ನವದೆಹಲಿ, ಜು. ೬: ರಾಜ್ಯಸಭೆಗೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ಪಿ.ಟಿ. ಉಷಾ, ವಿ. ವಿಜಯೇಂದ್ರ ಪ್ರಸಾದ್ ಮತ್ತು ಇಳಯರಾಜಾ ನಾಮನಿರ್ದೇಶನಗೊಂಡಿದ್ದಾರೆ. ಸಂಸತ್ ಮೇಲ್ಮನೆಗೆ ನಾಮನಿರ್ದೇಶನಗೊಂಡಿರುವ ನಾಲ್ವರೂ ಸದಸ್ಯರಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ಧರ್ಮಸ್ಥಳ ಧರ್ಮಾಧಿಕಾರಿ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ವೀರೇಂದ್ರ ಹೆಗ್ಗಡೆಯವರು ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಧರ್ಮಸ್ಥಳದ ದೇವಸ್ಥಾನದಲ್ಲಿ ಪ್ರಾರ್ಥಿಸಲು, ಆರೋಗ್ಯ, ಶಿಕ್ಷಣ ಮತ್ತು ಸಂಸ್ಕೃತಿ ಕ್ಷೇತ್ರಗಳಲ್ಲಿ ಅವರು ಮಾಡುತ್ತಿರುವ ಮಹತ್ತರವಾದ ಕಾರ್ಯವನ್ನು ವೀಕ್ಷಿಸಲು ನನಗೆ ಅವಕಾಶ ಸಿಕ್ಕಿತು. ಅವರು ಖಂಡಿತವಾಗಿಯೂ ಸಂಸದೀಯ ಕಲಾಪಗಳನ್ನು ಉತ್ಕೃಷ್ಟಗೊಳಿಸುತ್ತಾರೆ ಎಂದು ಟ್ವೀಟ್ ಮಾಡಿದ್ದಾರೆ.
ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ರಾಜೀನಾಮೆ
ನವದೆಹಲಿ, ಜು. ೬: ಉಪರಾಷ್ಟçಪತಿ ಹುದ್ದೆಗಾಗಿ ಎನ್ಡಿಎ ಮುಸ್ಲಿಂ ಸಮುದಾಯದ ಅಭ್ಯರ್ಥಿಯನ್ನು ಕಣಕ್ಕಿಸಲಿದೆ ಎಂಬ ವರದಿಗಳ ಬೆನ್ನಲ್ಲೇ ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರು ಉಪರಾಷ್ಟçಪತಿ ಹುದ್ದೆಗೆ ಸ್ಪರ್ಧಿಸಬಹುದು ಎಂಬ ಊಹಾಪೋಹದ ನಡುವೆ ಇಂದು ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಜೊತೆಗೆ ನಖ್ವಿ ಅವರ ರಾಜ್ಯಸಭಾ ಅವಧಿ ನಾಳೆ ಕೊನೆಗೊಳ್ಳಲಿದೆ. ಅದಾಗ್ಯೂ ಇತ್ತೀಚಿನ ಚುನಾವಣೆಗಳಲ್ಲಿ ಬಿಜೆಪಿ ಅವರನ್ನು ಮತ್ತೊಂದು ಅವಧಿಗೆ ಚುನಾವಣೆಯಲ್ಲಿ ಹೆಸರಿಸಿರಲಿಲ್ಲ. ಇಂದು ಬೆಳಿಗ್ಗೆ ನಖ್ವಿ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿ ಮಾಡಿದರು. ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಮಂತ್ರಿಗಳಾಗಿದ್ದ ರಾಜನಾಥ್ಸಿಂಗ್ ಮತ್ತು ಮುಕ್ತಾರ್ ಅಬ್ಬಾಸ್ ನಖ್ವಿ ಮಾತ್ರ ಪ್ರಧಾನಿ ಮೋದಿಯವರ ಸರ್ಕಾರದಲ್ಲೂ ಮಂತ್ರಿಗಳಾಗಿದ್ದರು. ಆಡಳಿತ ಪಕ್ಷವು ಎರಡನೇ ಅತ್ಯುನ್ನತ ಸಾಂವಿಧಾನಿಕ ಹುದ್ದೆ ಉಪರಾಷ್ಟçಪತಿ ಚುನಾವಣೆಗೆ ಅಲ್ಪಸಂಖ್ಯಾತ ಸಮುದಾಯದ ಪ್ರತಿನಿಧಿಯನ್ನು ಕಣಕ್ಕಿಳಿಸುವ ಬಗ್ಗೆ ಚರ್ಚಿಸುತ್ತಿದೆ. ಮುಕ್ತಾರ್ ಅಬ್ಬಾಸ್ ನಖ್ವಿ ಉಪರಾಷ್ಟçಪತಿ ಹುದ್ದೆಯ ಅಭ್ಯರ್ಥಿಯಾಗುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಅಮಾನತುಗೊಂಡ ಪಕ್ಷದ ವಕ್ತಾರೆ ನೂಪುರ್ ಶರ್ಮಾ ಅವರು ಪ್ರವಾದಿ ಮುಹಮ್ಮದ್ ಅವರ ಬಗ್ಗೆ ಮಾಡಿದ ಕಾಮೆಂಟ್ಗಳಿAದ ಬಿಜೆಪಿ ಸದ್ಯ ಭಾರೀ ಹಿನ್ನಡೆಯನ್ನು ಎದುರಿಸುತ್ತಿದೆ. ಉಪರಾಷ್ಟçಪತಿಯಾಗಿ ಎಂ. ವೆಂಕಯ್ಯ ನಾಯ್ಡು ಅವರ ಅವಧಿ ಆಗಸ್ಟ್ ೧೦ ರಂದು ಕೊನೆಗೊಳ್ಳುತ್ತದೆ.
