ಕಣಿವೆ, ಜು. ೪: ಪ್ರತಿ ವರ್ಷದಂತೆ ಈ ಬಾರಿಯು ಮಳೆಗಾಲ ಬಂದಿದೆ. ಅದರಲ್ಲೂ ಜುಲೈ ಮಾಸದ ಪ್ರಾರಂಭದಲ್ಲಿ ಆರಂಭಗೊAಡ ಮಳೆಗಾಲ ಪಶ್ಚಿಮ ಕೊಡಗಿನ ವಾಸಿಗಳಿಗೆ ಪದೇ ಪದೇ ಘಟಿಸುತ್ತಿರುವ ಭೂಕಂಪನದ ಆತಂಕವನ್ನು ಒಡ್ಡಿದರೆ ಪೂರ್ವ ಕೊಡಗಿನ ನದಿ ತೀರದ ವಾಸಿಗಳಲ್ಲಿ ನೆರೆಯ ಭೀತಿಯನ್ನು ಮೂಡಿಸಿದೆ. ಕಳೆದ ಮೂರು ವರ್ಷಗಳಿಂದ ಆಗಸ್ಟ್ ತಿಂಗಳಲ್ಲಿ ಕಾವೇರಿ ನದಿಯಲ್ಲಿ ಪ್ರವಾಹ ಸೃಷ್ಟಿಯಾಗಿ ಜನರ ನೆಮ್ಮದಿಗೆ ಭಂಗ ತಂದಿತ್ತು. ಆದರೆ ಈ ಬಾರಿ ಆಗಸ್ಟ್ ಆತಂಕ ಜುಲೈ ಮಾಸದ ಆರಂಭದಲ್ಲೇ ಶುರುವಾದಂತಿದೆ.
ಹಾರAಗಿ ಜಲಾಶಯ ಮಳೆಗಾಲದ ಆರಂಭದಲ್ಲೇ ಭರ್ತಿಯಾಗಿ ಹೆಚ್ಚುವರಿ ನೀರು ನದಿಯಲ್ಲಿ ಪ್ರವಹಿಸುತ್ತಿರುವ ಹಿನ್ನೆಲೆಯಲ್ಲಿ ಅತೀವವಾಗಿ ಸುರಿಯುತ್ತಿರುವ ಮಳೆಯ ನೀರು ಹೆಚ್ಚಳವಾಗಿ ನದಿಯ ಇಕ್ಕೆಲಗಳಲ್ಲಿ ಪ್ರವಾಹ ಮತ್ತೆ ಎಲ್ಲಿ ಕಾವೇರುತ್ತಿದೆಯೋ ಎಂಬ ಆತಂಕ ನದಿ ತೀರದ ತಗ್ಗು ಪ್ರದೇಶದ ವಾಸಿಗಳಲ್ಲಿ ಮನೆ ಮಾಡಿದೆ.
ಕೊಡಗು ಜಿಲ್ಲೆಗೆ ಮಳೆ ಹೊಸದೇನಲ್ಲ. ಜೂನ್ನಿಂದ ಅಕ್ಟೋಬರ್ವರೆಗೂ ಅಬ್ಬರಿಸಿ ಬೊಬ್ಬಿರಿದು ಸುರಿವ ಮಳೆಯ ಜೊತೆಗಿನ ಬದುಕು ಜಿಲ್ಲೆಯ ಮಂದಿಗೆ ಸಾಮಾನ್ಯ.
ಆದರೆ ೨೦೧೮ ರಿಂದ ಈಚೆಗೆ ಮಳೆಗಾಲ ಬಂದರೆ ಸಾಕು ಪ್ರವಾಹ ಸೃಷ್ಟಿಸುವ ಮಹಾ ಆತಂಕದಲ್ಲಿ ನಡುಗಿಸುವ ಜಡಿಮಳೆಯ ಕೊರೆವ ಚಳಿಯಲ್ಲೂ ಇಲ್ಲಿನ ಮಂದಿ ಬೆವರುತ್ತಾರೆ.
