ಸೋಮವಾರಪೇಟೆ, ಜು. ೧೨: ಕಳೆದ ೧೫ ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿದ್ದ ಮಳೆ ಇಂದು ಕೊಂಚ ಬಿಡುವು ನೀಡಿದ್ದು, ವಾತಾವರಣದಲ್ಲಿನ ಶೀತಕ್ಕೆ ಅಲ್ಲಲ್ಲಿ ಮನೆಗಳ ಗೋಡೆ ಕುಸಿದು ಹಾನಿ ಸಂಭವಿಸಿದೆ.

೧೫ ದಿನಗಳ ತರುವಾಯ ದಟ್ಟ ಮೋಡ ಸರಿದು ಸೂರ್ಯನ ದರ್ಶನವಾಗಿದ್ದು, ಜನಸಾಮಾನ್ಯರಲ್ಲಿ ಸಮಾಧಾನ ಮೂಡಿಸಿದೆ. ಭಾರೀ ಮಳೆ ಗಾಳಿಗೆ ವಾತಾವರಣದಲ್ಲಿ ಶೀತ ಹೆಚ್ಚಾಗಿರುವ ಪರಿಣಾಮ ಕಚ್ಚಾ ಮನೆಗಳಿಗೆ ತೀವ್ರ ಹಾನಿಯಾಗುತ್ತಿದ್ದು, ಮನೆಗಳ ಗೋಡೆ ಕುಸಿದು ನಷ್ಟ ಸಂಭವಿಸುತ್ತಿದೆ.

ಸೋಮವಾರಪೇಟೆ ಕಸಬ ಹೋಬಳಿ ವ್ಯಾಪ್ತಿಯಲ್ಲಿ ಕಳೆದ ೨೪ ಗಂಟೆಗಳಲ್ಲಿ ೧೧೬.೪ ಮಿ.ಮೀ, ಶನಿವಾರಸಂತೆಗೆ ೨೨೭ ಮಿ.ಮೀ., ಕೊಡ್ಲಿಪೇಟೆಗೆ ೫೮.೮ ಮಿ.ಮೀಟರ್ ಮಳೆಯಾದ ಬಗ್ಗೆ ವರದಿಯಾಗಿದೆ.

ನಿನ್ನೆ ಸುರಿದ ಮಳೆಗೆ ತಾಲೂಕಿನ ಕೊಡ್ಲಿಪೇಟೆ ಹೋಬಳಿಯ ಬೆಂಬಳೂರು ಗ್ರಾಮದ ಪಾರ್ವತಿ ಎಂಬವರ ಮನೆಯ ಗೋಡೆ ಕುಸಿದು ಶೇ.೨೦ರಷ್ಟು ಹಾನಿಯಾಗಿದೆ. ಮಾದ್ರೆ ಗ್ರಾಮದ ಗುಂಡೇಗೌಡ ಅವರ ಮನೆಗೆ ಭಾರೀ ಪ್ರಮಾಣದಲ್ಲಿ ಹಾನಿಯಾಗಿದೆ. ಶನಿವಾರಸಂತೆ ಹೋಬಳಿ ವ್ಯಾಪ್ತಿಯ ಮುಳ್ಳೂರು ಗ್ರಾಮದ ಕೆ.ಟಿ. ಗಂಗಮ್ಮ ಅವರ ವಾಸದ ಮನೆಯ ಒಂದು ಪಾರ್ಶ್ವ ಕುಸಿದು ಬಿದ್ದಿದೆ.

ಅಂಕನಹಳ್ಳಿ ಗ್ರಾಮದ ನಿವಾಸಿ ಹೊನ್ನರಾಜಪ್ಪ ಅವರ ವಾಸದ ಮನೆಯ ಹಿಂಭಾಗದ ಗೋಡೆ ಕುಸಿದು ಶೇ.೨೦ ರಷ್ಟು ನಷ್ಟವಾಗಿದೆ. ಸ್ಥಳಕ್ಕೆ ಕಂದಾಯ ಇಲಾಖೆ ಸಿಬ್ಬಂದಿಗಳು ತೆರಳಿ ಪರಿಶೀಲನೆ ನಡೆಸಿದ್ದು, ತಾಲೂಕು ಆಡಳಿತಕ್ಕೆ ವರದಿ ಸಲ್ಲಿಸಿದ್ದಾರೆ.