ಚಾಮುಂಡಿ ಬೆಟ್ಟಕ್ಕೆ ರೋಪ್ವೇ ಪ್ರಸ್ತಾವನೆ ಕೈಬಿಡಲು ನಿರ್ಧಾರ
ಮೈಸೂರು, ಜು. ೬: ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ನಿರ್ಮಾಣ ಮಾಡುವ ಪ್ರಸ್ತಾವನೆಯನ್ನು ಕೈಬಿಡಲು ಜಿಲ್ಲಾಡಳಿತ ನಿರ್ಧರಿಸಿದ್ದು, ಈ ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಪರಿಸರವಾದಿಗಳಿಗೆ ಜಯ ಸಿಕ್ಕಂತಾಗಿದೆ. ಚಾಮುಂಡಿ ಬೆಟ್ಟಕ್ಕೆ ರೋಪ್ವೇ ಬೇಡ ಎಂಬ ಅಭಿಪ್ರಾಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಂದ ವ್ಯಕ್ತವಾಗಿದೆ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಅವರು ಬುಧವಾರ ಹೇಳಿದ್ದಾರೆ. ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಕುರಿತು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯ ಬಳಿಕ ಮಾತನಾಡಿದ ಸಚಿವರು, ಮುಖ್ಯಮಂತ್ರಿಗಳು ಬಜೆಟ್ನಲ್ಲಿ ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ಬಗ್ಗೆ ಪ್ರಸ್ತಾಪಿಸಿದ್ದರು. ಈ ಸಂಬAಧ ಇಂದು ನಡೆದ ಸಭೆಯಲ್ಲಿ ರೋಪ್ ವೇ ಬೇಡ ಎಂಬ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಈ ಕುರಿತು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದರು. ಚಾಮುಂಡೇಶ್ವರಿಯ ದರ್ಶನ ಪಡೆದು ಆಕೆಯ ಕೃಪೆಗೆ ಪಾತ್ರರಾಗಲು ಬೆಟ್ಟಕ್ಕೆ ಆಗಮಿಸುತ್ತಾರೆ. ಇಲ್ಲಿಗೆ ಆಗಮಿಸುವವರು ಬಹುತೇಕರು ಭಕ್ತರು. ಹೀಗಾಗಿ ಬೆಟ್ಟಕ್ಕೆ ತೆರಳಲು ಅವರಿಗೆ ಸಾಕಷ್ಟು ಅನುಕೂಲ ಕಲ್ಪಿಸಿರುವುದರಿಂದ ರೋಪ್ ವೆ ಅಗತ್ಯವಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಯಿತು ಎಂದು ಸಚಿವರು ಹೇಳಿದರು. ಬೆಟ್ಟಕ್ಕೆ ಪ್ರವಾಸಿಗರಿಗಿಂತ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲಿದ್ದಾರೆ. ಕಾಲ್ನಡಿಗೆಯಲ್ಲಿ, ವಾಹನಗಳ ಮೂಲಕ ಬೆಟ್ಟಕ್ಕೆ ತೆರಳಲು ಅನುಕೂಲ ಕಲ್ಪಿಸಲಾಗಿದೆ. ಉತ್ತಮ ರಸ್ತೆ ಕೂಡ ಇರುವುದರಿಂದ ರೋಪ್ ವೇ ಬೇಡ ಎಂದು ಸಭೆಯಲ್ಲಿದ್ದವರು ಹೇಳಿದರು.
