ಸಿದ್ದಾಪುರ, ಜು. ೫: ಅಡುಗೆ ಅನಿಲ ಸಿಲಿಂಡರ್ ಸ್ಫೋಟಗೊಂಡು ಮನೆ ಸಂಪೂರ್ಣ ಸುಟ್ಟು ಹೋಗಿರುವ ಘಟನೆ ಸಿದ್ದಾಪುರ ಸಮೀಪದ ಮಾಲ್ದಾರೆ ಬಳಿಯ ಗೂಡ್ಲೂರು ಜನತಾ ಕಾಲೋನಿಯಲ್ಲಿ ಸಂಭವಿಸಿದೆ. ಮಾಲ್ದಾರೆ ಗ್ರಾಮ ಪಂಚಾಯಿತಿ ಮಾಜಿ ಅಧÀ್ಯಕ್ಷೆ ರಾಣಿ ಅಯ್ಯಪ್ಪ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದೆ. ರಾಣಿ ಮಧ್ಯಾಹ್ನ ಅಂದಾಜು ೨.೧೫ಕ್ಕೆ ಮನೆಯ ಅಡುಗೆ ಕೋಣೆಯಲ್ಲಿ ಅಡುಗೆ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಅಡುಗೆ ಅನಿಲ ಸಿಲಿಂಡರ್ನಿAದ ಗ್ಯಾಸ್ ಸೋರಿಕೆ ಆಗುತ್ತಿತ್ತು. ಇದರ ದುರ್ನಾತ ಹೆಚ್ಚಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ರಾಣಿ ಹಾಗೂ ಅವರ ಸೊಸೆ ಅಪಾಯವನ್ನು ಅರಿತು ಮನೆಯ ಹೊರಗಡೆ ಓಡಿ ಬಂದಿದ್ದಾರೆ. ಸ್ವಲ್ಪ ಸಮಯದ ಬಳಿಕ ಸೋರಿಕೆ ಆಗುತ್ತಿದ್ದ ಸಿಲಿಂಡರ್ ಸ್ಫೋಟಗೊಂಡು ಮನೆಯಲ್ಲಿ ಇದ್ದ ವಸ್ತುಗಳು ನಾಶವಾಗಿವೆ. ಅದೃಷ್ಟವಶಾತ್ ರಾಣಿ ಹಾಗೂ ಅವರ ಸೊಸೆ ಮನೆಯಿಂದ ಹೊರಗಡೆ ಬಂದ ಕಾರಣ ಇಬ್ಬರು ಪ್ರಾಣಪಾಯದಿಂದ ಪಾರಾಗಿದ್ದಾರೆ.
ಸಿಲಿಂಡರ್ ಸ್ಫೋಟಗೊಂಡ ಶಬ್ಧ ಕೇಳಿ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಸಿಲಿಂಡರ್ ಸ್ಫೋಟಕ್ಕೆ ಮನೆಯ ಮೇಲ್ಚಾವಣಿಯ ಮರಗಳು, ಹಂಚುಗಳು ನಾಶವಾಗಿವೆ. ಇದಲ್ಲದೇ ಗೋಡೆಗಳು ಬಿರುಕು ಬಿಟ್ಟಿದೆ. ಘಟನಾ ಸ್ಥಳಕ್ಕೆ ಸಿದ್ದಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರುಗಳು ಭೇಟಿ ನೀಡಿದ್ದರು.