ಮಡಿಕೇರಿ, ಜು. ೧೦: ಕೊಡಗು ಜಿಲ್ಲೆ ಮಳೆ - ಗಾಳಿಯಿಂದಾಗಿ ನಲುಗುತ್ತಿದ್ದು, ಬಹುತೇಕ ಎಲ್ಲೆಡೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಕಳೆದ ಹಲವು ದಿನಗಳಿಂದ ಭೂಮಿ ಕಂಪಿಸುವ ಮೂಲಕ ಆತಂಕ ಸೃಷ್ಟಿಯಾಗಿರುವ ಚೆಂಬು, ಕರಿಕೆ, ಪೆರಾಜೆ ವಿಭಾಗದಲ್ಲಿ ಇಂದು ಬೆಳಿಗ್ಗೆ ಮತ್ತೆ ಭೂಮಿ ಕಂಪಿಸಿದ ಅನುಭವವಾಗಿದ್ದು, ಜನತೆಯ ಆತಂಕ ಹೆಚ್ಚಾಗಿದೆ. ಒಂದೆಡೆ ಧಾರಾಕಾರವಾಗಿ ಮಳೆಯಾಗುತ್ತಿದೆ. ಮತ್ತೊಂದೆಡೆ ಗಡಿಭಾಗದಲ್ಲಿನ ಈ ಸೂಕ್ಷö್ಮ ಘಟನೆಗಳು ಜನತೆಯನ್ನು ತಲ್ಲಣಗೊಳಿಸುತ್ತಿವೆ. ಇದರೊಂದಿಗೆ ಜಿಲ್ಲೆಯಾದ್ಯಂತ ಧಾರಾಕಾರವಾಗಿ ಮಳೆಯಾಗುತ್ತಿದ್ದು, ಹಲವೆಡೆ ಅತಿವೃಷ್ಟಿಯಿಂದ ಹಾನಿ ಸಂಭವಿಸಿದೆ. ಈಗಾಗಲೇ ಕೆಲವೊಂದು ಪ್ರದೇಶಗಳಲ್ಲಿ ರಸ್ತೆ ಮುಳುಗಡೆಯಾಗಿದ್ದು, ಸಂಚಾರಕ್ಕೆ ಅಡಚಣೆಯಾಗಿದೆ.

ಬರೆಕುಸಿತ, ಭೂಕುಸಿತ, ವಿದ್ಯುತ್ ವ್ಯತ್ಯಯ, ಮರ ಬೀಳುವುದು, ಮಳೆಗೆ ಹಾನಿಯಂತಹ ಪ್ರಕರಣಗಳು ಅಲ್ಲಲ್ಲಿ ವರದಿಯಾಗುತ್ತಲೇ ಇವೆ. ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆ- ಗಾಳಿ- ಚಳಿಯ ವಾತಾವರಣದಿಂದಾಗಿ ಜಿಲ್ಲೆ ಅಕ್ಷರಶಃ ನಲುಗುತ್ತಿದೆ. ಬಹುತೇಕ ಎಲ್ಲಾ ನದಿ - ತೊರೆಗಳು ತುಂಬಿ ಹರಿಯುತ್ತಿದೆ. ಹಲವೆಡೆ ಭತ್ತದ ಗದ್ದೆಗಳೂ ಜಲಾವೃತಗೊಂಡಿವೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ನಿರಂತರ ಮಳೆಯಿಂದಾಗಿ ಹಾರಂಗಿ ಜಲಾಶಯಕ್ಕೆ ಭಾರೀ ಪ್ರಮಾಣದಲ್ಲಿ ನೀರು ಹರಿದುಬರುತ್ತಿದೆ. ತಾ. ೧೦ರಂದು ಬೆಳಿಗ್ಗೆ ಜಲಾಶಯದಿಂದ ೩೦ ಸಾವಿರ ಕ್ಯೂಸೆಕ್ಸ್ ನೀರನ್ನು ಹೊರಬಿಡಲಾಗಿದೆ. ಹಾರಂಗಿ ಅಣೆಕಟ್ಟೆಯ ಎದುರು ಕಿರು ಸೇತುವೆ ಮೇಲೆ ೪ ಅಡಿಗಳಷ್ಟು ನೀರು ನಿಂತಿದೆ.

ತ್ರಿವೇಣಿ ಸಂಗಮ ಭರ್ತಿ

ಭಾಗಮಂಡಲದಲ್ಲಿ ತ್ರಿವೇಣಿ ಸಂಗಮ ಭರ್ತಿಯಾಗಿದೆ. ಭಾಗಮಂಡಲ - ಕುದುಪಜೆ ರಸ್ತೆಯಲ್ಲಿನ ಸೇತುವೆ ಕುಸಿದು ಸಂಪರ್ಕ ಕಡಿತವಾಗಿದೆ.

ನಾಪೋಕ್ಲು ರಸ್ತೆಯಲ್ಲಿ ನಿನ್ನೆಯಿಂದಲೇ ನೀರು ನಿಂತಿದ್ದು, ರ‍್ಯಾಫ್ಟ್ ವ್ಯವಸ್ಥೆ ಮಾಡಲಾಗಿದೆ. ಮಳೆ ಇದೇ ರೀತಿ ಮುಂದುವರೆದಲ್ಲಿ ಮಡಿಕೇರಿ ರಸ್ತೆಯೂ ಕಡಿತವಾಗುವ ಸಾಧ್ಯತೆಯಿದೆ. ಹೋಂಗಾರ್ಡ್ಸ್ ಬೋಟ್‌ನೊಂದಿಗೆ ಕರ್ತವ್ಯದಲ್ಲಿದ್ದಾರೆ. ನಾಪೋಕ್ಲು, ಕೊಟ್ಟಮುಡಿ, ಬೇತ್ರಿ, ಸಿದ್ದಾಪುರ, ಕರಡಿಗೋಡು, ಕುಶಾಲನಗರ, ಕಣಿವೆ ವ್ಯಾಪ್ತಿಯಲ್ಲಿ ಕಾವೇರಿ ಮೈದುಂಬಿ ಹರಿಯುತ್ತಿದೆ. ದಕ್ಷಿಣ ಕೊಡಗಿನಲ್ಲೂ ಧಾರಾಕಾರ ಮಳೆಯಾಗುತ್ತಿದ್ದು, ಲಕ್ಷö್ಮಣತೀರ್ಥ ನದಿಯಲ್ಲಿ ನೀರಿನ ಮಟ್ಟ ಹೆಚ್ಚುತ್ತಿದೆ.