ಹೆಣ್ಣು ಮಕ್ಕಳಿಗೆ ಉಚಿತ ಮುಟ್ಟಿನ ಕಪ್ ವಿತರಿಸಲು ಚಿಂತನೆ
ಚಾಮರಾಜನಗರ, ಜು. ೬: ರಾಜ್ಯದ ಪ್ರತಿ ಹೆಣ್ಣು ಮಕ್ಕಳಿಗೆ ಉಚಿತವಾಗಿ ಮೈತ್ರಿ ಮುಟ್ಟಿನ ಕಪ್ಗಳನ್ನು ನೀಡುವ ಚಿಂತನೆ ಸರ್ಕಾರಕ್ಕಿದೆ. ಪ್ರಾಯೋಗಿಕ ಯೋಜನೆ ಪೂರ್ಣಗೊಂಡ ಬಳಿಕ ಈ ಕ್ರಮ ವಹಿಸಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹೇಳಿದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಬಿಳಿಗಿರಿರಂಗನ ಬೆಟ್ಟದ ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರದಲ್ಲಿ ಏರ್ಪಡಿಸಿದ್ದ, ಮೈತ್ರಿ ಮುಟ್ಟಿನ ಕಪ್- ಶುಚಿ ಯೋಜನೆಯ' ರಾಜ್ಯಮಟ್ಟದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮುಟ್ಟು ಎನ್ನುವುದು ಹೆಣ್ಣು ಮಕ್ಕಳಿಗೆ ಪ್ರತಿ ತಿಂಗಳು ಸಹಜವಾಗಿ ಆಗುವ ಪ್ರಕ್ರಿಯೆ. ಶೇ. ೭೦ ರಷ್ಟು ಹೆಣ್ಣುಮಕ್ಕಳು ಹಾಗೂ ತಾಯಂದಿರು ಇದನ್ನು ಹೇಳಿಕೊಳ್ಳಲು ಈಗಲೂ ಮುಜುಗರಪಡುತ್ತಾರೆ. ಹದಿಹರೆಯದ ಹೆಣ್ಣು ಮಕ್ಕಳು ಈ ವಿಚಾರದಲ್ಲಿ ಆತಂಕಕ್ಕೊಳಗಾಗಬಾರದು, ನಾಚಿಕೆ ಪಟ್ಟುಕೊಳ್ಳಬಾರದು. ಇಂದಿನ ಆಧುನಿಕ ಸ್ಯಾನಿಟರಿ ಪ್ಯಾಡ್ಗಳಲ್ಲಿ ಪ್ಲಾಸ್ಟಿಕ್ ಇರುವುದರಿಂದ, ಅದು ಮಣ್ಣಿನಲ್ಲಿ ಕರಗಲು ೬೦೦-೮೦೦ ವರ್ಷಗಳು ಬೇಕಾಗುತ್ತವೆ. ಆದರೆ ಈ ಮುಟ್ಟಿನ ಕಪ್ಗಳು ಪರಿಸರ ಸ್ನೇಹಿಯಾಗಿವೆ. ಒಂದು ಕಪ್ ಅನ್ನು ೬ ರಿಂದ ೧೦ ವರ್ಷಗಳ ಕಾಲ ಬಳಸಬಹುದು. ಇದರಿಂದ ಹಣವೂ ಉಳಿತಾಯವಾಗುತ್ತದೆ. ರಾಜ್ಯ ಸರ್ಕಾರ ಪ್ರತಿ ಹೆಣ್ಣು ಮಕ್ಕಳಿಗೆ ಇದನ್ನು ಉಚಿತವಾಗಿ ನೀಡಲು ಚಿಂತಿಸಿದೆ. ಋತುಚಕ್ರದ ವೇಳೆ ಸ್ವಚ್ಛತೆ ಕಾಪಾಡಿಕೊಳ್ಳುವುದು ಅತಿ ಅಗತ್ಯ. ಹಿಂದೆ ಹೆಣ್ಣುಮಕ್ಕಳು ಮುಟ್ಟಿನ ವೇಳೆ ಬಟ್ಟೆ ಬಳಸುತ್ತಿದ್ದು, ಅದು ಸುರಕ್ಷಿತವಾಗಿರಲಿಲ್ಲ. ಹೆಣ್ಣುಮಕ್ಕಳು ಸಾಮಾನ್ಯವಾಗಿ ಸ್ಯಾನಿಟರಿ ಪ್ಯಾಡ್ ಬಳಸುತ್ತಾರೆ. ಆದರೆ ಸ್ಯಾನಿಟರಿ ಪ್ಯಾಡ್ನಿಂದ ಕಸದ ಸಮಸ್ಯೆ ಹೆಚ್ಚಾಗಿದೆ ಹಾಗೂ ಇದು ಪರಿಸರಕ್ಕೆ ಹಾನಿಯಾಗುತ್ತದೆ. ಅಲ್ಲದೆ, ಹೆಣ್ಣುಮಕ್ಕಳು ಅನೇಕ ಬಾರಿ ಪ್ಯಾಡ್ ಬದಲಿಸಬೇಕಾಗುತ್ತದೆ. ಸರ್ಕಾರ ನೀಡುತ್ತಿರುವ ಮುಟ್ಟಿನ ಕಪ್ಗಳು ಈ ಸಮಸ್ಯೆಗಳನ್ನು ನಿವಾರಿಸಲಿದೆ ಎಂದರು.
