ಮಡಿಕೇರಿ, ಜು. 7: ಹೊಸಕೋಟೆ ವ್ಯಾಪ್ತಿಯಲ್ಲಿ ಇತ್ತೀಚಿನ ದಿನಗಳಲ್ಲಿ ಕಾಡಾನೆಗಳ ದಾಳಿ ತೀವ್ರಗೊಳ್ಳತೊಡಗಿದೆ. ಕಳೆದ ರಾತ್ರಿ ಜನವಾಸ ಸ್ಥಳವಾದ ಅನಂತ ಬಡಾವಣೆಗೆ ಬಂದ ಆನೆಯೊಂದು ಅಲ್ಲಿನ ಡಾ. ಮಹೇಶ್ ಅವರ ತೋಟದ ಬಾಳೆಗಿಡಗಳನ್ನು ತಿಂದು ನಾಶಗೊಳಿಸಿದೆಯಲ್ಲದೆ ಮನೆಯ ತಡೆಗೋಡೆಯನ್ನೂ ಘಾಸಿಗೊಳಿಸಿದೆ.
ಈ ಸಂದರ್ಭ ಪಕ್ಕದ ಮನೆಯ ಕವಿತಾ ಎಂಬವರ ಕೈತೋಟಕ್ಕೆ ನುಗ್ಗಿದ ಆನೆ, ಫಸಲು ತುಂಬಿದ್ದ ಪಪ್ಪಾಯಿ ಮರವನ್ನು ಬೇರು ಸಹಿತ ಕಿತ್ತುಹಾಕಿ ಕಾಯಿಗಳನ್ನೆಲ್ಲ ತಿಂದು ಹಾಕಿದೆ. ಗೆಣಸಿನ ಬಳ್ಳಿಗಳನ್ನು ಹಾಗೂ ಹುಲುಸಾಗಿ ಬೆಳೆದಿದ್ದ ಅಲವೇರ ಗಿಡಗಳನ್ನೂ ಮೆಟ್ಟಿ ನಾಶಗೊಳಿಸಿದೆ. ಇತ್ತೀಚೆಗೆ ಹೊಸಕೋಟೆಯ ಮೆಟ್ನಳ್ಳ ಹಾಗೂ ಕಲ್ಲುಕೋರೆ ರಸ್ತೆಯಲ್ಲೂ ಆನೆಗಳ ಕಾಟ ಹೆಚ್ಚಿದ್ದು, ಜನರು ಭಯಭೀತರಾಗಿದ್ದಾರೆ. ಈ ವಿಭಾಗದಲ್ಲಿ ಆನೆ ಹಾವಳಿಯನ್ನು ತಡೆಯಲು ಅರಣ್ಯ ಅಧಿಕಾರಿಗಳು ಸೂಕ್ತ ವ್ಯವಸ್ಥೆಯನ್ನು ಕೈಗೊಳ್ಳುವಂತೆ ಗ್ರಾಮಸ್ಥರು ಕೋರಿದ್ದಾರೆ.