ಕುಶಾಲನಗರ, ಜು. ೧೦: ಜಿಲ್ಲೆಯ ಎಲ್ಲೆಡೆ ಕಳೆದ ಕೆಲವು ದಿನಗಳಿಂದ ನಿರಂತರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ಹರಿಯುತ್ತಿರುವ ಕಾವೇರಿ ನದಿ ಅಪಾಯದ ಮಟ್ಟ ಮೀರಿ ತಗ್ಗು ಪ್ರದೇಶಗಳು ಜಲಾವೃತ ಗೊಳ್ಳುತ್ತಿರುವುದು ಕಂಡು ಬಂದಿದೆ. ಹೊಲ ಗದ್ದೆಗಳು ನೀರಿನಲ್ಲಿ ಮುಳುಗಿದ್ದು, ನದಿ ತಟದ ಜನತೆ ಆತಂಕಕ್ಕೆ ಒಳಗಾಗಿದ್ದಾರೆ.

ಕಾವೇರಿ ನದಿಯಲ್ಲಿ ಗರಿಷ್ಠ ಮಟ್ಟದ ನೀರು ಹರಿಯುತ್ತಿದ್ದು ಸುಮಾರು ೨೩ ಅಡಿಗಳಷ್ಟು ಪ್ರಮಾಣಕ್ಕೆ ಏರಿದೆ. ಇನ್ನೊಂದೆಡೆ ಹಾರಂಗಿ ಜಲಾಶಯಕ್ಕೆ ನೀರಿನ ಒಳ ಹರಿವಿನ ಪ್ರಮಾಣ ಹೆಚ್ಚಳವಾಗಿದ್ದು ಅಣೆಕಟ್ಟಿನಿಂದ ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಗುತ್ತಿದೆ. ಹಾರಂಗಿ ನದಿ ನೀರಿನ ರಭಸಕ್ಕೆ ಕಾವೇರಿ ನೀರಿನ ಹರಿವಿಗೆ ಅಡ್ಡಿಯಾಗಿ ಕುಶಾಲನಗರ, ಕೊಪ್ಪ ಮತ್ತಿತರ ವ್ಯಾಪ್ತಿಯಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಹಾರಂಗಿ ಅಣೆಕಟ್ಟಿನಿಂದ ಹೆಚ್ಚುವರಿ ನೀರನ್ನು ಹಂತ ಹಂತವಾಗಿ ಬಿಡಲು ಮಡಿಕೇರಿ ಕ್ಷೇತ್ರ ಶಾಸಕರು ಸೇರಿದಂತೆ ಕಂದಾಯ ಸಚಿವ ಆರ್. ಅಶೋಕ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಅಣೆಕಟ್ಟಿನಲ್ಲಿ ನೀರಿನ ಸಂಗ್ರಹ ಮಟ್ಟ ಕಾಯ್ದುಕೊಂಡು ಅಧಿಕಾರಿಗಳು ದಿನದ ೨೪ ಗಂಟೆ ಕಾಲ ಮುನ್ನೆಚ್ಚರಿಕೆ ಕ್ರಮ ಕಾಯ್ದು ಕೊಂಡಿದ್ದಾರೆ ಎಂದು ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ತಿಳಿಸಿದ್ದಾರೆ.