೨೦೧೮ ರಲ್ಲಿ ಆಗಸ್ಟ್ ೧೩ ರಿಂದ ಶುರುವಾದ ವರುಣನ ಅಬ್ಬರ ಆಗಸ್ಟ್ ೧೫ ರ ಸಂಭ್ರಮದ ದಿನದ ಸಡಗರಕ್ಕೂ ಕುತ್ತು ತಂದಿತ್ತು. ಅದೇ ವರ್ಷದ ಆಗಸ್ಟ್ ೧೭ರವರೆಗೂ ಮುಂದುವರೆದಿದ್ದ ಮಳೆಗೆ ಮಡಿಕೇರಿ ತಾಲೂಕಿನ ೬ ಗ್ರಾಮಗಳಲ್ಲಿ ಪ್ರಕೃತಿ ವಿಕೋಪ ಎದುರಾಯಿತು. ಕುಶಾಲನಗರ ಮುಳ್ಳುಸೋಗೆ ಭಾಗದ ನದಿ ತೀರದ ನೂರಾರು ಮನೆಗಳಿಗೆ ಪ್ರವಾಹ ಸ್ಥಿತಿ ನಿರ್ಮಾಣಗೊಂಡು ಇಲ್ಲಿನ ಅಷ್ಟೂ ಜನರ ನೆಮ್ಮದಿ ನಿರ್ನಾಮವಾಗಿತ್ತು.
೨೦೧೯ ರಲ್ಲಿ ಆಗಸ್ಟ್ ೭ರಿಂದಲೇ ಶುರುವಾಗಿದ್ದ ಭಾರೀ ಮಳೆ ಆಗಸ್ಟ್ ೧೩ ರ ತನಕವೂ ಅಬ್ಬರಿಸಿತ್ತು.
ವೀರಾಜಪೇಟೆ ತಾಲೂಕಿನ ತೋರ ಗ್ರಾಮದಲ್ಲಿ ಬೆಟ್ಟ ಕುಸಿದು ೧೦ ಮಂದಿ ಮತ್ತು ಮಡಿಕೇರಿ ತಾಲೂಕಿನ ಕೋರಂಗಾಲದಲ್ಲಿ ಮನೆ ಮೇಲೆ ಗುಡ್ಡ ಕುಸಿದು ಐವರು ಸೇರಿದಂತೆ ಒಟ್ಟು ೧೭ ಮಂದಿ ಮೃತಪಟ್ಟಿದ್ದರು.
ಪ್ರವಾಹದಿಂದಾಗಿ ಅದೇ ವರ್ಷ ೧೦೦೦ಕ್ಕೂ ಅಧಿಕ ಕುಟುಂಬಗಳು ಮನೆ ಕಳೆದುಕೊಂಡಿದ್ದವು. ೨೦೨೦ ರಲ್ಲಿ ಮತ್ತೆ ಆಗಸ್ಟ್ ಮಳೆಯೇ ಕೊಡಗಿಗೆ ಶಾಪವಾಗಿ ಪರಿಣಮಿಸಿತ್ತು.
ತಲಕಾವೇರಿಯ ಗಜಗಿರಿ ಬೆಟ್ಟ ಕುಸಿದು ಅರ್ಚಕ ಕುಟುಂಬದ ಮೂವರು ಸೇರಿ ಒಟ್ಟು ಐವರು ಭೂ ಸಮಾಧಿಯಾಗಿದ್ದರು.
ಕಾವೇರಿ, ಹಾರಂಗಿ, ಲಕ್ಷ್ಮಣ ತೀರ್ಥ, ಸೇರಿದಂತೆ ಇತರ ಸಣ್ಣ ಪುಟ್ಟ ತೊರೆ, ಹಳ್ಳ ಕೊಳ್ಳಗಳಲ್ಲಿ ಏರ್ಪಟ್ಟ ಪ್ರವಾಹದಿಂದಾಗಿ
(ಮೊದಲ ಪುಟದಿಂದ) ಜೀವ ಹಾನಿಯ ಜೊತೆಗೆ ಅಪಾರ ಪ್ರಮಾಣದ ಸ್ವತ್ತು ಹಾನಿಯಾಗಿತ್ತು.
