ಕಣಿವೆ, ಜು.೪ : ಕನ್ನಡ ಸಾಹಿತ್ಯ ಚಟುವಟಿಕೆಗಳನ್ನು ಶಾಲಾ ಕಾಲೇಜುಗಳ ಮಕ್ಕಳೆಡೆಗೆ ಕೊಂಡೊಯ್ಯುವ ಮೂಲಕ ಸಾಹಿತ್ಯದ ಅರಿವನ್ನು ಮಕ್ಕಳ ಮೂಲಕ ಸಮಾಜದಲ್ಲಿ ಮೂಡಿಸಬೇಕೆಂದು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಎಂ.ಪಿ.ಕೇಶವ ಕಾಮತ್ ಕರೆ ಕೊಟ್ಟರು.ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಕಚೇರಿಯಲ್ಲಿ ಹಮ್ಮಿಕೊಂಡಿದ್ದ ವಿಶೇಷ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜಿಲ್ಲೆಯಾದ್ಯಂತ ಕನ್ನಡ ಸಾಹಿತ್ಯ ಪರ ಚಟುವಟಿಕೆಗಳನ್ನು ನಿರಂತರವಾಗಿ ಹಮ್ಮಿಕೊಳ್ಳಬೇಕೆಂದು ತಾಲೂಕು ಘಟಕಗಳ ಅಧ್ಯಕ್ಷರಿಗೆ ಸೂಚಿಸಲಾಗಿದೆ. ಹಾಗೆಯೇ ಪರಿಷತ್ತಿನ ಜಿಲ್ಲಾ ಸಮಿತಿಯಿಂದ ತಾಲೂಕುಗಳಿಗೆ ನೀಡಿರುವ ವಾರ್ಷಿಕ ದತ್ತಿ ಕಾರ್ಯಕ್ರಮಗಳನ್ನು ಸಕಾಲದಲ್ಲಿ ನಡೆಸಬೇಕು. ಹತ್ತನೇ ತರಗತಿ ವಾರ್ಷಿಕ ಪರೀಕ್ಷೆಯ ಕನ್ನಡ ವಿಷಯದಲ್ಲಿ ಅತ್ಯಧಿಕ ಅಂಕ ಗಳಿಸಿರುವ ವಿದ್ಯಾರ್ಥಿಗಳು ಹಾಗೂ ಶೇ. ೧೦೦ ಫಲಿತಾಂಶ ಗಳಿಸಿರುವ ಸರ್ಕಾರಿ ಕನ್ನಡ ಶಾಲೆಗಳನ್ನು ಗೌರವಿಸುವ ಬಗ್ಗೆ ತಿಳಿಸಿದರು.

ಪರಿಷತ್ತಿನ ಮಾಜಿ ಜಿಲ್ಲಾಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ಶಾಲಾ ಕಾಲೇಜುಗಳು ತೆರೆದುಕೊಂಡಿರುವುz Àರಿಂದ ಸಾಹಿತ್ಯದ ಚಟುವಟಿಕೆಗಳನ್ನು ಶಾಲೆಗಳ ಮಕ್ಕಳೆಡೆಗೆ ಒಯ್ಯುವ ಮೂಲಕ ಸಾಹಿತ್ಯ ಚಟುವಟಿಕೆಗಳಿಗೆ ವೇಗ ನೀಡಬೇಕಿದೆ. ಹಾಗೆಯೇ ಸದಸ್ಯತ್ವ ಆಂದೋಲನವನ್ನು ಜಿಲ್ಲಾದ್ಯಂತ ಹಮ್ಮಿಕೊಳ್ಳಬೇಕಿದೆ.

ಕುಶಾಲನಗರದಲ್ಲಿ ಅಪೂರ್ಣ ಗೊಂಡಿರುವ ಕಲಾಭವನ ಕಾಮಗಾರಿ ಪೂರ್ಣಗೊಳಿಸಲು ಜಿಲ್ಲಾಧಿಕಾರಿಗಳ ಬಳಿ ಪರಿಷತ್ತು ವತಿಯಿಂದ ನಿಯೋಗ ತೆರಳಿ ಮನವಿ ಮಾಡಬೇಕೆಂದು ಹೇಳಿದರು.

ಕುಶಾಲನಗರ ತಾಲೂಕು ಸಾಹಿತ್ಯ ಪರಿಷತ್ತಿನ ಸಲಹೆಗಾರ ವಿ.ಪಿ.ಶಶಿಧರ್, ಕುಶಾಲನಗರ ತಾಲೂಕು ಅಧ್ಯಕ್ಷ ಕೆ.ಎಸ್.ಮೂರ್ತಿ, ಗೌರವ ಕಾರ್ಯದರ್ಶಿ ಎಸ್.ನಾಗರಾಜು, ಕೋಶಾಧಿಕಾರಿ ಹೆಚ್.ವಿ.ಉಮೇಶ್, ಜಿಲ್ಲಾ ಸಮಿತಿ ನಿರ್ದೇಶಕ ಮೆ.ನಾ. ವೆಂಕಟನಾಯಕ್, ಫ್ಯಾನ್ಸಿ ಮುತ್ತಣ್ಣ, ಎಂ.ಇ.ಮೊಹಿದ್ದೀನ್, ಕೆ.ಎಸ್. ಮಹೇಶ್, ಟಿ.ಜಿ.ಪ್ರೇಮಕುಮಾರ್, ಸುಲೇಮಾನ್, ಹಾ.ತಿ.ಜಯಪ್ರಕಾಶ್ ಸೇರಿದಂತೆ ಪರಿಷತ್ತಿನ ತಾಲೂಕು ನಿರ್ದೇಶಕರು ಇದ್ದರು.

ಸಭೆಯ ಆರಂಭದಲ್ಲಿ ಇತ್ತೀಚೆಗೆ ನಿಧನರಾದ ಸಾಹಿತ್ಯ ಪರಿಷತ್ತಿನ ಸಲಹೆಗಾರ ಮನುಶೆಣೈ ಅವರ ನಿಧನಕ್ಕೆ ಸಭೆಯಲ್ಲಿ ಸಂತಾಪ ಸೂಚಿಸಲಾಯಿತು. ಹಾಗೆಯೇ ಕೊಡಗು ಪತ್ರಿಕಾ ಭವನ ಟ್ರಸ್ಟಿನ ಅಧ್ಯಕ್ಷರಾಗಿ ನೇಮಕಗೊಂಡ ಪರಿಷತ್ತಿನ ಜಿಲ್ಲಾಧ್ಯಕ್ಷ ಎಂ.ಪಿ.ಕೇಶವ ಕಾಮತ್ ಅವರನ್ನು ತಾಲೂಕು ಪರಿಷತ್ತು ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.