೨೦೧೮ರ ಅವಧಿಯ ಘಟನೆ ಮರುಕಳಿಸದಂತೆ ಎಚ್ಚರ ವಹಿಸಲು ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ. ಕುಶಾಲನಗರ ಪಟ್ಟಣದ ತಗ್ಗು ಪ್ರದೇಶದ ಬಡಾವಣೆ ನಾಗರಿಕರು ನದಿಯಲ್ಲಿ ನೀರಿನ ಮಟ್ಟ ಕಂಡು ಆತಂಕಕ್ಕೆ ಒಳಗಾಗಿದ್ದಾರೆ. ಕೆಲವರು ಈಗಾಗಲೇ ಸ್ಥಳಾಂತರಗೊಳ್ಳಲು ತಯಾರಿ ನಡೆಸುತ್ತಿರುವ ದೃಶ್ಯ ಗೋಚರಿಸಿದೆ. ಗ್ರಾಮ ಪಂಚಾಯಿತಿ ಅಧಿಕಾರಿಗಳು ನದಿ ತಟದ ಜನರಿಗೆ ನೋಟೀಸ್ ನೀಡಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ನದಿ ತಟದಿಂದ ಮನೆ ಖಾಲಿ ಮಾಡಿ ಸುರಕ್ಷಿತ ಪ್ರದೇಶಕ್ಕೆ ತೆರಳುವಂತೆ ತಿಳಿಸಿದ್ದಾರೆ. ಮಳೆಗಾಲ ಅಂತ್ಯವಾಗುವ ತನಕ ಮುನ್ನೆಚ್ಚರಿಕೆ ವಹಿಸುವಂತೆ ನೋಟೀಸ್‌ನಲ್ಲಿ ತಿಳಿಸಲಾಗಿದೆ.

ಕುಶಾಲನಗರ ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮ ವ್ಯಾಪ್ತಿಯ ನದಿ ತಟದ ಸರ್ವೆ ಕಾರ್ಯ ನಡೆಸಿ ಸಮಗ್ರ ಮಾಹಿತಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಅಭಿಯಂತರ ಪುಟ್ಟಸ್ವಾಮಿ ತಿಳಿಸಿದ್ದಾರೆ. ಈ ಮೂಲಕ ನದಿ ಪಾತ್ರದ ಪ್ರವಾಹದ ಪ್ರದೇಶಗಳನ್ನು ಗುರುತಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಕುಶಾಲನಗರ ಪಟ್ಟಣದ ೧೦ಕ್ಕೂ ಅಧಿಕ ಬಡಾವಣೆಗಳು ಸೇರಿದಂತೆ ಕೊಪ್ಪ ಗ್ರಾಮ ವ್ಯಾಪ್ತಿಯ ತಗ್ಗು ಪ್ರದೇಶಗಳು ಕಳೆದ ೪ ವರ್ಷಗಳ ಅವಧಿಯಲ್ಲಿ ನಿರಂತರ ಜಲಾವೃತ ಗೊಳ್ಳುವುದರೊಂದಿಗೆ ಮಳೆಗಾಲದಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಳ್ಳುವ ಮೂಲಕ ಜನತೆ ಆತಂಕಕ್ಕೆ ಒಳಗಾಗುವುದು ಮುಂದುವರೆದಿದೆ. ಇದಕ್ಕೆ ಕ್ಷೇತ್ರ ಶಾಸಕರ ಜೊತೆ ಚರ್ಚಿಸಿ ಪ್ರವಾಹ ಮುಕ್ತ ವ್ಯವಸ್ಥೆ ಕಲ್ಪಿಸಲು ಶಾಶ್ವತ ಯೋಜನೆ ರೂಪಿಸಲಾಗುವುದು ಎಂದು ಕುಶಾಲನಗರಕ್ಕೆ ಭೇಟಿ ನೀಡಿದ ಕಂದಾಯ ಸಚಿವ ಆರ್. ಅಶೋಕ್ ಭರವಸೆ ವ್ಯಕ್ತಪಡಿಸಿದ್ದಾರೆ. ನದಿಯ ಮೂಲ ಸ್ವರೂಪ ಬದಲಾಗದಂತೆ ನದಿ ನಿರ್ವಹಣೆ ಕಾರ್ಯ ನಡೆಸುವ ಮೂಲಕ ಶಾಶ್ವತ ಯೋಜನೆಗೆ ಜಿಲ್ಲಾಡಳಿತ ಕೂಡಲೇ ಗಮನಹರಿಸಬೇಕಾಗಿದೆ ಎನ್ನುವುದು ಈ ಭಾಗದ ಪ್ರವಾಹ ಸಂತ್ರಸ್ತರ ಅಳಲಾಗಿದೆ.

- ಚಂದ್ರಮೋಹನ್