ಮಡಿಕೇರಿ, ಜು. ೬: ಕೊಡಗು ಜಿಲ್ಲೆಯಲ್ಲಿ ಕಳೆದ ಒಂದು ವಾರಗಳಿಂದ ಮಳೆಯಿಂದಾಗಿ ಹಾನಿಯಾದ ಪ್ರದೇಶಗಳಿಗೆ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಭೇಟಿ ನೀಡಿ ಪರಿಶೀಲನೆ ನಡೆಸಿ, ಸೂಕ್ತ ಮುಂಜಾಗ್ರತೆ ವಹಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.ಮಡಿಕೇರಿ-ಮಂಗಳೂರು ನಡುವಿನ ಕರ್ತೋಜಿ ರಸ್ತೆ, ಮಡಿಕೇರಿಯ ಜಿಲ್ಲಾಧಿಕಾರಿ ಕಚೇರಿ ಎದುರಿನ ತಡೆಗೋಡೆ, ಗೌಡ ಸಮಾಜ ಬಳಿ ಬರೆ ಕುಸಿತ ಪ್ರದೇಶ, ಚಾಮುಂಡೇಶ್ವರಿ ನಗರಕ್ಕೆ ಭೇಟಿ ನೀಡಿದ ಶಾಸಕ ರಂಜನ್ ಅವರು ಅಧಿಕಾರಿಗಳೊಂದಿಗೆ ಮಾಹಿತಿ ಪಡೆದರು.

ಈಗಾಗಲೇ ಜಿಲ್ಲೆಗೆ ಎನ್.ಡಿ. ಆರ್.ಎಫ್. ತಂಡ ಆಗಮಿಸಿದೆ. ಪ್ರತಿ ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ, ನಗರಸಭೆ ಮಟ್ಟದಲ್ಲಿ ಟಾಸ್ಕ್ ಫೋರ್ಸ್

(ಮೊದಲ ಪುಟದಿಂದ) ರಚಿಸಿ ಸೂಕ್ಷö್ಮ ಪ್ರದೇಶಗಳಲ್ಲಿ ನಿಗಾವಹಿಸಲಾಗಿದೆ. ೨೦೧೮-೧೯ರಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪ ಎದುರಿಸಿದ್ದೇವೆ. ಈ ಬಾರಿ ಆ ರೀತಿಯ ಯಾವುದೇ ಅನಾಹುತ ವಾಗುವುದಿಲ್ಲ ಎಂದು ನಂಬಿದ್ದೇವೆ. ಕೆಲವೆಡೆ ರಸ್ತೆಗಳು ಹಾಳಾಗಿವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ತನ್ನೊಂದಿಗೆ ಮಾತನಾಡಿ ವಿಚಾರಣೆ ನಡೆಸಿದ್ದಾರೆ ಎಂದರು.

೨೦೧೮ರಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ಭೂಕುಸಿತಗೊಂಡಿದ್ದ ಮಡಿಕೇರಿ-ಮಂಗಳೂರು ಹೆದ್ದಾರಿ ಬದಿಯ ಕರ್ತೋಜಿಯಲ್ಲಿ ಮಣ್ಣು ರಸ್ತೆ ಬದಿಗೆ ಜಾರಿದೆ. ಇದನ್ನು ತೆರವು ಮಾಡುವ ಕೆಲಸ ನಡೆದಿದೆ. ಭೂಕುಸಿತ ಪ್ರದೇಶದಲ್ಲಿ ಮುಂಜಾಗ್ರತೆ ವಹಿಸಬೇಕಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ತಡೆಗೋಡೆ ಕಾಮಗಾರಿ - ರಂಜನ್ ಅತೃಪ್ತಿ