ಪಟ್ಟಣದ ಮಡಿಕೇರಿ ರಸ್ತೆಯಲ್ಲಿರುವ ಕ್ಷೇವಿಯರ್ ಫ್ರೀಮನ್ ಅವರಿಗೆ ಸೇರಿದ ವಾಸದ ಮನೆಯ ಗೋಡೆಯು ಅತೀ ಶೀತಕ್ಕೆ ಬಿರುಕು ಬಿಟ್ಟು ಅಪಾಯಕಾರಿ ಸ್ಥಿತಿಯಲ್ಲಿದೆ. ಮನೆಯ ಅಡುಗೆ ಕೋಣೆ ಹಾಗೂ ಶೌಚಾಲಯದ ಗೋಡೆಗಳು ಕುಸಿದಿದ್ದು, ಇಡೀ ಮನೆಗೆ ಆತಂಕ ತಂದೊಡ್ಡಿದೆ. ಸ್ಥಳಕ್ಕೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಾಚಪ್ಪ, ಕಂದಾಯ ನಿರೀಕ್ಷಕ ರಫೀಕ್, ನೋಡಲ್ ಅಧಿಕಾರಿ ನಾರಾಯಣ ಅವರುಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಜೆಗುಂಡಿ ಗ್ರಾಮದಲ್ಲಿ ರಾಜು ಎಂಬವರ ಮನೆಯ ಹಿಂಭಾಗ ಬರೆ ಕುಸಿದಿದ್ದು, ಮನೆಯ ಒಂದು ಪಾರ್ಶ್ವ ನೆಲಕ್ಕಚ್ಚಿದೆ. ನಿನ್ನೆ ರಾತ್ರಿ ಮನೆ ಮಂದಿ ಮನೆಯೊಳಗೆ ಮಲಗಿದ್ದ ಸಂದರ್ಭವೇ ಕುಸಿತ ಉಂಟಾಗಿದ್ದು, ಅದೃಷ್ಟವಶಾತ್ ಹೆಚ್ಚಿನ ಹಾನಿ ಸಂಭವಿಸಿಲ್ಲ.

ಬರೆಕುಸಿತದಿಂದ ಪಕ್ಕದಲ್ಲಿಯೇ ಇರುವ ವಿಜಯಮ್ಮ ಅವರ ಮನೆಗೂ ಅಪಾಯ ತಂದೊಡ್ಡಿದ್ದು, ಮನೆಗೆ ಹಾನಿಯಾಗುವ ಆತಂಕ ಎದುರಾಗಿದೆ. ತಕ್ಷಣ ತಡೆಗೋಡೆ ನಿರ್ಮಿಸಲು ಸಂಬAಧಿಸಿದವರು ಮುಂದಾಗಬೇಕೆAದು ಗ್ರಾ.ಪಂ. ಮಾಜೀ ಸದಸ್ಯ ಕೆ.ಎ. ಯಾಕೂಬ್ ಆಗ್ರಹಿಸಿದ್ದಾರೆ. ಸ್ಥಳಕ್ಕೆ ಕಂದಾಯ ಇಲಾಖಾಧಿಕಾರಿ ದೀಪಿಕಾ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಹರದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗರಗಂದೂರು ಬಿ ಗ್ರಾಮದ ತೆರೇಸಾ ಅವರ ವಾಸದ ಮನೆಯ ಗೋಡೆ ಬಿರುಕು ಬಿಟ್ಟಿದ್ದು, ಕುಸಿಯುವ ಆತಂಕ ಎದುರಾಗಿದೆ. ಮಣ್ಣಿನ ಗೋಡೆಯಾಗಿರುವ ಹಿನ್ನೆಲೆ ಯಾವ ಸಂದರ್ಭದಲ್ಲಿ ಬೇಕಾದರೂ ಕುಸಿಯಬಹುದಾಗಿದ್ದು, ಸದ್ಯಕ್ಕೆ ವಾಸಕ್ಕೆ ಅಯೋಗ್ಯವಾಗಿದೆ.

ಸ್ಥಳಕ್ಕೆ ನೋಡಲ್ ಅಧಿಕಾರಿ ಅಣ್ಣಯ್ಯ, ಗ್ರಾ.ಪಂ. ಅಧ್ಯಕ್ಷ ಪದ್ಮನಾಭ್, ಸದಸ್ಯ ಸಲೀಂ, ಗ್ರಾಮ ಸಹಾಯಕ ರೋಷನ್, ಗ್ರಾ.ಪಂ. ಸಿಬ್ಬಂದಿ ರವಿ ಅವರುಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.