(ಹೆಚ್.ಕೆ. ಜಗದೀಶ್)
ಗೋಣಿಕೊಪ್ಪಲು, ಜು. ೬: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ವರ್ಷಾಧಾರೆಯಿಂದಾಗಿ ದ. ಕೊಡಗು ಸಂಪೂರ್ಣ ಕಾರ್ಗತ್ತಲಿನಲ್ಲಿ ಮುಳುಗಿದೆ. ದಿಢೀರನೆ ಬೀಸುವ ಗಾಳಿಗೆ ವಿದ್ಯುತ್ ಕಂಬದ ಸಮೀಪವಿರುವ ಮರಗಳು ಬುಡ ಸಹಿತ ನೆಲಕ್ಕುರುಳುತ್ತಿವೆ. ಇದರಿಂದಾಗಿ ವಿದ್ಯುತ್ ಕಂಬ ಹಾಗೂ ಟ್ರಾನ್ಸ್ಫಾರ್ಮರ್ಗಳು ಧರೆಗುರುಳುತ್ತಿವೆ. ಗ್ರಾಮೀಣ ರಸ್ತೆಗಳಿಗೆ ಸಮೀಪದ ಕಾಫಿ ತೋಟದಲ್ಲಿರುವ ಮರಗಳು ಬೀಳುತ್ತಿರುವುದರಿಂದ ವಿದ್ಯುತ್ ಕಂಬಗಳು ಹಾಗೂ ತಂತಿಗಳು ದೊಡ್ಡ ಪ್ರಮಾಣದಲ್ಲಿ ಹಾನಿಗೊಳಗಾಗುತ್ತಿವೆ. ಇದನ್ನು ಸಕಾಲದಲ್ಲಿ ಸರಿಪಡಿಸಲು ಚೆಸ್ಕಾಂ ಸಿಬ್ಬಂದಿಗಳು ಹರಸಾಹಸ ಪಡುತ್ತಿದ್ದಾರೆ. ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ದಕ್ಷಿಣ ಕೊಡಗಿನ ವಿವಿಧ ಭಾಗದಲ್ಲಿ ಒಟ್ಟು ೫೦ ವಿದ್ಯುತ್ ಕಂಬಗಳು, ೫ ಕಿ.ಮೀ. ವಿದ್ಯುತ್ ತಂತಿಗಳು ಹಾಳಾಗಿದ್ದು ಇದರೊಂದಿಗೆ ಕಂಬ ಸಹಿತ ಇರುವ ಒಂದು ಟ್ರಾನ್ಫಾರ್ಮರ್ ಕಾನೂರು ಬಳಿ ನೆಲಕ್ಕುರುಳಿದೆ.
ಮಳೆಯ ಹಿನ್ನೆಲೆಯಲ್ಲಿ ವಾಣಿಜ್ಯನಗರ ಗೋಣಿಕೊಪ್ಪ ಹಾಗೂ ಪೊನ್ನಂಪೇಟೆಯಲ್ಲಿಯೂ ಕೂಡ ವಿದ್ಯುತ್ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ. ಸೆಸ್ಕ್ ಸಿಬ್ಬಂದಿಗಳು ವಿದ್ಯುತ್ ಕಂಬಗಳನ್ನು ಸರಿಪಡಿಸುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಇನ್ನೇನು ವಿದ್ಯುತ್ ಪೂರೈಕೆ ಮಾಡಬೇಕು ಅನ್ನುವಷ್ಟರಲ್ಲಿ ಇನ್ನೊಂದೆಡೆ ಬೀಸುವ ಗಾಳಿಗೆ ಕಂಬಗಳು ಉರುಳಿಬೀಳುತ್ತಿವೆ. ಇದರಿಂದಾಗಿ ಸಿಬ್ಬಂದಿಗಳ ಪರದಾಟ ಹೇಳತೀರದಾಗಿದೆ. ವಿದ್ಯುತ್ ಇಲ್ಲದೆ ಹಲವು ಬೇಕರಿಗಳು, ಹೊಟೇಲ್ಗಳು ಹಾಗೂ ಗಿರಣಿ ಅಂಗಡಿಗಳು ಬುಧವಾರ ಕಾರ್ಯನಿರ್ವಹಿಸಲಿಲ್ಲ. ಮಳೆ ಹಿನ್ನೆಲೆಯಲ್ಲಿ ಗೋಣಿಕೊಪ್ಪ ಸೆಸ್ಕ್ ಉಪ ವಿಭಾಗಕ್ಕೆ ಇಲಾಖೆಯ ವತಿಯಿಂದ ಹೆಚ್ಚುವರಿ ೨೦ ಗ್ಯಾಂಗ್ಮೆನ್ಗಳು ಕೆಲಸಕ್ಕಾಗಿ ನೇಮಕಗೊಂಡಿದ್ದಾರೆ. ಅಲ್ಲದೆ ೨ ಪಿಕ್ಅಪ್ ವಾಹನಗಳು ಕರ್ತವ್ಯ ನಿರ್ವಹಿಸುತ್ತಿವೆ.
ಗ್ರಾಮಿಣ ಭಾಗದಲ್ಲಿ ಹಲವು ದಿನಗಳಿಂದ ನಿರಂತರ ವಿದ್ಯುತ್ ಸಮಸ್ಯೆಯಿಂದಾಗಿ ಸಾರ್ವಜನಿಕರು ಬಳಸುವ ಮೊಬೈಲ್ಗಳನ್ನು ಚಾರ್ಜ್ ಮಾಡಿಸಿಕೊಳ್ಳಲು ಕಷ್ಟಪಡುತ್ತಿದ್ದಾರೆ. ಸೆಸ್ಕ್ ಸಿಬ್ಬಂದಿಗಳಿಗೆ ಹಾಗೂ ಇಂಜಿನಿಯರ್ಗಳಿಗೆ ನಾಗರಿಕರು ನಿರಂತರ ದೂರವಾಣಿ ಕರೆ ಮಾಡುತ್ತಿರುವುದರಿಂದ ಇನ್ನಷ್ಟು ಕಿರಿಕಿರಿ ಉಂಟಾಗುತ್ತಿದೆ. ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಗ್ರಾಹಕರ ದೂರವಾಣಿಯನ್ನು ಸ್ವೀಕರಿಸುವುದೇ ದೊಡ್ಡ ಸವಾಲಾಗಿದೆ. ಒಟ್ಟಿನಲ್ಲಿ ದ. ಕೊಡಗಿನ ವಾಣಿಜ್ಯ ಕೇಂದ್ರ ಗೋಣಿಕೊಪ್ಪ ಸೇರಿದಂತೆ ಉಳಿದ ಪ್ರದೇಶಗಳಲ್ಲಿ ವಿದ್ಯುತ್ ಸಂಪೂರ್ಣ ಕಡಿತಗೊಂಡಿರುವುದರಿAದ ಜನರು ಹೈರಾಣಾಗಿದ್ದಾರೆ. ಕಳೆದ ಹಲವು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಗೋಣಿಕೊಪ್ಪಲು ಉಪ ವಿಭಾಗದ ಎಫ್೫ - ಪಾಲಿಬೆಟ್ಟ ಮತ್ತು ಎಫ್೯ ಹಾತೂರು ಫೀಡರ್ ವ್ಯಾಪ್ತಿಗೆ ಬರುವ ಸುತ್ತಮುತ್ತಲಿನ ವ್ಯಾಪ್ತಿಯಲ್ಲಿ ಹಲವು ವಿದ್ಯುತ್ ಕಂಬಗಳು ಹಾನಿಯಾಗಿವೆ.