ಜಿಲ್ಲಾಧಿಕಾರಿ ಕಚೇರಿ ಎದುರು ಭೂಕುಸಿತ ತಡೆಗೆ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಆಧುನಿಕ ಶೈಲಿಯ ತಡೆಗೋಡೆ ಕಾಮಗಾರಿಯ ಬಗ್ಗೆ ಶಾಸಕ ಅಪ್ಪಚ್ಚು ರಂಜನ್ ಅತೃಪ್ತಿ ವ್ಯಕ್ತಪಡಿಸಿದರು.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಡೆಗೋಡೆ ಕಾಮಗಾರಿ ಕೊಡಗು ಜಿಲ್ಲೆಗೆ ಸರಿ ಹೊಂದುವುದಿಲ್ಲ. ಇದನ್ನು ಮಾಡಬೇಡಿ ಎಂದು ಹಲವು ಬಾರಿ ಹೇಳಿದ್ದೆ. ಇದೀಗ ಅಲ್ಲಲ್ಲಿ ಬಿರುಕು, ಉಬ್ಬು ಕಾಣಿಸಿಕೊಂಡಿದೆ. ಈ ಬಗ್ಗೆ ಸಂಬAಧಪಟ್ಟವರಿಗೆ ತಿಳಿಸಿದ್ದು, ಮುಂದಿನ ದಿನಗಳಲ್ಲಿ ಇದರ ಬಗ್ಗೆ ಸಭೆ ನಡೆಸುವಂತೆ ಸೂಚಿಸಿದ್ದೇನೆ. ಚರ್ಚಿಸಿ ಪರಿಶೀಲನೆಗೆ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಚಾಮುಂಡೇಶ್ವರಿ ನಗರಕ್ಕೆ ಭೇಟಿ - ಪುನರ್ವಸತಿ ಭರವಸೆ

ಅಪಾಯದಲ್ಲಿರುವ ಚಾಮುಂಡೇಶ್ವರಿ ನಗರದ ೧೫೩ ನಿವಾಸಿಗಳಿಗೆ ಈಗಾಗಲೇ ಸ್ಥಳಾಂತರಕ್ಕೆ ನೋಟೀಸ್ ನೀಡಲಾಗಿದ್ದು, ಇವರ ಪುನರ್ವಸತಿಗೆ ಕ್ರಮಕೈಗೊಳ್ಳಲಾಗುವುದು ಎಂದು ರಂಜನ್ ಭರವಸೆ ನೀಡಿದರು.

ಕೆಲವರಿಗೆ ಪುನರ್ವಸತಿ ಕಲ್ಪಿಸಿದ್ದರು ಇಲ್ಲಿಯೂ ನೆಲೆಸಿರುವುದು ಗಮನಕ್ಕೆ ಬಂದಿದೆ. ಅವರನ್ನು ಖಾಲಿ ಮಾಡಿಸುವ ಕೆಲಸ ಮಾಡಲಾಗುತ್ತದೆ. ೪೦೦ ಮನೆಗಳು ಇನ್ಫೋಸಿಸ್ ಸಂಸ್ಥೆಯಿAದ ನಿರ್ಮಾಣವಾಗುತ್ತಿದೆ. ಅಲ್ಲಿ ಇವರುಗಳಿಗೆ ಪುನರ್ವಸತಿ ಕಲ್ಪಿಸಲು ಪ್ರಾಶಸ್ತö್ಯ ನೀಡಲಾಗುತ್ತದೆ ಎಂದ ಅವರು, ರಾಜೀವ್ ಗಾಂಧಿ ವಸತಿ ನಿಗಮದ ಮೂಲಕ ನಿರ್ಮಿಸಿದ ಮನೆಗಳು ಉತ್ತಮ ಗುಣಮಟ್ಟದಲ್ಲಿ ಕೂಡಿದೆ. ಇನ್ಫೋಸಿಸ್ ವತಿಯಿಂದ ನಿರ್ಮಿಸಲಾಗುತ್ತಿರುವ ಮನೆ ಕಾಮಗಾರಿ ತಡವಾಗುತ್ತಿದೆ. ಈ ಬಗ್ಗೆ ಸಂಬAಧಪಟ್ಟವರ ಸಂಪರ್ಕಿಸುವ ಕೆಲಸ ಮಾಡಿದ್ದೇನೆ ಎಂದು ಮಾಹಿತಿ ನೀಡಿದರು.

ಭೇಟಿ ಸಂದರ್ಭ ನಗರಸಭಾ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ, ಉಪಾಧ್ಯಕ್ಷೆ ಸವಿತಾ ರಾಕೇಶ್, ಸದಸ್ಯರುಗಳಾದ ಮಹೇಶ್ ಜೈನಿ, ಸತೀಶ್, ಅಪ್ಪಣ್ಣ, ಶಾರದ, ಸಬಿತಾ, ಶ್ವೇತಾ, ಪೌರಾಯುಕ್ತ ರಾಮದಾಸ್, ಅಧಿಕಾರಿಗಳಾದ ತಾಹಿರ್, ರಾಜೇಂದ್ರ, ಶಮಂತ್ ಸೇರಿದಂತೆ ಇನ್ನಿತರರು ಹಾಜರಿದ್ದರು.