ಚೆಟ್ಟಳ್ಳಿ, ಜು. ೬: ಸಿ.ವೈ.ಸಿ. ಯೂತ್ ಕ್ಲಬ್ ಚೆರಿಯಪರಂಬು ಇವರ ಆಶ್ರಯದಲ್ಲಿ ಸ್ಥಳೀಯ ಹಳೆ ತಾಲೂಕು ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ ಸುಲ್ತಾನ್ ಕಪ್ ಕಾಲ್ಚೆಂಡು ಪ್ರೀಮಿಯರ್ ಲೀಗ್ ಪಂದ್ಯಾವಳಿಯ ಫೈನಲ್ ಪಂದ್ಯಾಟದಲ್ಲಿ ಲಕ್ಕೀ ಬಾಯ್ಸ್ ಕುಂಜಿಲ ತಂಡ ಕಿಪ್ಸ್ಟಾ ಮೂರ್ನಾಡು ತಂಡವನ್ನು ಮಣಿಸಿ ನಗದು ಮತ್ತು ಆಕರ್ಷಕ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ಮೂರ್ನಾಡು ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
ಕಳೆದ ಎರಡು ದಿನಗಳಿಂದ ನಡೆದ ಪಂದ್ಯಾವಳಿಯಲ್ಲಿ ಸುಮಾರು ೧೬ ತಂಡಗಳು ಬಾಗವಹಿಸಿದ್ದವು, ಪಂದ್ಯಾವಳಿಯಲ್ಲಿ ಉತ್ತಮ ಡಿಫೆಂಡರ್ ಪ್ರಶಸ್ತಿಯನ್ನು ಮೂರ್ನಾಡು ತಂಡದ ಅಫ್ಸಲ್ ಪಡೆದುಕೊಂಡರು. ಉತ್ತಮ ಆಟಗಾರನಾಗಿ ಲಕ್ಕೀ ಬಾಯ್ಸ್ ಕುಂಜಿಲ ತಂಡದ ಸವಾದ್, ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಕುಂಜಿಲ ತಂಡದ ಮಹಮೂದ್ ಆಯ್ಕೆಯಾದರು. ಪಂದ್ಯಾವಳಿಯಲ್ಲಿ ಉತ್ತಮ ಗೋಲ್ ಕೀಪರ್ ಆಗಿ ೭ ಸ್ಟಾರ್ ಕಡಂಗ ತಂಡದ ಅಶ್ರಫ್ ಬಹುಮಾನ ಪಡೆದರು.
ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ನಾಪೋಕ್ಲು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಪರವಂಡ ಸಿರಾಜ್, ಷಂಶುದ್ದೀನ್ ಕುಂಜಿಲ, ಅಫೀಲ್ ಚೆರಿಯಪರಂಬು, ಅಲ್ತಾಫ್, ರಫೀಕ್ ಕೊಟ್ಟಮುಡಿ, ಹರ್ಷಾದ್ ಹಳೆ ತಾಲೂಕು, ಆಯೋಜಕರಾದ ಸಮೀರ್, ಸಲಾಂ, ಮತ್ತಿತರರು ಹಾಜರಿದ್ದರು.