ಸಿಐಡಿಯಿAದ ೧,೯೦೦ ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ
ಕಲಬುರಗಿ, ಜು. ೬: ಪಿಎಸ್ಐ ನೇಮಕಾತಿ ಹಗರಣದ ತನಿಖೆ ನಡೆಸುತ್ತಿರುವ ಸಿಐಡಿ, ಜೆಎಂಎಫ್ಸಿ ಕೋರ್ಟ್ಗೆ ೧,೯೦೦ ಪುಟಗಳ ಚಾರ್ಜ್ ಶೀಟ್ನ್ನು ಸಲ್ಲಿಸಿದೆ. ಹಿರಿಯ ಪೊಲೀಸ್ ಅಧಿಕಾರಿಗಳು, ಕಿಂಗ್ ಪಿನ್, ಅಭ್ಯರ್ಥಿಗಳು ಸೇರಿ ಒಟ್ಟು ೩೪ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಪಬ್ಲಿಕ್ ಪ್ರಾಸಿಕ್ಯೂಟರ್ ಶಿವಶರಣಪ್ಪ ನ್ಯಾಯಾಧೀಶರಾದ ಶ್ರೀನಿವಾಸ್ ಕೆಆರ್ ಅವರಿದ್ದ ಪೀಠದ ಎದುರು ಚಾರ್ಜ್ ಶೀಟ್ನ್ನು ಸಲ್ಲಿಸಿದ್ದು, ವೀರೇಶ್, ಚೇತನ್ ನಂದಗಾAವ್, ಪ್ರವೀಣ್ ಕುಮಾರ್, ಅರುಣ್ ಕುಮಾರ್ ಹಲ್ಸುಲ್ತಾನ್ ಪುರ (ಎಲ್ಲಾ ಅಭ್ಯರ್ಥಿಗಳು), ಸಾವಿತ್ರಿ, ಸುಮಾ, ಸಿದ್ದಮ್ಮ, ಅರ್ಚನಾ ಶಿವಕುಮಾರ್ ಹಾಗೂ ಸುನಂದ ಅಲಿಯಾಸ್ ಸುನಿತಾ (ಎಲ್ಲಾ ಶಿಕ್ಷಕರು) ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಚಾರ್ಜ್ ಶೀಟ್ನಲ್ಲಿ ಅಭ್ಯರ್ಥಿ ವೀರೇಶ್ನ್ನು ಮುಖ್ಯ ಆರೋಪಿಯನ್ನಾಗಿಸಲಾಗಿದೆ. ಎಲ್ಲಾ ಆರೋಪಿಗಳ ವಿರುದ್ಧ ಪರೀಕ್ಷಾ ಅಪರಾಧಗಳ ಆರೋಪವನ್ನು ಹೊರಿಸಲಾಗಿದೆ.
ಪಿಯುಸಿ ಕಾಲೇಜು ಅತಿಥಿ ಉಪನ್ಯಾಸಕರ ಗೌರವ ಧನ ಹೆಚ್ಚಳ
ಬೆಂಗಳೂರು, ಜು. ೬: ಸರ್ಕಾರಿ ಪಿಯು ಕಾಲೇಜುಗಳ ಅತಿಥಿ ಉಪನ್ಯಾಸಕರ ಗೌರವ ಸಂಭಾವನೆಯನ್ನು ಪರಿಷ್ಕರಣೆ ಮಾಡಲಾಗಿದೆ. ಪಿಯು ಕಾಲೇಜುಗಳ ಅತಿಥಿ ಉಪನ್ಯಾಸಕರ ವೇತನವನ್ನು ೯ ಸಾವಿರದಿಂದ ೧೨ ಸಾವಿರಕ್ಕೆ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ. ಇನ್ನು ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಕಾಲೇಜುಗಳಲ್ಲಿ ಉಪನ್ಯಾಸಕರ ಕೊರತೆಯನ್ನು ನೀಗಿಸಲು ೩ ಸಾವಿರದ ೭೦೮ ಅತಿಥಿ ಉಪನ್ಯಾಸಕರ ಸೇವೆಯನ್ನು ಪಡೆಯಲಾಗುವುದು ಎಂದು ಸಹ ತಿಳಿಸಿದ್ದಾರೆ.