಂದು ಗುರಿಯನ್ನು ಇಟ್ಟುಕೊಂಡು ವಿದ್ಯಾಭ್ಯಾಸವನ್ನು ಮಾಡಬೇಕು ಆಗ ಮಾತ್ರ ಯಶಸ್ಸನ್ನು ಕಾಣಲು ಸಾಧ್ಯ. ಹಾಗೆಯೇ ಉತ್ತಮ ನಾಯಕ, ನಾಯಕಿ ಮತ್ತು ಸಾಧಕ ಸಾಧಕಿ ಆಗಬೇಕಾದರೆ ಮೊದಲು ತಾಳ್ಮೆ, ಸೇವೆ, ಧ್ಯಾನ, ಜ್ಞಾನ, ಯೋಗ, ಶಿಸ್ತು, ಸಮಯ ಪ್ರಜ್ಞೆ ಈ ಎಲ್ಲಾ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು. ಜೊತೆಗೆ ಸದಾ ಸಕಾರಾತ್ಮಕ ಆಲೋಚನೆ ಮಾಡಿ, ಪರೀಕ್ಷೆಯ ಸಂದರ್ಭ ಪರೀಕ್ಷೆಗಳನ್ನು ಹಬ್ಬವೆಂದು ಭಾವಿಸಿ ಸಂಭ್ರಮಿಸಿ ಬರೆಯಬೇಕು ಎಂದರು.

ಶಾಲೆಯ ಸಂಚಾಲಕ ಮತ್ತು ಆಡಳಿತ ಮಂಡಳಿಯ ಸದಸ್ಯರಾದ ಮುಳ್ಳಂಡ ರತ್ತು ಚಂಗಪ್ಪ ಮಾತನಾಡಿ, ವಿದ್ಯಾರ್ಥಿಗಳು ಸಂವಿಧಾನಾತ್ಮಕವಾಗಿ ಇರುವ ಹಕ್ಕುಗಳನ್ನು ಮತ್ತು ಮೌಲ್ಯಗಳನ್ನು ಪಾಲಿಸುತ್ತಾ ಉತ್ತಮ ನಾಯಕತ್ವ ಗುಣವನ್ನು ರೂಪಿಸಿಕೊಳ್ಳಿ ಎಂದರು. ಶಾಲೆಯ ಹಳೆಯ ವಿದ್ಯಾರ್ಥಿ ವಸಂತ ರೈ ಮಾತನಾಡಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಸಂಘಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು ಪ್ರಮಾಣವಚನ ಸ್ವೀಕರಿಸಿದರು. ವಿದ್ಯಾರ್ಥಿ ಸಂಘದ ಉಪಾಧ್ಯಕ್ಷೆ ಹಾಗೂ ಕನ್ನಡ ಶಿಕ್ಷಕಿ ಯು. ಸುನಂದಾ ಸ್ವಾಗತಿಸಿದರು. ಶಿಕ್ಷಕಿಯರಾದ ಫಸಿಲಾ, ರೇಷ್ಮಾ ಅತಿಥಿಗಳನ್ನು ಪರಿಚಯಿಸಿದರು. ಶಾಲಾ ವಿದ್ಯಾರ್ಥಿ ನಾಯಕ ಮಿದ್ರಾಜ್ ವಂದಿಸಿದರು. ಸಭಾ ಕಾರ್ಯಕ್ರಮದ ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮದಲ್ಲಿ ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕ, ಶಿಕ್ಷಕೇತರ ವರ್ಗದವರು ಉಪಸ್ಥಿತರಿದ್ದರು.