ಹಾಗೆಯೇ ೨೦೨೧ ರಲ್ಲೂ ಅದೇ ಆಗಸ್ಟ್ನಲ್ಲಿ ಮಳೆಯ ಆತಂಕ ಎಂದಿನAತೆಯೇ ಮುಂದುವರೆದಿತ್ತಾದರೂ ಅಷ್ಟಾಗಿ ಹಾನಿ ಮಾಡಿರಲಿಲ್ಲ.
ಆದರೆ ಈ ಬಾರಿ ಆಗಸ್ಟ್ಗೂ ಒಂದು ತಿಂಗಳು ಮುನ್ನಾ ಜುಲೈ ನಲ್ಲೇ ಸುರಿಯುತ್ತಿರುವ ಮಳೆ ಭೂಕಂಪನದ ಭಾರೀ ಸದ್ದಿನೊಂದಿಗೆ ನದಿಗಳ ಪ್ರವಾಹ ಉಕ್ಕೇರುವಂತೆ ಮಾಡುತ್ತಿದೆ.
ಹಾಗಾಗಿ ಕುಶಾಲನಗರ ಭಾಗದ ಬಹುತೇಕ ನದಿ ತೀರದ ವಾಸಿಗಳಲ್ಲಿ ರಾತ್ರಿ ನಿದ್ರೆ ಮಾಯವಾಗುತ್ತಿದ್ದು ನದಿ ನೀರಿನ ಮಟ್ಟದ ಏರಿಕೆಯ ಮೇಲೆ ಕಣ್ಣೋಟ ಹರಿಸುವಂತಾಗಿದೆ.
ಈ ಹಿಂದಿನ ಸತತ ಮೂರು ವರ್ಷಗಳಲ್ಲಿ ಆದ ಪ್ರವಾಹದ ಸ್ಥಿತಿ ಗತಿ ಗಳಿಂದ ನಷ್ಟಕ್ಕೆ ತುತ್ತಾದ ಮಂದಿ ಇದೀಗ ಕೆಲವರು ಬದಲೀ ಸುರಕ್ಷಿತ ಮನೆಗಳನ್ನು ಬಾಡಿಗೆಗೆ ಪಡೆದುಕೊಂಡರೆ, ಹಣವುಳ್ಳ ಮಂದಿ ಎತ್ತರದ ಪ್ರದೇಶಗಳಲ್ಲಿ ಮಳೆಗಾಲಕ್ಕೊಂದು ಮನೆ ಇರಲಿ ಎಂಬAತೆ ಬದಲಿ ವ್ಯವಸ್ಥೆ ಮಾಡಿಕೊಂಡಿರುವುದು ಇದೆ.
ಇನ್ನೂ ಹಲವರು ವರ್ಷದ ೯ ತಿಂಗಳು ವಾಸವಿರುವ ಅದೇ ಮನೆಯಲ್ಲಿಯೇ ಜೀವವನ್ನು ಕೈಯಲ್ಲಿ ಹಿಡಿದು ಕಾವೇರಮ್ಮನಿಗೆ ಕರ ಜೋಡಿಸಿ ಪ್ರಾರ್ಥಿಸುತ್ತಾ ಈ ಬಾರಿಯಾದರೂ ಪ್ರವಾಹ ಬಾರದಂತೆ ನಮ್ಮ ಮನೆ - ಮಠಗಳನ್ನು ಕಾಪಾಡು ಎಂದು ಪ್ರಾರ್ಥಿಸುತ್ತಿದ್ದಾರೆ.
ಒಟ್ಟಾರೆ ಮಳೆಯು ಬರಲಿ, ನದಿಯ ತುಂಬಾ ನೀರೂ ಹರಿಯಲಿ.
ಆದರೆ ಪ್ರವಾಹ ಏರ್ಪಟ್ಟು ನದಿ ತೀರದ ಮನೆಗಳನ್ನು ಆವರಿಸುವ ಸ್ಥಿತಿ ಬಾರದಿರಲಿ ಎಂಬುದು ನಮ್ಮೆಲ್ಲರ ಪ್ರಾರ್ಥನೆ. -ವಿಶೇಷ ವರದಿ : ಕೆ.ಎಸ್.ಮೂರ್ತಿ